ಸಿದ್ದಾಪುರ ತಾಲೂಕಿನಲ್ಲಿ ಕುಸಿದ ಗುಡ್ಡ,ಬಿರುಕು ಬಿಟ್ಟ ರಸ್ತೆ ಮಳೆಯಿಂದಾಗಿ ಮಲೆನಾಡಿನಲ್ಲಿ ಮತ್ತೆ ಭೂಕುಸಿತ

0
7
loading...

ಬೆಂಗಳೂರು: ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿಯಿಂದ ಮದ್ದಿನಕೇರಿಗೆ ತೆರಳುವ ರಸ್ತೆ ಬಿರುಕು ಬಿಟ್ಟಿದ್ದು, ರಸ್ತೆಯೇ ಕುಸಿಯುವ ಆತಂಕ ಸೃಷ್ಟಿಯಾಗಿದೆ.
ರಸ್ತೆಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಗುಡ್ಡಗಳು ಕುಸಿದಿದ್ದು, ಅಲ್ಲಲ್ಲಿ ಭೂಮಿ ಸೀಳಿರುವುದು ಕಂಡುಬಂದಿದೆ.ಬೇಡ್ಕಣಿಯಿಂದ ಸುಮಾರು1.5 ಕಿ.ಮೀ ದೂರದಲ್ಲಿರುವ ಮದ್ದಿನಕೇರಿಯಲ್ಲಿ ಏಳು ಮನೆಗಳಿದ್ದು, ಸಾಕಷ್ಟು ಜನರ ಅಡಿಕೆ ತೋಟಗಳು ಇಲ್ಲಿವೆ. ಜತೆಗೆ ಬೇಡ್ಕಣಿಗೆ ಇಲ್ಲಿನ ಬಾವಿಯಿಂದಲೇ ನೀರು ಪೂರೈಕೆಯಾಗುತ್ತಿದೆ.ಇದೀಗ ರಸ್ತೆಯು ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವ ಸಾಧ್ಯತೆ ದಟ್ಟವಾಗಿದೆ.ಈ ಕಾರಣದಿಂದ ವಾಹನ ಸಂಚಾರಸಂಪೂರ್ಣ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಇದೆ.
ಜಿಲ್ಲೆಯಾದ್ಯಂತ ಈ ಬಾರಿ ಮಳೆಗಾಲ ಆರಂಭವಾದಗಿನಿಂದಲೂ ಉತ್ತಮ ಮಳೆಯಾಗಿದೆ.ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳಲ್ಲಿ ಹೆಚ್ಚು ಮಳೆ ಸುರಿದಿದೆ.ಈಗಾಗಲೇ ಈ ಪ್ರದೇಶದಲ್ಲಿ ಅಡಿಕೆ ಹಾಗೂ ಭತ್ತದ ಬೆಳೆಗೆ ಹಾನಿಯಾಗಿದ್ದು,ಇದೀಗ ರಸ್ತೆಯಲ್ಲಿ ಬೀರುಕು ಕಾಣಿಸಿಕೊಂಡು ಹೊಸದೊಂದು ಸಮಸ್ಯೆ ಸೃಷ್ಟಿಯಾಗಿದೆ.ಘಟನಾ ಸ್ಥಳಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮಲೆನಾಡಿನಲ್ಲಿ ಈ ಬಾರಿ ವಾಡಿಕೆಡಗಿಂತ ಹೆಚ್ಚಿನ ಮಳೆಯಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿದೆ. ಭತ್ತ ಹಾಗೂ ಅಡಿಕೆ ಬೆಳೆ ಮಳೆಗೆ ಸಿಲುಕಿ ರೈತರು ಕೈಸುಟ್ಟುಕೊಂಡಿದ್ದಾರೆ. ಎಲ್ಲೊ ನಡೆಯುತ್ತಿದ್ದ ಭೂಕುಸಿತ ಬಿರುಕುಗಳು ಇದೀಗ ನಮ್ಮ ವ್ಯಾಪ್ತಿಯಲ್ಲಿಯೇ ನಡೆಯುತ್ತಿದ್ದು,ಬೇಡ್ಕಣಿಯ ಮದ್ದಿನಕೇರಿ ಬಳಿ ಯೂ ಭೂಮಿ ಸೀಳು ಬಿಟ್ಟು ಜನರಲ್ಲಿ ಸಹಜವಾಗಿ ಆತಂಕ ಸೃಷ್ಟಿಸಿದೆ.ಈಗಾಗಲೇ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ನಡುವೆ ನಿರಂತರ ಮಳೆಯಿಂದಾಗಿ ಮಲೆನಾಡಿನಲ್ಲಿ ಮತ್ತೆ ಭೂಕುಸಿತ ಉಂಟಾಗಿ ಸಂಪರ್ಕಕ್ಕೆ ಅಡ್ಡಿಯಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರಿನ ಕಡವಂತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಗಸೆವಡ್ಡಿ ಗ್ರಾಮದಲ್ಲಿ 4 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಡ್ಡ ಕುಸಿದಿದೆ.ಇದರಿಂದಾಗಿ ವಾಹನಸಂಚಾರಕ್ಕೆ ರಸ್ತೆ ಸಂಪರ್ಕವಿಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.ವಾಹನ ಸಂಚರಿಸಲಾಗದೇ ಜನರು ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆನ್ನಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲ್ಲೂಕಿನ ಮೆಲ್ಪಾಲ್ ಗ್ರಾಮದ ಹಳಸೆ ಶಿವಣ್ಣ ಎಂಬುವವರ ಜಮೀನಿನಲ್ಲಿ ಭೂಕುಸಿತವಾಗಿದೆ. ಭೂಕುಸಿತದಿಂದಾಗಿ 1 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಾಫಿ, ಮೆಣಸು ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ.

loading...