ಸಂವಿಧಾನಕ್ಕೆ ಅಗೌರವ ತೋರಿದವರಿಗೆ ಕಠಿಣ ಶಿಕ್ಷೆಗೆ ಆಗ್ರಹ

0
6
loading...

ವಿಜಯಪುರ : ಸಂವಿಧಾನ ವಿರೋಧಿ ವರ್ತನೆ ಹಾಗೂ ಸಂವಿಧಾನಕ್ಕೆ ಅಗೌರವ ತೋರುವ ಚಟುವಟಿಕೆಗಳನ್ನು ಮಾಡುವ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ನಗರದ ಡಾ.ಬಿ.ಆರ್‌. ಅಂಬೇಡ್ಕರ ವೃತ್ತದಿಂದ ರ್ಯಾಲಿ ಆರಂಭಗೊಂಡಿತು. ಗಾಂಧಿವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾರತೀಯ ಸಂವಿಧಾನಕ್ಕೆ ಅಗೌರವ ತೋರುವ ಅನೇಕ ಬೆಳವಣಿಗೆ ನಡೆಯುತ್ತಿರುವುದು ಖೇದಕರ, ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಬದುಕುವ ಹಕ್ಕು ಕರುಣಿಸಿರುವ ಸಂವಿಧಾನದ ಬಗ್ಗೆ ಕೆಲವರು ಅಶಿಸ್ತಿನಿಂದ ವರ್ತಿಸುತ್ತಿರುವುದು ಸರಿಯಲ್ಲ, ಭಾರತೀಯ ಸಂವಿಧಾನಕ್ಕೆ ಅವಮಾನ ಮಾಡುವುದು ಪ್ರತಿಯೊಬ್ಬ ಭಾರತೀಯನಿಗೂ ಅವಮಾನ ಮಾಡಿದೆ ಎಂದರು. ನವದೆಹಲಿಯಲ್ಲಿಯ ಜಂತರ ಮಂತರ ಪ್ರದೇಶದಲ್ಲಿ ಕೆಲವೊಂದು ಸಂಘಟನೆಗಳ ಪದಾಧಿಕಾರಿಗಳೂ ಸಂವಿಧಾನ ಸುಡುವುದರ ಮೂಲಕ ತಮ್ಮ ಪ್ಯಾಸಿಸ್ಟ ಬುದ್ದಿ ತೋರಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂವಿಧಾನದ ಯಾರದು? ಈ ಸಂವಿಧಾನ ಸುಟ್ಟರೆ ದೇಶದ ಆಡಳಿತ ಯಾವ ರೀತಿ ನಡೆಯಬೇಕು ಎಂದು ಪ್ರಶ್ನಿಸಿದರು.
ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ಭಾರತೀಯ ಸಂವಿಧಾನ ಸುಡುವುದು ದೇಶದ್ರೋಹಿ ಕೃತ್ಯ. ಪ್ರತಿಯೊಬ್ಬ ನಾಗರಿಕನೂ ಈ ಕೃತ್ಯವನ್ನು ವಿರೋಧಿಸಬೇಕು, ಖಂಡಿಸಬೇಕು, ಸಂವಿಧಾನಕ್ಕೆ ಬೆಂಕಿ ದೇಶಕ್ಕೆ ಬೆಂಕಿ ಹಚ್ಚಿದ ಎಲ್ಲ ಪುಂಡಪೋಕರಿಗಳನ್ನು ತಕ್ಷಣವೇ ಬಂಧಿಸಿ, ಅವರನ್ನು ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್‌ ಸಂಚಾಲಕ ವೈ.ಸಿ. ಮಯೂರ, ಶರಣು ಸಿಂಧೆ, ಅಶೋಕ ಚಲವಾದಿ, ರಮೇಶ ಧರಣಾಕರ, ರಮೇಶ ಆಸಂಗಿ, ಪರಶು ದಿಂಡವಾರ, ರಾಜು ಪಿರಂಗೆ, ವಿಜಯ ಕಾಂಬಳೆ, ರಮೇಶ ಮ್ಯಾಗೇರಿ, ಬಸವರಾಜ ಮುಂಬಯಿ, ಮಂಜು ಎಂಟಮಾನ, ಪ್ರಕಾಶ ಗುಡಿಮನಿ, ಮಲ್ಲು ಬನಸೋಡೆ, ವಿನೋದ ರೇವಣ್ಣವರ ಬಾಬು ಬಿಸನಾಳ ರಾಜೇಂದ್ರ ನಿಡೋಣಿ ಮೊದಲಾದವರು ಉಪಸ್ಥಿತರಿದ್ದರು.

loading...