ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

0
6
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಜಮ್ಮು ಕಾಶ್ಮೀರದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದ ಯೋಧ ರಮೇಶ್ ನರಗುಂದ ಅವರ ಅಂತ್ಯಕ್ರಿಯೆ ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮಲ್ಲಿ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವದೊಂದಿಗೆ ನಡೆಸಲಾಯಿತು.
ಇದಕ್ಕೂ ಮುನ್ನ ಸ್ವಗ್ರಾಮ ತಲುಪುವ ಮುನ್ನ ಎಲ್ಲಾ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ, ತಾಲೂಕಿನ ಸರ್ಕಾರಿ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಕುಂದಗೋಳ ಶಾಸಕ ಸಿ ಎಸ್ ಶಿವಳ್ಳಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಎಸ್ಪಿ ಗೀತಾ ಸೇರಿದಂತೆ ಶಾಲಾ ಮಕ್ಕಳು, ವೃದ್ಧರು, ಯುವಕರಾದಿಯಾಗಿ ಅಂತಿಮ ದರ್ಶನ ಪಡೆದರು.
ಸಕಲ ಸರ್ಕಾರಿ ಗೌರವದೊಂದಿಗೆ ಸಂಜೆ 4ಗಂಟೆಗೆ ಸ್ವಗ್ರಾಮ ಸಮುದಾಯ ಭವನದ ಪಕ್ಕದಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು. ಯೋಧನ ಅಗಲಿಕೆಯಿಂದ ಇಡೀ ಗ್ರಾಮವೇ ಕಣ್ಣೀರು ಸುರಿಸಿತು. ಇನ್ನು ಸಂಬಂಧಿಗಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಯೋಧನ ಸಾವಿಗೆ ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರ್.ವಿ.ದೇಶಪಾಂಡೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೃತ ಯೋಧನ ಕುಟುಂಬಕ್ಕೆ ಪತ್ರ ಬರೆದಿರುವ ಅವರು, 10 ವರ್ಷಗಳಿಗೂ ಅಧಿಕ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದ ರಮೇಶ ನರಗುಂದ ಅವರ ನಿಧನ ಅಕಾಲಿಕ ಮತ್ತು ದುರದೃಷ್ಟಕರವಾಗಿದೆ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ರಮೇಶ ಅವರ ಅಗಲಿಕೆಯ ನೋವಿನಲ್ಲಿ ಭಾಗಿಯಾಗಿದ್ದೇನೆ. ನೋವನ್ನು ಎದುರಿಸುವ ಶಕ್ತಿ ಮನೆಯವರಿಗೆ ಬರಲಿ ಎಂದು ಪ್ರಾರ್ಥಿಸಿದ್ದಾರೆ.
ಅವರ ಪ್ರಾಮಾಣಿಕ ಸೇವೆಯನ್ನು ದೇಶವು ಚಿರಕಾಲ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

loading...