ಹಸಿರು ಪಟ್ಟಣವನ್ನಾಗಿಸಲು ಎಲ್ಲರೂ ಕೈಜೋಡಿಸಿ: ರಂಗಣ್ಣವರ

0
2
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಮನೆಗೊಂದು ಮರ, ಊರಿಗೊಂದು ತೋಪು, ತಲೂಕಿಗೊಂದು ಕಿರು ಅರಣ್ಯ ಜಿಲ್ಲೆಗೊಂದು ವನ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಸಕ್ತ ಆಯವ್ಯಯದಲ್ಲಿ ಹಸಿರು ಕರ್ನಾಟಕ ಆಂದೋಲನವನ್ನು ಎಲ್ಲೆಡೆ ಹಮ್ಮಿಕೊಳ್ಳಲಾಗಿದೆ ಎಂದು ರೋಣ ಉಪ ವಲಯ ಅರಣ್ಯಾಧಿಕಾರಿ ಎಸ್.ರಂಗಣ್ಣವರ ತಿಳಿಸಿದರು.
ಪಟ್ಟಣದ ಸರಕಾರಿ ಕಾಲೇಜು ಆವರಣದಲ್ಲಿ ಅರಣ್ಯ ಇಲಾಖೆ ಗದಗ, ಪಟ್ಟಣ ಪಂಚಾಯಿತಿ ನರೇಗಲ್, ಗ್ರೀನ ಆರ್ಮಿ ತಂಡ, ಸರಕಾರಿ ಪ್ರೌಢ ಶಾಲೆ, ಪಿಯು ಕಾಲೇಜು ಹಾಗೂ ಪದವಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಚಾಲನೆ ನೀಡಲಾದ ಹಸಿರು ಕರ್ನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಸಿರು ಕರ್ನಾಟಕ ಯೋಜನೆಗೆ ಅಗತ್ಯವಿರುವ ಸಸಿಗಳನ್ನು ಇಲಾಖೆಯಿಂದ ಪೂರೈಸಲಾಗುತ್ತದೆ. ಈ ಕಾರ್ಯಕ್ರಮದಡಿ ಸಣ್ಣಪುಟ್ಟ ಬೋಳು ಗುಡ್ಡಗಳು, ಗೋಮಾಳಗಳು, ಸರಕಾರಿ ಜಮೀನುಗಳು, ಸರಕಾರಿ ಇಲಾಖೆಯ ಕಚೇರಿ ಬಯಲು ಆವರಣ, ಶಾಲಾ-ಕಾಲೇಜು ಆವರಣ, ರೈತರ ಜಮೀನು, ಉದ್ಯಾನವನ ಮತ್ತು ಹಂತ ಹಂತವಾಗಿ ಮನೆಗಳ ಅಂಗಳಗಳಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು, ಶಾಲಾ ಕಾಲೇಜುಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎಂದರು. ಕರ್ನಾಟಕ ಅರಣ್ಯ ಪ್ರದೇಶವನ್ನು ಶೇ. 33 ಕ್ಕೆ ಹೆಚ್ಚಿಸಲು ಹಾಗೂ ಗದಗ ಜಿಲ್ಲೆಯಲ್ಲಿ ಕೇವಲ ಶೇ. 7ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇದ್ದು ಸಸಿಗಳನ್ನು ನೆಟ್ಟು ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಾಗಿದೆ ಎಂದರು.
ಪದವಿ ಪ್ರಾಚಾರ್ಯ ಬಸವರಾಜ ಬಳಗಾನೂರಮಠ ಮಾತನಾಡಿ, ಮಾನವ ಸಂಕುಲದ ಅಭಿವೃದ್ದಿಗೆ ಪರಿಸರ ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ. ನಾವಿಂದು ಕೇರಳ, ಕೊಡಗು, ಹಾಸನದಲ್ಲಿನ ಅತೀವೃಷ್ಠಿಯಿಂದಾಗಿ ಆಗುತ್ತಿರುವ ಜಲಪ್ರಳಯ, ಭೂಕುಸಿತ ಹಾಗೂ ಉತ್ತರ ಕರ್ನಾಟಕದಲ್ಲಿನ ಭೀಕರ ಬರಗಾಲ, ಅಂತರ್ಜಲ ಕುಸಿತ, ಹೆಚ್ಚುತ್ತಿರುವ ತಾಪಮಾನ ಪರಿಸರದ ನಾಶಕ್ಕೆ ಕಾರಣವಾಗಿದೆ. ಆದ್ದರಿಂದ ಎಲ್ಲರೂ ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಆರೋಗ್ಯ ನೀರಿಕ್ಷಕ ಎನ್.ಎಮ್.ಹಾದಿಮನಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಿಡ ಮರ ಬೆಳೆಸಿ ಹಸಿರೀಕರಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಈ ಅಭಿಯಾನದ ಮೂಲದ ಆಗಬೇಕಿದೆ. ಶಾಲಾ ಶಿಕ್ಷಕರಿಗೆ ಈ ಬಗ್ಗೆ ಹೆಚ್ಚು ತಿಳುವಳಿಕೆ ನೀಡಿ ವಿದ್ಯಾರ್ಥಿಗಳನ್ನು ಉತ್ತೇಜಿಸುವಂತೆ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಸಿ ನೆಡುವ ಮೂಲಕ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಎನ್.ಎಂ.ಪವಾಡಿಗೌಡರ, ಎಸ್.ಬಿ.ನಿಡಗುಂದಿ, ಎಸ್.ಸಿ.ಗುಳಗೊಣ್ಣವರ, ಎಸ್.ಎನ್.ಚಕ್ರಸಾಲಿ, ಕೆ.ಶಿವುಕುಮಾರ, ಕೆ.ಎಚ್.ಅಂಜನಮೂರ್ತಿ, ಶಿವುಕುಮಾರ ಹಿರೆಹಾಳ, ಶಿವು ಕೊಪ್ಪದ, ಸಂತೋಷ ಮಣ್ಣೋಡ್ಡರ, ನಿಂಗಪ್ಪ ಮಡಿವಾಳ, ಎಂ.ಎಚ್.ಕಾತರಕಿ ಹಾಗೂ ಶಾಲಾ ಕಾಲೇಜಿನ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಗ್ರೀನ್ ಆರ್ಮಿ ತಂಡದ ಸದಸ್ಯರು ಇದ್ದರು.ಹಸಿರು ಕರ್ನಾಟಕ ಅಭಿಯಾನದಡಿ ನರೇಗಲ್ಲ ಪಟ್ಟಣದಲ್ಲಿ 900 ಸಸಿಗಳನ್ನು ಸರ್ಕಾರಿ ಶಾಲಾ ಕಾಲೇಜಿನ ಆವರಣದಲ್ಲಿ, ಹಿರೇಕೆರೆ ದಂಡೆಯ ಮೇಲೆ ಎಸ್.ಡಬ್ಲೂ ಲೇಯವುಟ್ ಇತರೆ ಖಾಲಿ ಜಾಗಗಳಲ್ಲಿ ನೆಡಲಾಗುತ್ತದೆ. ಇಲಾಖೆಯವರು ಒದಗಿಸುವ ಸಸಿಗಳನ್ನು ರೈತರು ನೆಟ್ಟು ಪೋಷಿಸಿದ್ದಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರೋತ್ಸಾಹ ಧನವನ್ನೂ ಸಹ ನೀಡಲಾಗುವುದು.ಎಸ್.ರಂಗಣ್ಣವರ, ಉಪವಲಯ ಅರಣ್ಯಾಧಿಕಾರಿ ರೋಣ.

loading...