ಶ್ರಾವಣ ಮಾಸದ ನಿತ್ಯ ವಚನೋತ್ಸವ ಕಾರ್ಯಕ್ರಮ ಆಯೋಜನೆ

0
8
loading...

ಕನ್ನಡಮ್ಮ ಸುದ್ದಿ-ಧಾರವಾಡ: ಶ್ರಾವಣ ಮಾಸದ ನಿತ್ಯ ವಚನೋತ್ಸವ ಕಾರ್ಯಕ್ರಮ ಅ.11 ರಿಂದ ಆರಂಭಗೊಳ್ಳಲಿದ್ದು ಒಂದು ತಿಂಗಳವರೆಗೆ ಶಹರದ 12 ಬಡಾವಣೆಯ 600 ಕ್ಕೂ ಹೆಚ್ಚು ಮನೆಗಳಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಏಕಕಾಲಕ್ಕೆ ವಚನ ವಿಶ್ಲೇಷಣೆ ಹಾಗೂ ಪ್ರತಿ ರವಿವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಎಂದು ಬಸವ ಕೇಂದ್ರದ ಗೌರವಾಧ್ಯಕ್ಷ ಡಾ.ವೀರಣ್ಣ ರಾಜೂರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣ ಸಂಸ್ಕøತಿ ಉಳಿಸೋಣ, ಬೆಳೆಸೋಣ, ರಕ್ಷಿಸೋಣ ಎಂಬ ಧ್ಯೇಯದೊಂದಿಗೆ ಬಸವಾದಿ ಶರಣರ ವಿಚಾರಧಾರೆಯನ್ನು ಮನೆ ಮನ ತಲುಪಿಸುವ ನಿಟ್ಟಿನಲ್ಲಿ ಕಳೆದ 25 ವರ್ಷದಿಂದ ನಿರಂತರವಾಗಿ ಪ್ರತಿ ಶ್ರಾವಣ ಮಾಸದ ಅವಧಿಯಲ್ಲಿ ಧಾರವಾಡದ ಸುತ್ತಮುತ್ತಲಿನ ಎಲ್ಲಾ ಬಡಾವಣೆಗಳ ಮನೆಯಲ್ಲಿ ನಿತ್ಯ ವಚನೋತ್ಸವ ನಡೆಸುತ್ತಾ ಬಂದಿದೆ. ಯುವ ಜನರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದ್ದು, ಮಕ್ಕಳಿಗೆ ವಚನ ಲೇಖನ ಸ್ಪರ್ಧೆ, ಭಾಷಣ ಸ್ಪರ್ಧೆ ಏರ್ಪಡಿಸಿದೆ. ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗಾಗಿ ಬಸವಾದಿ ಶರಣ ಶರಣೆಯರ ರೂಪಕಗಳು, ಛದ್ಮವೇಶ ಸ್ಪರ್ಧೆಗಳು ನಡೆಯಲಿದ್ದು ಜಾತಿ, ಧರ್ಮ, ಲಿಂಗಬೇಧವಿಲ್ಲದೇ ಎಲ್ಲರೂ ಒಟ್ಟಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಿದೆ ಎಂದರು.
ಅ.11ರ ಸಂಜೆ 5 ಕ್ಕೆ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ವಚನ ಪರಿಮಳ ಭಾಗ-3 ಹಾಗೂ ಜೀವನ ಮೌಲ್ಯ ಪುಸ್ತಕಗಳ ಬಿಡುಗಡೆ ಸಮಾರಂಭ ಜರುಗಲಿದೆ. ಸಾಹಿತಿ ಡಾ.ವೀರಣ್ಣ ರಾಜೂರ ಅಧ್ಯಕ್ಷತೆವಹಿಲಿದ್ದು, ಕವಿವಿ ಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ.ಕುಂದಗೋಳ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಅ.14 ರಂದು ಬೆಳಗ್ಗೆ 10 ಗಂಟೆಗೆ ಬಸವ ಪಂಚಮಿ ನಿಮಿತ್ಯ ಸಪ್ತಾಪೂರದ ಸರಕಾರಿ ಶಾಲೆಯಲ್ಲಿ ದಿವ್ಯಾಂಗ ವಿದ್ಯಾರ್ಥಿಗಳಿಗೆ ಹಾಲು, ಉಂಡಿ ವಿತರಣೆ ಮಾಡಲಾಗುವುದು. ಅ. 19 ರಂದು ಬೆಳಗ್ಗೆ 10 ಗಂಟೆಗೆ ಭಾಷಣ ಸ್ಪರ್ಧೆ ರಂಗಾಯಣದಲ್ಲಿ ಜರುಗಲಿದೆ. ಆ.22 ರಂದು ಸಂಜೆ 4 ಕ್ಕೆ ವಚನೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಮುಮ್ಮಿಗಟ್ಟಿ ಗ್ರಾಮದ ಶ್ರೀ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಅ.26 ರಂದು ಬೆಳಗ್ಗೆ ಆರ್.ಎಲ್.ಎಸ್ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ವಚನ ಬರೆಯುವ ಸ್ಪರ್ಧೆ ನಡೆಯಲಿದ್ದು ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದ ಮಕ್ಕಳಿಗೆ ನಗದು ಪ್ರಮಾಣ ಪತ್ರ ನೀಡಲಾಗುವುದು ಎಂದರು. ಸೆಪ್ಟಂಬರ್ 02 ರಂದು ಮದ್ಯಾಹ್ನ 3.30 ಕ್ಕೆ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮಕ್ಕಳಿಗಾಗಿ ಬಸವಾದಿ ಶರಣ ಶರಣೆಯರ ರೂಪಕಗಳು, ಛದ್ಮವೇಶ ಸ್ಪರ್ಧೆಗಳು ಸಂಜೆ 6.30 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಮುಂಚಿತವಾಗಿ ಹೆಸರನ್ನು ನೊಂದಾಯಿಸಬೇಕು. ಸೆ. 15 ರ ಸಂಜೆ 5 ಗಂಟೆಗೆ ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ, ಇಳಕಲ್ಲನ ಶ್ರೀ ಗುರುಬಸವ ಮಹಾಂತ ಸ್ವಾಮಿಜಿ ಸಾನಿಧ್ಯದಲ್ಲಿ ವಚನೋತ್ಸವ ಸಮಾರೋಪ ಸಮಾರಂಭವು ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಆಸಕ್ತರು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಶರಣನವರ, ಉಮೇಶ ಕಟಗಿ, ಶಿವಶರಣ ಕಲಬಶೆಟ್ಟರ, ಸಿದ್ರಾಮಣ್ಣ ನಡಕಟ್ಟಿ, ಮಲ್ಲಿಕಾರ್ಜುನ ಚೌಧರಿ, ಕೆ.ಎಂ.ಕೊಪ್ಪದ, ಬಸವಂತ ತೋಟದ ಇದ್ದರು.

loading...