ಹಳ್ಳ ಹಿಡಿದ ಬೃಹತ ಮೊತ್ತದ ಒಳಚರಂಡಿ ಕಾಮಗಾರಿ: ಸಾರ್ವಜನಿಕರ ಆಕ್ರೋಶ

0
15

ಕನ್ನಡಮ್ಮ ಸುದ್ದಿ-ಕುಮಟಾ: ಇಲ್ಲಿನ ಪುರಸಭೆ ಐದು ವರ್ಷ ಆಡಳಿತ ಮುಗಿಸಿ ಮತ್ತೆ ಚುನಾವಣೆಗೆ ಸಿದ್ದಗೊಂಡಿದೆ. ಆದರೆ ಐದು ವರ್ಷಗಳ ಅಭಿವೃದ್ಧಿಯ ನೋಟವನ್ನು ನೋಡಿದರೆ ಹೇಳಿಕೊಳ್ಳುವಂತಹ ಯಾವುದೇ ಕಾಮಗಾರಿ ನಡೆದಿಲ್ಲ. ಬೃಹತ್ ಮೊತ್ತದ ಒಳಚರಂಡಿ ಕಾಮಗಾರಿಯಂತ್ತೂ ಹಳ್ಳ ಹಿಡಿದಿದ್ದು, ಪುರಸಭೆಗೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಇಲ್ಲಿನ ಪುರಸಭೆಯು ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಮುಂದಾಗಿದ್ದರೂ, ವಿಫಲತೆಯನ್ನು ಕಂಡ ಒಳಚರಂಡಿ ಯೋಜನೆಯು ಎಲ್ಲವನ್ನು ನುಂಗಿಹಾಕಿದೆ. ಒಳಚರಂಡಿ ಯೋಜನೆಗಾಗಿ 41.32 ಕೋಟಿ ರೂಗಳು ಮಂಜೂರಿಯಾಗಿ ಕಾಮಗಾರಿ ನಡೆಸಲಾಗುತ್ತಿದ್ದರೂ ಅಸಮರ್ಪಕ ಕಾಮಗಾರಿಯಿಂದ ಪುರಸಭೆಯ ವ್ಯಾಪ್ತಿ ಪ್ರದೇಶಗಳು ಸಂಚಾರಕ್ಕೆ ಸಂಚಗಾರವನ್ನು ತಂದಿದೆ. ಅನೇಕ ಕಡೆಗಳಲ್ಲಿ ರಸ್ತೆಗಳು ಗಟಾರವಾಗಿ ನಿರ್ಮಾಣವಾಗಿದೆ. ರಸ್ತೆಗಳನ್ನು ಅಗೆದು ಪೈಪ್ ಲೈನ್ ಹಾಗೂ ಮೇನ್ ಹೋಲ್‍ಗಳನ್ನು ಮಾಡಲಾಗಿದ್ದು, ಕಾಟಾಚಾರಕ್ಕೆ ಮೇಲಿಂದ ಮುಚ್ಚಿ ಸರಿಪಡಿಸಲಾಗಿದೆ. ಹೊಂಡ ತೆಗೆದ ಅನೇಕ ಕಡೆಗಳಲ್ಲಿ ಈಗ ಮಳೆಗಾಲವಾದ್ದರಿಂದ ರಸ್ತೆ ಕುಸಿಯುತ್ತಿವೆ. ನಗರದಲ್ಲಿಯ 5-6 ರಸ್ತೆಗಳಲ್ಲಿ ಒಳಚರಂಡಿಯವರು ಇಂಟರ್ ಲಾಕ್ ತೆಗೆದಿದ್ದು, ಇನ್ನೂ ಸರಿಪಡಿಸದೇ ಜನರು ಶಪಿಸುವಂತಾಗಿದೆ. ಅನೇಕ ಬಾರಿ ಹೇಳಿದರು ಯಾವುದನ್ನೂ ಒಳಚರಂಡಿಯವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎನ್ನುವುದು ಪುರಸಭೆಯ ಸದಸ್ಯರ ಹಾಗೂ ಅಧಿಕಾರಿಗಳ ದೂರಾಗಿದೆ.

ಪಟ್ಟಣಕ್ಕೆ ಪ್ರಮುಖವಾದ ರಸ್ತೆಗಳನ್ನು ಸರಿಪಡಿಸಲಾಗದೇ ಜನರನ್ನು ಸಂಕಷ್ಠದ ಕೂಪದಲ್ಲಿ ನೂಕಿದೆ. ನಗರೋತ್ಥಾನ ಯೋಜನೆಯಲ್ಲಿ 593.19 ಲಕ್ಷ ಮಂಜೂರಿಯಾಗಿದ್ದು, ಅದರಲ್ಲಿ ಬಹಳಷ್ಠು ಕಾಮಗಾರಿಗಾರಿಗಳು ಪ್ರಗತಿಯಲ್ಲಿದೆ. ಇನ್ನೂ ರಸ್ತೆ ಕಾಮಗಾರಿಗಳು ಕಾರ್ಯಗತಗೊಳಿಸಲು ಒಳಚರಂಡಿ ಕಾಮಗಾರಿ ತೊಂದರೆಯಾಗಿ ಪರಿಣಮಿಸಿದೆ. ನಗರೋತ್ಥಾನ ಯೋಜನೆಯಲ್ಲಿ ರಸ್ತೆ, ಗಟಾರ ಹಾಗೂ ನೀರು ಸರಬರಾಜು ಸೇರಿದೆ.
ನೀರಿನ ಸರಬರಾಜಿಗಾಗಿ 33 ಲಕ್ಷ ಹಾಗೂ ಸಂಪ್ 10 ಲಕ್ಷ ಒಟ್ಟೂ 43 ಲಕ್ಷ ರೂಗಳ ಕಾಮಗಾರಿ ಕಿತ್ತೂರು ಚೆನ್ನಮ್ಮ ಉದ್ಯಾನವನದಲ್ಲಿ ನಡೆಸಲಾಗುತ್ತಿದೆ. ನೀರಿನ ಸಂಗ್ರಹಕ್ಕಾಗಿ ಸುಮಾರು 1 ಕೋಟಿ ರೂಗಳ ಗ್ರೌಂಡ ಲೆವೆಲ್ ಟ್ಯಾಂಕ್ ಗಿಬ್ ಹೈಸ್ಕೂಲ್ ಸಮೀಪ ನಿರ್ಮಿಸಲಾಗಿದೆ. ದೀವಳ್ಳಿಯಲ್ಲಿ ನೀರು ಪೂರೈಕೆಗೆ ಸಹಕಾರಿಯಾಗುವಂತೆ 15 ಲಕ್ಷ ರೂಗಳ ಒಂದು ವಿದ್ಯತ್ ಟ್ರಾನ್ಸ್ ಫಾರ್ಮರ್ ಹಾಗೂ 8 ಲಕ್ಷದ 2 ಪಂಪ್ ಗಳನ್ನು ಅಳವಡಿಸಲಾಗಿದೆ.

ಕಸವಿಲೇವಾರಿಗಾಗಿ ಸಮರ್ಪಕವಾದ ಸ್ಥಳ ಲಭ್ಯವಾಗದೇ ಇರುವುದು ಸಮಸ್ಯೆ ಎದುರಿಸಲಾಗುತ್ತಿದೆ. ಈಗ ಪಟ್ಟಣದ ಮನೆ ಮನೆಯಿಂದ ಕಸವನ್ನು ವಾಹನದ ಮೂಲಕ ನೇರವಾಗಿ ಸಂಗ್ರಹ ಮಾಡಲಾಗುತ್ತಿದೆ. ವಾಹನಕ್ಕೆ ಕಸ ತೆಗೆದುಕೊಳ್ಳುವಾಗ ಹಸಿ ಮತ್ತು ಒಣ ಕಸವನ್ನು ಬೇರೆ ಬೇರೆಯಾಗಿ ತೆಗೆದುಕೊಳ್ಳಲಾಗುತ್ತಿದೆ. ಹಸಿಕಸವನ್ನು ಉದ್ಯಾನವನದ ಒಂದು ಮೂಲೆಯಲ್ಲಿ ಗೊಬ್ಬರ ಮಾಡಲಾಗುತ್ತದೆ. ಒಣ ಕಸವನ್ನು ಹೆರವಟ್ಟಾ ಒಣ ತ್ಯಾಜ್ಯ ವಿಂಗಡಣೆ ಕೇಂದ್ರದಲ್ಲಿ ವಿಂಗಡಣೆ ಮಾಡಿ ಮಾರಾಟಮಾಡಲಾಗುತ್ತದೆ. ಯಾವುದಕ್ಕೂ ಉಪಯೋಗಕ್ಕೆ ಬಾರದ ಕಸವನ್ನು ಹೊನ್ನಾವರ ಪಟ್ಟಣ ಪಂಚಾಯತಿ ಕಸವಿಲೇವಾರಿ ಸ್ಥಳಕ್ಕೆ ಹಾಕಲಾಗುತ್ತಿದೆ. ಮನೆ ಮನೆ ಕಸ ಸಂಗ್ರಹಕ್ಕಾಗಿ 5 ಹೊಸ ವಾಹನವನ್ನು ಕರೀದಿಸಲಾಗಿದೆ. ನಗರದಲ್ಲಿ ತ್ಯಾಜ್ಯ ಘಟಕ ಇಲ್ಲದಿರುವದರಿಂದಾಗಿ ಕಸದ ವಿಲೇವಾರಿಗಾಗಿ 36 ಲಕ್ಷದ ಕೊಂಪೇಕ್ಟರ್ ವಾಹನವನ್ನು ಕರೀದಿಸಲಾಗಿದೆ.
ಕಿತ್ತೂರು ಚೆನ್ನಮ್ಮ ಉದ್ಯಾನವನ ಅಭಿವೃದ್ಧಿಗೆ 17 ಲಕ್ಷ ಹಾಗೂ ವಿವೇಕ ನಗರ ಗಾರ್ಡನ್ ಅಭಿವೃದ್ಧಿಗಾಗಿ 6 ಲಕ್ಷ ವಿನಿಯೋಗಿಸಲಾಗಿದೆ. ಚಿತ್ರಗಿ ಕಲ್ಗುಡ್ಡದಲ್ಲಿ ಜಲಸಂಗ್ರಹಗಾರ ನಿರ್ಮಿಸಲು 44.54 ಲಕ್ಷ ಮಂಜೂರಿ ಪಡೆಯಲಾಗಿದ್ದು, ಕಾಮಗಾರಿ ಮಳೆಗಾಲ ಮುಗಿದ ಬಳಿಕ ಪ್ರಾರಂಭಿಸಲಾಗುತ್ತದೆ ಎನ್ನುತ್ತಾರೆ ಪರಸಭೆಯವರು. ನಗರದಲ್ಲಿ ನೀರು ಸರಬರಾಜಿಗಾಗಿ ಹಾಕಿರುವ ಪೈಪ್ ಲೈನ್ ತುಂಬ ಹಳೆಯದಾಗಿದ್ದು ಅನೇಕ ಕಡೆ ನೀರು ವ್ಯಯವಾಗುತ್ತಿದೆ. ಅದಕ್ಕಾಗಿ ನೂತನ ಪೈಪ್ ಲೈನ ಅಳವಡಿಕೆ.

ಸುರಕ್ಷತೆಗಾಗಿ ನಗರದಲ್ಲಿ ಜನರು ಓಡಾಡಲು ಅನುಕೂಲವಾಗುವಂತೆ ಫೂಟ್ ಫಾತ್, ರಸ್ತೆ ಶೋಲ್ಡರ್ ಅವಶ್ಯಕತೆ ಇದೆ.
ನಗರದಲ್ಲಿ ಎಲ್ಲಾ ರಸ್ತೆಗಳ ರಿಪೇರಿಯಷ್ಟೇ ಮಾಡದೇ ಸಂಪೂರ್ಣ ಮರುಡಾಂಬರೀಕರಣವಾಗಬೇಕು. ತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪನೆ ಮತ್ತು ಸಮರ್ಪಕವಾದ ನಿರ್ವಹಣೆ. ಸಮರ್ಪಕವಾದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದು ಮತ್ತು ಅತೀ ವೇಗದಲ್ಲಿ ವಾಹನ ಓಡಿಸುವುದಕ್ಕೆ ಕಡಿವಾಣ ಹಾಕುವದು. ಒಟ್ಟಾರೆ ಅಪೂರ್ಣವಾದ ಕಾಮಗಾರಿಗಳಿಂದ ಜನರರಿಗೆ ಪೂರ್ಣ ಪ್ರಮಾಣದ ಪ್ರಯೋಜನ ದೊರಕದಂತಾಗಿದೆ.

loading...