ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು

0
18
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಜಲ ಪ್ರಳಯದಿಂದ ಶಬರಿಮಲೈ ತತ್ತರಿಸಿದ ಹಿನ್ನೆಲೆಯಲ್ಲಿ ಕೇರಳದಲ್ಲಿ ವಿಪರೀತ ಮಳೆಯಿಂದ ಬಹುತೇಕ ರಸ್ತೆ ಸಂಪರ್ಕ ಬಂದ್ ಆಗಿದ್ದು, ಶಬರಿಮಲೈ ಯಾತ್ರಿಕರಿಗೂ ಇದರಿಂದ ತೊಂದರೆಯಾಗಿದೆ. ಆದರೆ, ಕಲಬುರಗಿಯಿಂದ ಶಬರಿಮಲೈ ಯಾತ್ರೆ ಹೊರಟಿದ್ದ ನೂರಾರು ಭಕ್ತರಿಗೆ ಈ ಸಮಸ್ಯೆಯ ಬಿಸಿ ತಟ್ಟಲಿಲ್ಲ. ಅವರೆಲ್ಲರೂ ಹುಬ್ಬಳ್ಳಿಯಲ್ಲೇ ಅಯ್ಯಪ್ಪಸ್ವಾಮಿ ದರ್ಶನ ಪಡೆದುಕೊಂಡರು. ಕಲಬುರಗಿಯಿಂದ ಬಸ್, ಕಾರು ಸೇರಿ ವಿವಿಧ ವಾಹನಗಳಲ್ಲಿ ಶಬರಿಮಲೈ ಯಾತ್ರೆಗೆ ಹೊರಟಿದ್ದ ನೂರಕ್ಕೂ ಹೆಚ್ಚು ಮಾಲಾಧಾರಿ ಅಯ್ಯಪ್ಪ ಭಕ್ತರಿಗೆ ಹುಬ್ಬಳ್ಳಿಯೇ ಪವಿತ್ರ ಯಾತ್ರಾ ಸ್ಥಳವಾಯಿತು.
ಹುಬ್ಬಳ್ಳಿಯ ಶಿರೂರ ಪಾರ್ಕ್​ನಲ್ಲಿರುವ ಶಬರಿಮಲೈ ತದ್ರೂಪಿ ಅಯ್ಯಪ್ಪಸ್ವಾಮಿ ದೇಗುಲದ ಬಗ್ಗೆ ತಿಳಿದುಕೊಂಡಿದ್ದ ಮಾಲಾಧಾರಿಗಳು, ಇಲ್ಲಿಗೆ ಬಂದು ದರ್ಶನ ಪಡೆದು ಪೂಜೆ ಸಲ್ಲಿಸಿದರು.ಹವಾಮಾನ ವೈಪರೀತ್ಯದಿಂದ ಶಬರಿಮಲೈ ಯಾತ್ರೆ ಕೈಗೂಡದಿದ್ದರೂ ಅದೇ ಮಾದರಿಯಲ್ಲಿರುವ ಹುಬ್ಬಳ್ಳಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಭಕ್ತಿ ಸೇವೆ ಸಲ್ಲಿಸುವ ಮೂಲಕ ಕೃತಾರ್ಥರಾದರು. ತಂದಿದ್ದ ಇರುಮುಡಿಯೊಂದಿಗೆ 18 ಮೆಟ್ಟಿಲುಗಳನ್ನು ಹತ್ತಿ, ಆರಾಧ್ಯ ದೇವರಿಗೆ ವಿಶೇಷ ಅಭಿಷೇಕ ಮಾಡಿಸಿದರು.
ಕೈಗೊಂಡ ವ್ರತದಂತೆ ಪೂಜೆಯನ್ನೂ ಸಲ್ಲಿಸಿದರು. ಅಯ್ಯಪ್ಪ ದೇವಸ್ಥಾನದ ಆನಂದ ಗುರುಸ್ವಾಮಿ, ಮಾಲಾಧಾರಿ ಭಕ್ತರಿಗೆ ಅಗತ್ಯ ಮಾರ್ಗದರ್ಶನ ಮಾಡಿದರು. ಶಬರಿಮಲೈ ಸ್ವಾಮಿ ಭಕ್ತರಿಗೆ ಹುಬ್ಬಳ್ಳಿಯ ಅಯ್ಯಪ್ಪ ದೇಗುಲ ಬಹಳಷ್ಟು ಅನುಕೂಲ ಒದಗಿಸಿದೆ. ಈ ಬಾರಿ ಕೇರಳದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಯಾತ್ರೆ ಸಾಧ್ಯವಾಗಲಿಲ್ಲ. ಆದರೆ, ಹುಬ್ಬಳ್ಳಿಯ ಶಬರಿಮಲೈ ತದ್ರೂಪಿ ಅಯ್ಯಪ್ಪ ದೇವಸ್ಥಾನ ಅದೇ ಅನುಭವ ನೀಡಿತು. ನಾವೆಲ್ಲ ಅಯ್ಯಪ್ಪನ ದರ್ಶನ ಪಡೆದು, ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಸಂತೋಷ ಪಟ್ಟಿದ್ದೇವೆ ಎಂದು ಮಾಲಾಧಾರಿ ಭಕ್ತರು ಹರ್ಷ ವ್ಯಕ್ತಪಡಿಸಿದರು.ರಾಜ್ಯದ ವಿವಿಧೆಡೆಯಿಂದ ನಿತ್ಯ ಹಲವು ಭಕ್ತರು ಇಲ್ಲಿಗೆ ಬರುತ್ತಾರೆ. ಅದೇ ರೀತಿ ಮಾಲಾಧಾರಿಗಳೂ ವ್ರತದಂತೆ ಇಲ್ಲಿ ಪೂಜೆ ನೆರವೇರಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆದು ಧನ್ಯರಾಗುತ್ತಾರೆ. ಶಬರಿಮಲೈ ಯಾತ್ರೆಗೆ ರಸ್ತೆ ಸಂಪರ್ಕ ಬಂದ್ ಆಗಿರುವುದರಿಂದ ಇನ್ನೂ ಅನೇಕ ಮಾಲಾಧಾರಿಗಳು ಇಲ್ಲಿಗೆ ಬರಲು ಸಜ್ಜಾಗಿದ್ದಾರೆ. ವಿಜಯಪುರ ಜಿಲ್ಲೆ ಭಕ್ತರು ಬಂದು ದರ್ಶನ ಪಡೆದರು.

loading...