ಶೌಚಾಲಯ ವ್ಯವಸ್ಥೆಯಿಲ್ಲದೇ ಕ್ರೀಡಾಕೂಟ ಹಮ್ಮಿಕೊಂಡ ಶಿಕ್ಷಣ ಇಲಾಖೆ: ಬಾಲಕಿಯರ ಪರದಾಟ

0
4
loading...

ದೀಪಕ ಶೆಟ್ಟಿ
ಕಾರವಾರ: ಭರ್ಜರಿ ಮಳೆಗಾಲದ ಸಮಯದಲ್ಲಿ ಅದೂ ಮೈದಾನದಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆಗಳಿಲ್ಲದೆ ಬಾಲಕಿಯರ ಕ್ರೀಡಾಕೂಟ ಏರ್ಪಡಿಸಿರುವ ಶಿಕ್ಷಣ ಇಲಾಖೆಯ ಕ್ರಮ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೆ.7ರವರೆಗೆ ವಲಯ ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿದೆ. ವಿವಿಧ ಶಾಲೆಯ ಸರಿಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಅದರಲ್ಲಿ ಸುಮಾರು ಅರ್ಧದಷ್ಟು ಬಾಲಕಿಯರಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಮೈದಾನದಲ್ಲೆಲ್ಲೂ ಶೌಚಾಲಯವಿಲ್ಲ. ಈ ಹಿಂದೆ ಕ್ರೀಡಾಕೂಟಕ್ಕೆ ಬಂದ ಬಾಲಕ ಹಾಗೂ ಬಾಲಕಿಯರು ಮೈದಾನದ ಪಕ್ಕದಲ್ಲಿಯೇ ಇರುವ ಶಿಕ್ಷಣ ಇಲಾಖೆಗೆ ಸೇರಿದ ಗುರುಭವನದ ಶೌಚಾಲಯವನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಮಂಗಳವಾರ ಶಿಕ್ಷಣ ಇಲಾಖೆಯವರು ಈ ಗುರುವಭವನದ ಗೇಟ್‌ಗೆ ಹಾಗೂ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ. ಇದು ಕ್ರೀಡಾಕೂಟಕ್ಕೆ ಬಂದ ಬಾಲಕಿಯರಿಗೆ ಹಾಗೂ ಶಾಲಾ ಬಾಲಕಿಯರೊಂದಿಗೆ ಬಂದಂಥ ಶಿಕ್ಷಕಿಯರಿಗೂ ಕಿರಿಕಿರಿಯನ್ನುಂಟು ಮಾಡಿದ್ದು ಅವರ ಪಾಡು ಹೇಳತೀರದಂತಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಾಲಕಿಯರಾದ ನಾಗಶ್ರೀ, ಪೂನಂ ಎಂಬಿಬ್ಬರು ಈ ಬಗ್ಗೆ ಮಾತನಾಡಿ, ಇಂಥ ಕ್ರೀಡಾಕೂಟಗಳನ್ನು ಏರ್ಪಡಿಸಿದಾಗ ಕನಿಷ್ಠ ಪಕ್ಷ ಬಾಲಕಿಯರಿಗಾಗಿಯಾದರೂ ಶಿಕ್ಷಣ ಇಲಾಖೆಯವರು ಗುರುಭವನದ ಬಾಗಿಲನ್ನು ತೆರೆದಿಡಬೇಕು. ಶೌಚಾಲಯಕ್ಕೆ ನಾವೀಗ ಇಲ್ಲೇ ಸ್ವಲ್ಪ ದೂರದಲ್ಲಿರುವ ಸರ್ಕಾರಿ ಶಾಲೆಗೆ ಹೋಗುತ್ತಿದ್ದೇವೆ. ಆ ಶಾಲೆಯಲ್ಲಿ ರಿಯಲ್ಯಾಟಿ ಷೋಗಾಗಿ ಆಡಿಷನ್‌ ನಡೆಯುತ್ತಿದೆ. ಅಲ್ಲಿಯೇ ಬೇರೆ ಬೇರೆ ಕಡೆಯಿಂದ ನೂರಾರು ವಿದ್ಯಾರ್ಥಿಗಳು ಬಂದಿದ್ದಾರೆ. ಅಂಥದ್ದರಲ್ಲಿ ನಾವೂ ಶೌಚಾಲಯದ ಎದುರು ಕ್ಯೂನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಕಾಯುತ್ತಾ ನಿಂತರೆ ಅಲ್ಲಿ ಮೈದಾನದಲ್ಲಿ ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ಇದೊಂಥರಾ ಹೇಳಲಾರದ ಸಂಕಟ ಎಂದು ಬಾಲಕಿಯರು ತಮ್ಮ ಗೋಳನ್ನು ತೋಡಿಕೊಂಡರು. ಮಳೆಗಾಲದಲ್ಲಿಯೇ ಕ್ರೀಡಾಕೂಟವನ್ನು ಹಮ್ಮಿಕೊಂಡಿರುವ ಶಿಕ್ಷಣ ಇಲಾಖೆಯ ಕ್ರಮ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಹುತೇಕ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲದ ಸಮಯದಲ್ಲಿ ಮೈದಾನದಲ್ಲಿ ಕೆಲವೆಡೆ ನೀರು ನಿಂತಿರುತ್ತದೆ. ಇಂಥದ್ದರಲ್ಲಿ ಪಂದ್ಯಾಟದ ವೇಳೆ ಅನೇಕ ವಿದ್ಯಾರ್ಥಿಗಳು ಜಾರಿ ಬಿದ್ದಿದ್ದಾರೆ. ಪ್ರತಿವರ್ಷವೂ ಶಿಕ್ಷಣ ಇಲಾಖೆ ಮಳೆಗಾಲದ ಸಮಯದಲ್ಲಿಯೇ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿದೆ. ಇದು ಇನ್ನುಮುಂದಾದರೂ ಸಹ ನಿಲ್ಲಬೇಕು ಎಂಬುದು ಹಲವು ಬಾಲಕರು ಒತ್ತಾಯ.

loading...