ಸಾಧಕರ ಬದುಕು ಮಾದರಿಯಾಗಲಿ: ಎಂ.ಎಸ್.ಅಂಗಡಿ

0
6
loading...

ಹುನಗುಂದ: ವ್ಯಕ್ತಿ ಎಷ್ಟು ದಿನ ಬದುಕಿದ್ದ ಎನ್ನುವದಕ್ಕಿಂತ ಹೇಗೆ ಬದುಕಿದ್ದ ಎನ್ನುವದು ಮುಖ್ಯ. ನಮ್ಮ ಬದುಕು ಪ್ರದರ್ಶನವಾಗದೇ ನಿದರ್ಶನವಾಗಬೇಕು. ಸಾಧಕರ ಬದುಕಿನ ಅನುಸರಣೆ ನಮ್ಮ ಬದುಕಿಗೆ ದಾರಿದೀಪವಾಗಬಲ್ಲವು ಎಂದು ನಿವೃತ್ತ ಪಿಯು ಉಪನಿರ್ದೇಶಕ ಎಂ.ಎಸ್.ಅಂಗಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೨೦೧೮-೧೯ ನೇ ಸಾಲಿನ ಕಾಲೇಜು ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಸ್ತು, ಸಂಯಮ, ಮಾನವೀಯ ಗುಣ, ಧನಾತ್ಮಕ ಚಿಂತನೆಗಳು ನಮ್ಮ ಬದುಕಿಗೆ ಹೊಸ ರೂಪ ಕೊಡಬಲ್ಲವು. ವಿದ್ಯಾರ್ಥಿ ದೆಸೆಯಿಂದಲೇ ಪ್ರಜಾಪ್ರಭುತ್ವದ ಆಶಯಗಳು ಕಾರ್ಯರೂಪಕ್ಕೆ ಬರಲು ಇಂತಹ ವೇದಿಕೆಗಳು ಸಹಕಾರಿಯಾಗಬಲ್ಲವು. ಸಕಲರೂ ಶಿಕ್ಷಣ ಪಡೆಯಲು, ವ್ಯಕ್ತಿ ಮಾನವ ಸಂಪನ್ಮೂಲವಾಗಲು ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವದರ ಜೊತೆಗೆ ಸಂಕುಚಿತ ಭಾವವನ್ನು ದೂರ ಸರಿಸಿ ವಿವೇಕಾನಂದ, ಕುವೆಂಪುರವರ ವಿಶ್ವಮಾನವತ್ವದ ಸಂದೇಶವನ್ನು ನಾವೆಲ್ಲ ರೂಢಿಸಿಕೊಳ್ಳುವುದರ ತುರ್ತು ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಪಿಯು ಉಪನಿರ್ದೇಶಕ ಎಂ.ಎಸ್.ಅಂಗಡಿಯವರನ್ನು ಕಾಲೇಜಿನ ಪರವಾಗಿ ಸತ್ಕರಿಸಲಾಯಿತು. ವಿವಿಧ ವೇದಿಕೆಗಳ ಮುಖ್ಯಸ್ಥರು, ಉಪನ್ಯಾಸಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.

loading...