ಸರ್ಕಾರದ ಪ್ರೋತ್ಸಾಹಕ್ಕೆ ಕಾದಿರುವ ನೇಕಾರರು

0
3
loading...

ಡಿ.ಆನಂದ
ಬಾಗಲಕೋಟೆ: ರಾಷ್ಟ್ರದ ಸಂಕೇತವಾಗಿರುವ ರಾಷ್ಟ್ರದ ಧ್ವಜ ನಿರ್ಮಾಣ ಕಾರ್ಯ ಭರದಿಂದ ಸಾಗಿರುವ ಮಧ್ಯೆಯೇ ಅದರ ಬಟ್ಟೆ ತಯಾರಿಸುವವರ ಭವಣೆ ಮಾತ್ರ ಹೇಳತೀರದಾಗಿದೆ. ಕೆಲಸವೇನೂ ದಿನಂಪೂರ್ತಿ ಇದ್ದರೂ ಕೂಲಿ ಮಾತ್ರ ಅತ್ಯಂತ ಕಡಿಮೆಯಾಗಿದೆ. ಇದರಿಂದ ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ನೇಕಾರರು ಮಾತ್ರ ಸೂಕ್ತ ಕೂಲಿ ಹಾಗೂ ಸೌಲಭ್ಯಗಳಿಲ್ಲದೇ ದಿನವನ್ನು ದೂಡುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ, ಜಿಲ್ಲೆಯಲ್ಲಿ ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಪ್ರಮುಖ ಕೇಂದ್ರ ಒಟ್ಟು 27 ನೇಯ್ಗೆಯ ಮಗ್ಗಗಳು ಇದ್ದು, ಒಂದು ಮಗ್ಗದಿಂದ ದಿನಕ್ಕೆ 8 ಮೀಟರನಷ್ಟು ಬಟ್ಟೆಯನ್ನು ತಯಾರಿಸಲಾಗುತ್ತದೆ. ಅಲ್ಲದೇ ಈ ಕೇಂದ್ರದಲ್ಲಿ ಮೊದಲು ಹಂಜಿ ತಯಾರಿಸಿ, ನಂತರ ನೂಲು ತಯಾರಿಸಿ, ಬಾಬಿನ್ ಮತ್ತು ಸುತ್ತಿ ಕೈ ಮಗ್ಗಕ್ಕೆ ಹಾಕುವ ಮೂಲಕ ನಂಬರ 34ರ ನೂಲಿನ ರಾಷ್ಟ್ರಧ್ವಜದ ಬಟ್ಟೆಯನ್ನು ಅತ್ಯಂತ ಶಿಸ್ತು ಬದ್ಧವಾಗಿ ಇಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿ ತಯಾರಿಸುತ್ತಾರೆ. ಆದರೆ ರಾಷ್ಟ್ರಧ್ವಜ ತಯಾರಿಸುವವರ ಜೀವನದಲ್ಲಿ ಮಾತ್ರ ಶಿಸ್ತು ಕಾಣೋದು ಮಾತ್ರ ದುಸ್ತರವಾಗಿದೆ. ಬಾಗಲಕೋಟೆ ಜಿಲ್ಲೆಯನ್ನೊಳಗೊಂಡ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಬರಗಾಲ ಬರಸ್ಥಿತಿ ಉಂಟಾದಾಗ ದಿ.ವೆಂಕಟೇಶ ಮಾಗಡಿಯವರ ನಿರ್ಧಾರದ ಪ್ರತಿಫಲವಾಗಿ 1982 ರಲ್ಲಿ ಸ್ಥಾಪನೆಗೊಂಡ ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ ಒಂದೊಮ್ಮೆ ಬಡವರಿಗೆ ಅನ್ನದಾತವಾಗಿತ್ತು. ಆದರೆ ದಿನಗಳೆದಂತೆ ಇಲ್ಲಿ ವೇತನ ಕಡಿಮೆಯಾಗಿ ನೇಕಾರರು ತೀವ್ರ ಬವಣೆಯನ್ನು ಪಡುವಂತಾಗಿದೆ. ಇದರಿಂದ ಜನರು ನಾನಾ ಕಡೆ ಉದ್ಯೋಗ ಹರಸಿ ಹೋಗಿದ್ದ ಉದಾಹರಣೆಗಳು ಉಂಟು. ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗೆ ನೀಡುವ ಕೂಲಿಯನ್ನಾದರೂ ಖಾದಿ ಗ್ರಾಮೋದ್ಯೋಗಕ್ಕೆ ನೀಡಿದಲ್ಲಿ ಈ ಉದ್ಯಮ ಬೆಳೆಯಲು ಸಹಕಾರಿಯಾಗಲಿದೆ. ಮಾತಾಡಿದರೆ ದೇಶದ ಅಭಿವೃದ್ಧಿ ಎಂದೆಲ್ಲ ಹೇಳಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತ ಖಾದಿ ಕೇಂದ್ರಗಳ ಕಡೆಗೆ ಗಮನ ಹರಿಸಿ ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ನೇಕಾರನ ಭವಣೆಯನ್ನು ನೀಗಿಸಬೇಕಿದೆ.
ಈ ಕಾರ್ಯ ಇನ್ನೂ ಮುಂದಾದರೂ ಆಗುತ್ತಾ,ರಾಷ್ಟ್ರಧ್ವಜ ಬಟ್ಟೆ ನೇಯುವ ನೇಕಾರರ ಭವಣೆ ನೀಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ರಾಷ್ಟ್ರಧ್ವಜ ನೇಯುವ ನಮಗ ಪಗಾರ ಮೈತುಂಬ ಬೀಳಲ್ಲ.ಕಡಿಮೆ ಇರುವ ಕೂಲಿ ಹೆಚ್ಚಾಗಬೇಕು.ಇದರಲ್ಲಿ ದುಡಿದರ ಏನೂ ಲಾಭವಿಲ್ಲ.ದಿನಪೂರ್ತಿ ದುಡಿದರೂ ನೂರು ರೂಪಾಯಿ ಕೂಲಿ ಬೀಳಲ್ಲ.ಮೂವತ್ತು ವರ್ಷದಿಂದ ಇದೇ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ.ನಮಗೆ ಏನಾದರೂ ಸರ್ಕಾರ ಸಹಾಯಧನ ನೀಡಿದರೆ ಚೊಲೋ ಆಗತೈತಿ.ನೇಯುವ ಕೆಲಸದಿಂದ ಖುಷಿ ಐತಿ ಆದರೆ ದುಡದಾಂಗ ಪಗಾರ ಇಲ್ಲ್ಲ. ಎಲ್ಲಾರೂ ಇಲ್ಲಿ ಬರತಾರ ಪಗಾರ ಹೆಚ್ಚು ಮಾಡತೀವಿ ಎಂದು ಹೋಗತಾರ ಆದರೆ ಇದುವರೆಗೆ ಪಗಾರ ಮಾತ್ರ ಏರಿಲ್ಲ ಎನ್ನುತ್ತಾರೆ ಬಟೆ ನೇಯುವ ಪದ್ಮವ್ವ ಕಂಬಾರ.

ಇಲ್ಲಿನ ಖಾದಿ ಗ್ರಾಮದ್ಯೋಗ ಕೇಂದ್ರದಲ್ಲಿ ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ಮಗ್ಗನೇ ಇವೆ.ದಿನಕ್ಕೆ ಏಳರಿಂದ ಎಂಟು ಮೀಟರ ಬಟ್ಟೆ ನೇಯುತ್ತಾರೆ. ಅವರಿಗೆ 100 ರಿಂದ 150 ರೂ. ಪಗಾರ ಬೀಳಲಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಲದಲ್ಲಿ ಮೀಟರಗೆ 7ರೂ. ಕೂಲಿ ಆಗಿದೆ.ಆದರೆ ಇದು ಇನ್ನೂ ಹೆಚ್ಚಾಗಬೇಕು ಎಂದು ಕೂಲಿಕಾರರು ಒತ್ತಾಯವಿದೆ. ಇದು ಇನ್ನೂ ಈಡೇರುತ್ತಿಲ್ಲ ಎಂದು ಖಾದಿ ಗ್ರಾಮೋದ್ಯಗದ ಮುಖ್ಯಸ್ಥ ಈರಪ್ಪ ಮೆಣಸಗಿ ಹೇಳುತ್ತಾರೆ. ಸರ್ಕಾರ ನೇಕಾರರಿಗೆ ಹೆಚ್ಚಿನ ಅನುದಾನ ನೀಡಬೇಕು.
ಈ ಗ್ರಾಮಾದ್ಯೋಗ ಕೇಂದ್ರದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲ ಸರ್ಕಾರದವರು ಮಾತ್ರ ಇತ್ತ ಕಡೆ ಕಣ್ಣುತೆರೆಯುತ್ತಿಲ್ಲ ಎಂದು ನೋವು ತೋಡಿಕೊಂಡರು.ತಿಂಗಳಾ ಇಲ್ಲಿ 6 ರಿಂದ 7 ಲಕ್ಷ ಉತ್ಪಾದನೆ ಇದೆ.ತುಳಸಿಗೇರಿ,ಜಾಲಿಹಾಳ,ಸೀಮಿಕೇರಿ ಕಡೆ ಮಗ್ಗಗಳಿಂದ ಕೆಲಸ ನಡೆಯುತ್ತಿದೆ.ಕೆಲಸಗಾರರಿಗೆ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

loading...