ಸಮಾಜಿಕ ಸೇವಾ ಗುಣ ಬೆಳೆಸಿಕೊಳ್ಳಿ: ಸಚಿವ ದೇಶಪಾಂಡೆ

0
8
loading...

ಕನ್ನಡಮ್ಮ ಸುದ್ದಿ-ಕುಮಟಾ: ಮನುಷ್ಯ ತನ್ನ ಜೀವನ ಸಮಾಜ ಸೇವೆಗೆ ಮುಡಿಪಾಗಿಡುವುದು ಜೀವನದ ಮಹತ್ತರ ಕಾರ್ಯ. ಹಣ ಇಲ್ಲದಿದ್ದರೂ ಸೇವಾ ಗುಣಗಳಿದ್ದರೆ ಸೇವಾ ಕಾರ್ಯಗಳಿಗೆ ಅಡ್ಡಿಯಾಗದು. ಅಲ್ಲದೇ ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತಗೊಂಡಿರಬೇಕು ಹೊರತು ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು ಎಂದು ರಾಜ್ಯ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಅಭಿಪ್ರಾಯಪಟ್ಟರು.
ಅವರು ರವಿವಾರ ಪಟ್ಟಣದ ಲಾಯನ್ ರೇವಣಕರ್ ಚೆರಿಟೇಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆಯ ವಿಸ್ತರಣಾ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಮಾತನಾಡಿ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಆಧ್ಯಾತ್ಮಿಕ ಭಾವನೆಯಿಂದ ಮಾಡುವ ಜನಪರ ಸೇವೆಗೆ ಪ್ರಚಾರದ ಅಗತ್ಯವಿಲ್ಲ. ಅಲ್ಲದೇ ಆಧುನಿಕತೆಯಲ್ಲಿ ಪ್ರೀತಿ ವಿಶ್ವಾಸದ ಕೊರತೆ ಕಾಡುತ್ತಿದೆ. ಸೇವಾ ಮನೋಭಾವನೆಯು ಕ್ಷೀಣಿಸುತ್ತಿದೆ. ಉತ್ತಮ ಕಾರ್ಯಗಳಿಗೆ ಕೊಡುವ ಗುಣ ಹಾಗೂ ಆದರ್ಶ ರೂಢಿಸಿಕೊಳ್ಳಬೇಕು. ಎಲ್ಲಾ ಪಕ್ಷಗಳಲ್ಲಿ ನನ್ನ ಶಿಷ್ಯರಿದ್ದಾರೆ. ರಾಜಕೀಯ ಸ್ಥಿತ್ಯಂತರ ಮೂಲಕ ಪಕ್ಷಾಂತರಗೊಂಡು ಅವರೆಲ್ಲಾ ಬೇರೆ ಪಕ್ಷಗಳಲ್ಲಿ ಸೇರಿದ್ದಾರೆ. ನಾನೂ ಕೂಡ ಪಕ್ಷಾಂತರಿ ಎನ್ನುವ ಮೂಲಕ ತನ್ನ ರಾಜಕೀಯ ಜೀವನದ ನಡೆಯ ಕುರಿತು ಸೂಚ್ಯವಾಗಿ ಹೇಳಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಬಡವರಿಗೆ ಹಾಗೂ ಹಿಂದುಳಿದವರಿಗೆ ಇಲ್ಲಿನ ರೇವಣಕರ್ ಕಣ್ಣಿನ ಆಸ್ಪತ್ರೆ ಉತ್ತಮ ಸೇವೆ ನೀಡುತ್ತಿರುವುದರಿಂದ ಎಲ್ಲರಿಗೂ ಆಶಾಕಿರಣವಾಗಿದೆ. ಹೀಗಾಗಿ ಇದರ ಸೇವಾ ಕಾರ್ಯದಲ್ಲಿ ನನ್ನ ಸಹಕಾರ ಸದಾ ಇರುತ್ತದೆ. ಕುಮಟಾದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಬಹಳಷ್ಟಿವೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಹಿರಂಗವಾಗಿ ಈ ವೇದಿಕೆಯಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಖಾಸಗಿಯಾಗಿ ಸಚಿವರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಮರಾಕಲ್ ನೀರು ಸರಬರಾಜು ಯೋಜನೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ನೀರು ಸರಬರಾಜಿಗೆ ವ್ಯತ್ಯಯ ಉಂಟಾಗುತ್ತಿದೆ. ಹೀಗಾಗಿ ಜನರೇಟರ್ ಅಳವಡಿಸಲು ಸಚಿವರ ಗಮನಕ್ಕೆ ತರಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರು ತಕ್ಷಣ ಜನರೇಟರ್ ಮಂಜೂರಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಲಾಯನ್ಸ್ ರೇವಣಕರ್ ಚೆರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ ಡಿ ಶೇಟ್ ಸ್ವಾಗತಿಸಿದರು. ಡಾ ಪ್ರಕಾಶ ಪಂಡಿತ ವಂದಿಸಿದರು. ಎಮ್ ಎನ್ ಹೆಗಡೆ ನಿರೂಪಿಸಿದರು. ಡಾ ಸಿ ಎಸ್ ವೆರ್ಣೇಕರ್, ಡಾ ರೇವತಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

loading...