ಹಸಿರು ಕರ್ನಾಟಕ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ

0
9
loading...

ಕನ್ನಡಮ್ಮ ಸುದ್ದಿ-ಧಾರವಾಡ: 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಘೋಷಿಸಿರುವ ಹಸಿರು ಕರ್ನಾಟಕ ಯೋಜನೆಯನ್ನು ಅ.15 ರಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ಜರುಗಿತು.
ಜಿಲ್ಲಾಧಿಕಾರಿ ಎಂ. ದೀಪಾ ಅಧ್ಯಕ್ಷತೆವಹಿಸಿ ಮಾತನಾಡಿ, ಮುಖ್ಯಮಂತ್ರಿಗಳ ಆಶಯದಂತೆ ಆಯವ್ಯಯದಲ್ಲಿ ಘೋಷಿಸಿರುವ ಹಸಿರು ಕರ್ನಾಟಕ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಯಾ ಇಲಾಖೆ, ಸಂಸ್ಥೆಗಳ ಮುಖ್ಯಸ್ಥರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಈಗಾಗಲೇ ಅರಣ್ಯ ಇಲಾಖೆಯು ಹಸಿರು ಕರ್ನಾಟಕ ಯೋಜನೆಗೆ ಅಗತ್ಯವಿರುವ ಸಸಿಗಳನ್ನು ಹೊಂದಿದೆ. ಸರ್ಕಾರಿ ಕಚೇರಿ ಹಾಗೂ ಶಾಲಾ, ಕಾಲೇಜುಗಳ ಮುಖ್ಯಸ್ಥರು ಮತ್ತು ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಹಾಗೂ ಅಧೀನದಲ್ಲಿರುವ ಭೂಮಿ ವಿವರಗಳನ್ನು ಹಾಗೂ ಅಗತ್ಯವಿರುವ ಸಸಿಗಳ ಸಂಖ್ಯೆಯನ್ನು ಕೂಡಲೇ ಅರಣ್ಯ ಇಲಾಖೆಗೆ ತಿಳಿಸಬೇಕು ಎಂದು ಸೂಚಿಸಿದರು.
ಹಸಿರು ಕರ್ನಾಟಕ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಗಸ್ಟ್ 15 ರಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಮಟ್ಟದಲ್ಲಿ ಚಾಲನೆಗೊಳಿಸಲಿದ್ದಾರೆ. ಆಯಾ ತಾಲೂಕಿನಲ್ಲಿ ಸ್ಥಳೀಯ ಶಾಸಕರು ತಾಲೂಕಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಗಸ್ಟ್ 15 ರಿಂದ 18 ರ ವರೆಗೆ ನಾಲ್ಕು ದಿನಗಳ ಕಾಲ ಹಸಿರು ಕರ್ನಾಟಕ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು ಎಲ್ಲರೂ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ಸ್ನೇಹಲ್ ಮಾತನಾಡಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ವಸತಿ ನಿಲಯಗಳು, ವಸತಿ ಶಾಲೆಗಳು ಮತ್ತು ಸ್ಥಳವಕಾಶ ಹೊಂದಿರುವ ಗ್ರಾಮ ಪಂಚಾಯತ್‍ಗಳ ಕಚೇರಿ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲು ಸಂಬಂಧಿತ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ಉಪಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶ್‍ಕುಮಾರ್, ಉಪವಿಭಾಗಾಧಿಕಾರಿ ಮಹ್ಮದ್ ಝುಬೇರ್.ಎನ್., ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್. ರುದ್ರಪ್ಪ, ಪರಿಸರ ಸಮಿತಿಯ ಶಂಕರ ಕುಂಬಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ವಿಜಯಕುಮಾರ್ ಕಡಕಭಾವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

loading...