ಹೊಸ ಪ್ರಸ್ತಾವನೆಯಂತೆ ಯೋಜನೆ ಅನುಷ್ಠಾನಗೊಳಿಸಲು ಸೂಚನೆ

0
6
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ನಗರದ ಕ್ಲಬ್ ರಸ್ತೆ ರೈಲ್ವೆ ಬ್ರಿಡ್ಜ್ ಮೇಲ್ದರ್ಜೆಗೇರಿಸುವ ಹಾಗೂ ದೇಸಾಯಿ ವೃತ್ತದಲ್ಲಿ ರಸ್ತೆ ನಿರ್ಮಿಸುವ ಗೊಂದಲ ಅಂತ್ಯ ಕಂಡಿದೆ.
ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗ, ಮಹಾನಗರ ಪಾಲಿಕೆ, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಇದುವರೆಗಿನ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲಾಯಿತು. ರೈಲ್ವೆ ಬ್ರಿಜ್ ಅನ್ನು 8.50 ಅಡಿ ಎತ್ತರಕ್ಕೆ ಏರಿಸಲು ಈ ಮೊದಲು ತಿರ್ಮಾನಿಸಲಾಗಿತ್ತು. ಆದರೆ ಇದೀಗ ರೈಲ್ವೆ ಇಲಾಖೆ ಬ್ರಿಜ್ ಎತ್ತರವನ್ನು 5 ಅಡಿ ಏರಿಸಲು ನಿರ್ಧರಿಸಿದ್ದರಿಂದ ದೇಸಾಯಿ ವೃತ್ತದ ರಸ್ತೆ 1 ಅಡಿಯಷ್ಟು ಮಾತ್ರ ಎತ್ತರಕ್ಕೆ ಏರಲಿದೆ ಎಂಬ ಹೊಸ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಅಧಿಕಾರಿಗಳು ಸಲ್ಲಿಸಿದರು.
ಹೊಸ ಪ್ರಸ್ತಾವನೆಯಂತೆ ಯೋಜನೆ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ರೈಲ್ವೆ ಬ್ರಿಜ್ ಎತ್ತರಕ್ಕೆ ಏರಿಸುವ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಬ್ರಿಜ್ ಮೇಲಿನ ಒಂದು ಬದಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಇರುತ್ತದೆ. ಆದರೆ ಅಂತಿಮ ಹಂತದ ಮೂರು ತಿಂಗಳಲ್ಲಿ ಮಾತ್ರ ಬ್ರಿಜ್ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಸಂಸದ ಪ್ರಲ್ಹಾದ ಜೋಶಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ದೇಸಾಯಿ ವೃತ್ತದ ಅಕ್ಕಪಕ್ಕದ ಪಿಂಟೊ ಹಾಗೂ ಐಬಿ ರಸ್ತೆಯನ್ನೂ ಇದಕ್ಕೆ ಸಮಾನಾಂತರವಾಗಿ ಎತ್ತರಿಸಲು ಲೋಕೋಪಯೋಗಿ ಇಲಾಖೆ ತೀರ್ಮಾನಿಸಿದೆ. ದೇಸಾಯಿ ವೃತ್ತದ ಅಕ್ಕಪಕ್ಕ 3 ಮೀಟರ್ ಅಗಲದ ಸರ್ವಿಸ್ ರಸ್ತೆ ನಿರ್ವಣಗೊಳ್ಳಲಿದೆ. ಸರ್ವಿಸ್ ರಸ್ತೆಯ ತ್ರಿಡಿ ನೀಲನಕ್ಷೆ ರಚಿಸಿ, ಸೋಮವಾರ ಸಂಪೂರ್ಣ ವಿವರ ನೀಡುವಂತೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಎನ್.ಎಂ. ಕುಲಕರ್ಣಿ, ಬಿಜೆಪಿ ಮುಖಂಡ ಎಂ. ನಾಗರಾಜ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

loading...