ಸ್ವಾತಂತ್ರ್ಯಕ್ಕಾಗಿ ಹಲಗಲಿ ಬೇಡರ ಪಾತ್ರ ಮಹತ್ವದ್ದು

0
11
loading...

ಶಂಕರಲಿಂಗ ದೇಸಾಯಿ
ಬಾಗಲಕೋಟೆ: ಅಗಷ್ಟ 15, 1947 ರಂದು ಭಾರತಕ್ಕೆ ಸ್ವತಂತ್ರ್ಯ ದೊರೆತ ಅವಿಸ್ಮರಣಿಯ ದಿನ. ಭಾರತ ದೇಶದ ಉದ್ದಗಲಕ್ಕೂ ನಾಯಕರಾದವರ ಒಂದು ಮಾತಿನಿಂದ ಪ್ರತಿಯೊಬ್ಬರು ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಳ್ಳುವವರ ಜೊತೆಗೆ ಅನೇಕರು ಹುತಾತ್ಮರಾಗಿದ್ದಾರೆ. ಈ ಸ್ವಾತಂತ್ರ್ಯ ಸುಮ್ಮನೆ ದೊರತಿಲ್ಲ. ಸಾಮೋಪಾಯದಿಂದ ಹಿಡಿದರು ದಂಡೋಪಾಯದಂತಹ ಕ್ರಾಂತಿಗಳು ಜರುಗಿ ರಕ್ತಪಾತಗಳು ಉಪವಾಸ ವನವಾಸಗಳು ಹೀಗೆ ನೆನೆದರೆ ಮೈ ಜುಂ ಎನ್ನಿಸುವಂತಹ ಸಂದರ್ಭ ನಮ್ಮವರು ಅನುಭವಿಸಿದ್ದನ್ನು ನೆನೆದರೆ ಉಸಿರು ನಿಂತಂತಾಗುತ್ತದೆ.

ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಾಣಿಗಳು ಕೂಡಾ ವಿಶಿಷ್ಠ ಕಾರ್ಯ ನಿರ್ವಹಿಸಿದ ಉದಾಹರಣೆ ಬಾಗಲಕೋಟೆ ಜಿಲ್ಲೆಯಲ್ಲಿ ದೊರೆಯುತ್ತದೆ. ಜಿಲ್ಲೆಯ ಮುಧೋಳ ಬೇಟೆ ನಾಯಿ ಈ ಕೀರ್ತಿಗೆ ಪಾತ್ರವಾಗಿವೆ. ಇವುಗಳ ಯಜಮಾನರು ಬೇಡರು ಜಿಲ್ಲೆಯ ಮುಧೋಳ ತಾಲೂಕಿನ ಹಲಗನಹಳ್ಳಿ ಈಗಿನ ಹಲಗಲಿ ಗ್ರಾಮದ ಬೇಟೆ ಮೂಲ ಕಸಬು ಮಾಡಿಕೊಂಡ ಬೇಡ ಜನಾಂಗ. ಎತ್ತನ ಮಾಮರ ಎತ್ತನ ಕೋಗಿಲೆ ಎಂಬಂತೆ ಎಲ್ಲಿಯ ಸ್ವಾತಂತ್ರ್ಯ ಎಲ್ಲಿಯ ಬೇಡರು ಎಂಬಂತಾಗಿತ್ತು. ಉಪಜೀವನಕ್ಕಾಗಿ ಇಲ್ಲಿಯ ಬೇಡರು ಖಡ್ಗ, ಹತಾರ, ಕುಡಗೋಲು, ಕೊಡ್ಲಿ ಮುಂತಾದ ಆಯುಧಗಳನ್ನು ಬಳಸುತ್ತಿರುವುದು ಬ್ರಿಟೀಷ ಅಧಿಕಾರಿಗಳಿಗೆ ತಿಳಿದು ಬಂದಿತು. ಮುಗ್ದ ಬೇಡರು ತಮ್ಮ ಉಪಜೀವನಕ್ಕಾಗಿ ಬಳಸುತ್ತಿದ್ದ ಈ ಆಯುಧಗಳನ್ನು ಅವರು ತಪ್ಪು ತಿಳಿದುಕೊಂಡು ಸ್ವತಂತ್ರ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆಂಬ ದುಷ್ಟ ಯೋಚನೆಯಿಂದಾಗಿ ಈ ಭಾಗಕ್ಕೆ ಶಸ್ತಾಸ್ತ್ರ ನಿಷೇಧ ಕಾಯ್ದೆ ಜಾರಿಗೊಳಿಸಿ ಕೂಡಲೇ ಹಲಗಲಿ ಗ್ರಾಮಕ್ಕೆ ಬಂದು ಇಲ್ಲಿದ್ದ ಬೇಡರ ಮನೆಯಲ್ಲಿಯ ಆಯುಧಗಳನ್ನು ವಶಪಡಿಸಕೊಳ್ಳತೊಡಗಿದರು. ಇದರಿಂದ ಕುಪಿತಗೊಂಡ ಹಾಗೂ ದೇಶ ಪ್ರೇಮದ ಮತ್ತು ಸ್ವಾತಂತ್ರ್ಯದ ಅರಿವು ವುಳ್ಳ ಉತ್ಸಾಹಿ ಯುವಕರಾದ ಬ್ಯಾಡರ ಬಾಲ, ಜಡಗಾ, ರಾಮ, ಪೂಜಾರಿ ಹನುಮ ಈ ನಾಲ್ಕು ಜನ ಬ್ರಿಟೀಷ ಅಧಿಕಾರಿಗಳ ಈ ಕಾರ್ಯಕ್ಕೆ ಕುಪಿತಗೊಂಡು ಕಾರ್ಯಾಲಯಕ್ಕೆ ನುಗ್ಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜವಾನನಿಗೆ ಒಂದೇ ಏಟು ಕೊಟ್ಟಿದ್ದರಿಂದ ಅವನು ಸತ್ತು ಹೋದ.
ಆ ಸುದ್ದಿ ಎಲ್ಲೆಡೆ ಹಬ್ಬಿ ಬ್ರಿಟಿಷ ಅಧಿಕಾರಿಗಳಿಗೆ ಕೋಪ ತಂದಿತು. ಕೂಡಲೇ ಬ್ರಿಟಿಷರು ಹಲಗಲಿ ಮೇಲೆ ದಾಳಿ ನಡೆಸಿದರು. ದಾಳಿ ನಡೆಸುವದರಲ್ಲದೇ ಬೇಡರ ಮನೆಗಳಿಗೆ ಬೆಂಕಿ ಹಚ್ಚಿದರು. ಬ್ರಿಟೀಷರ ಈ ದಾಳಿಯ ಮುನ್ಸೂಚನೆ ತಿಳಿದ ಯುವಕರು ಸಶಕ್ತರು ಊರು ಬಿಟ್ಟು ಹೋರಿದ್ದರು. ಬಾಲಕರು, ಮುದುಕರು, ಮಹಿಳೆಯರು ಹಾಗೂ ಅಶಕ್ತರು ಬ್ರಿಟಿಷರ ಆಕ್ರೋಶಕ್ಕೆ ಬಲಿಯಾಗಿ ಸುಟ್ಟು ಬೂದಿಯಾಗಿದ್ದರು. ಕಾಡು ಸೇರಿದ ಯುವಕರ ತಂಡ ಬ್ರಿಟಿಷ ಅಧಿಕಾರಿಗಳ ಚಲನ ವಲನ ಅರಿತು ಅವರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಅಡವಿಯಲ್ಲಿ ಅವಿತು ಕುಳಿತಿದ್ದ ಈ ಯುವಕರಿಗೆ ಆಹಾರ ಪೂರೈಕೆ ಆಗುತ್ತಿತ್ತು. ಈ ಆಹಾರ ನಾಯಿಗಳ ಕೈಯಲ್ಲಿ ಪೂರೈಸಲಾಗುತ್ತಿತ್ತು. ಈ ನಾಯಿಗಳು ತಮ್ಮ ಮಾಲಿಕರ ರಕ್ಷಣೆಗಾಗಿ ಬ್ರಿಟಿಷ ಸೈನಿಕರ ಯಾರಾದರೂ ಅಡವಿ ಪ್ರವೇಶಿಸಿದರೆ ವಿಚಿತ್ರ ದ್ವನಿಯಿಂದ ಬೇಡರನ್ನು ಜಾಗೃತಗೊಳಿಸುವದಲ್ಲದೇ ಅನೇಕ ಬ್ರಿಟಿಷ ಅಧಿಕಾರಿಗಳನ್ನು ಕಚ್ಚಿಕೊಂದವು. ಬ್ರಿಟಿಷ ಸೈನಿಕರ ಈ ದಾಳಿಗೆ ರೋಷಿಹೋದ ಬೇಡರು ಅರಣ್ಯದಿಂದ ಅರಣ್ಯಕ್ಕೆ ಸ್ಥಳಾಂತರಗೊಳ್ಳುತ್ತಾ ಗೆರಿಲ್ಲಾ ಪದ್ದತಿಯ ಯುದ್ದ ನೀತಿಯನ್ನು ಅನುಸರಿಸತೊಡಗಿದರು. ಬ್ರಿಟಿಷ ಸೈನಿಕರು ದಾಳಿ ಮಾಡಲು ಯೋಚಿಸುತ್ತಿರುವ ಸ್ಥಳವನ್ನು ಮೊದಲಿಗೆ ಪತ್ತೆ ಹಚ್ಚಿ ಹಿಂದಿನಿಂದ ಆ ಸೈನಿಕರನ್ನು ಕೊಂದು ಹಾಕುತ್ತಿದ್ದರು. ಈ ಹಲಗಲಿ ಬೇಡರ ಸಾಹಸ ಸ್ವಾತಂತ್ರ್ಯ ಹೋರಾಟದ ಈ ಕಿಚ್ಚು ಪ್ರಥಮ ದಂಗೆ ಎನಿಸಿಕೊಂಡಿತು. ಸರಕಾರಕ್ಕೆ ನುಂಗಲಾರದ ತುತ್ತಾದ ಬೇಡರನ್ನು ಬಗ್ಗು ಬಡಿಯಲು ನಾನಾ ರೀತಿ ಕ್ರಮಗಳನ್ನು ಕೈಗೊಂಡು ಈ ಬೇಡರ ಗುಂಪಿನ ಪ್ರಮುಖರಾದ ಬ್ಯಾಡರ ಬಾಲ, ಜಡಗಾ, ರಾಮ, ಪೂಜಾರಿ ಹನುಮ ಎಂಬುವವರನ್ನು ಸೆರೆ ಹಿಡಿದು ಅವರನ್ನು ಸಾರ್ವಜನಿಕವಾಗಿ ಬಂದಿಸಿ ಎಲ್ಲ ಕಡೆ ಭಯ ಮೂಡಲಿ ಎಂಬ ಉದ್ದೇಶದಿಂದ ಸಾರ್ವಜನಿಕರ ಎದುರಿಗೆ ಚಿತ್ರಹಿಂಸೆ ನೀಡುತ್ತಾ ಅನೇಕ ದಿನಗಳ ಇದೇ ರೀತಿ ಸ್ವತಂತ್ರ್ಯ ಹೋರಾಟ ಮಾಡುವವರಿಗೆ ಹೆದರಿಕೆಯಾಗಲಿ ಎಂಬ ಉದ್ದೇಶದಿಂದ ಈ ನಾಲ್ವರನ್ನು ನಾನಾ ರೀತಿ ಕಷ್ಟಕ್ಕೆ ಗುರಿಪಡಿಸಿ ಮಹಾರಾಷ್ಟ್ರದ ಸೋಲಾಪುರದಲ್ಲಿ ಜೈಲಿನಲ್ಲಿ ಇರಿಸಿದರು.

ತದನಂತರ ಈ ನಾಲ್ವರಲ್ಲಿ ಪ್ರಮುಖರಾದ ಜಡಗಾ ಮತ್ತು ಬಾಲಾ ಎಂಬುವವರನ್ನು ಮುಧೋಳ ನಗರದ ಸಂತೆ ದಿನವಾದ ಶುಕ್ರವಾರ ಸಾರ್ವಜನಿಕರ ಎದುರಿಗೆ ಗಲ್ಲಿಗೇರಿಸಲಾಯಿತು. ಇಂದಿಗೂ ಕೂಡಾ ಮುಧೋಳದ ಬಸ್ ನಿಲ್ದಾಣದ ಎದುರಿಗೆ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿ ಹುತಾತ್ಮರಾದ ಜಡಗಾ, ಬಾಲಾ ವೀರಗಲ್ಲುಗಳಿವೆ. ಈ ಬೇಡರ ಸಾಹಸಕ್ಕೆ ಸಹಕರಿಸಿದ ಮುಧೋಳ ಬೇಟೆ ನಾಯಿ ಇಂದು ಭಾರತೀಯ ಸೇನೆಯಲ್ಲಿ ಸ್ಥಾನ ಪಡೆದಿದೆ. ವಿವಿಧ ರೀತಿಯ ಸ್ವಾತಂತ್ರ್ಯ ಹೋರಾಟದ ಮಜಲುಗಳಿಗೆ ಬಾಗಲಕೋಟೆ ಜಿಲ್ಲೆಯ ಬೇಡರ ಸಾಹಸ ಮರೆಯುವಂತಿಲ್ಲ. ಇಂತಹ ಮುಗ್ದ ಹಾಗೂ ಬಡತನದ ಬೇಗುದಿಯಲ್ಲಿ ಬೆಂದಿದ್ದರೂ ಸ್ವಾತಂತ್ರ್ಯದ ಕಿಚ್ಚಿಗೆ ತಮ್ಮನ್ನು ಅರ್ಪಿಸಿಕೊಂಡವರಲ್ಲಿ ಹಲಗಲಿ ಬೇಡರು ಒಬ್ಬರಾಗಿದ್ದಾರೆ.

loading...