ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಲೋಪವಾದರೆ ಕಠಿಣಕ್ರಮ: ಎಂ ದೀಪಾ

0
2
loading...

ಕನ್ನಡಮ್ಮ ಸುದ್ದಿ-ಧಾರವಾಡ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳÀ ಸಮುದಾಯದ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಅನುದಾನವನ್ನು ಕಾಲಮಿತಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಅಧಿಕಾರಿಗಳು ನಿಧಾನಗತಿ ಅನುಸರಿಸಿದರೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಲೋಪವಾದರೆ ಸಂಬಂಧಿತ ಅಧಿಕಾರಿಗಳನ್ನು ಹೊಣೆಗಾರರಾಗಿಸಿ ಶಿಸ್ತುಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಎಂ.ದೀಪಾ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಶನಿವಾರ ನಡೆದ 2018-19ನೇ ಸಾಲಿನ ಜುಲೈ 2018ರ ಅಂತ್ಯದವರೆಗಿನ ವಿವಿಧ ಇಲಾಖೆಗಳ ಎಸ್‌.ಸಿ.ಎಸ್‌.ಪಿ ಮತ್ತು ಟಿ.ಎಸ್‌.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯನ್ವಯ ಪ್ರತಿ ವರ್ಷ ಎಲ್ಲ ಇಲಾಖೆಗಳು ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಆದರೆ ಕೆಲವು ಇಲಾಖೆಗಳ ಅಧಿಕಾರಿಗಳು ಅನುದಾನ, ಕ್ರಿಯಾಯೋಜನೆ ಅನುಮೋದನೆಯ ವಿಳಂಬದ ನೆಪವೊಡ್ಡಿ ಪ್ರಗತಿಯಲ್ಲಿ ಕಡಿಮೆ ಸಾಧನೆ ತೋರಿಸುತ್ತಾರೆ. ನಿಗದಿಗೊಳಿಸಿದ ಅನುದಾನವನ್ನು ಆಯ್ಕೆಮಾಡಿಕೊಂಡ ಕಾರ್ಯಕ್ರಮ, ಕಾಮಗಾರಿಗಳಿಗೆ ಕಾಲಮಿತಿಯಲ್ಲಿ ವೆಚ್ಚ ಮಾಡಬೇಕು. ಯಾವುದೇ ಕಾರಣಕ್ಕೂ ಹಂಚಿಕೆ ಮತ್ತು ಬಿಡುಗಡೆಯಾದ ಹಣ ವಾಪಸು ಆಗದಂತೆ ಎಚ್ಚರಿಕೆ ವಹಿಸಿ, ಕೆಲಸಮಾಡಬೇಕು.
ಇಲ್ಲದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದು ಅವರು ಹೇಳಿದರು.
ಪ್ರಗತಿ ಪರಿಶೀಲನಾ ಸಭೆಯನ್ನು ಪ್ರತಿ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಇಲಾಖೆಗಳಿಂದ ಸಲ್ಲಿಕೆಯಾಗುವ ಪ್ರಗತಿ ವರದಿಗಳು ನಿಖರವಾಗಿರಬೇಕು. ಜಿಲ್ಲಾ ಖಜಾನೆಯಿಂದ ಪ್ರತಿ ತಿಂಗಳು ಇಲಾಖಾವಾರು ವೆಚ್ಚದ ಮಾಹಿತಿಯನ್ನು ಪಡೆದು ಅದನ್ನು ಸಲ್ಲಿಕೆಯಾಗಿರುವ ವರದಿಗಳೊಂದಿಗೆ ಹೋಲಿಕೆಮಾಡಿ, ಪರಿಶೀಲಿಸಿ ಅಂತಿಮ ವರದಿಯನ್ನು ತಯಾರಿಸಿ ಸಲ್ಲಿಸುವಂತೆ ಆದೇಶಿಸಿದರು. ಪ್ರಗತಿ ವರದಿಯ ಅಂಶಗಳನ್ನು ಮಾತ್ರ ಪ್ರಗತಿ ಪರಿಶೀಲನಾ ಸಭೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಇಲಾಖೆ ಅಧಿಕಾರಿಗಳು ಸಭೆಗೆ ಕಳೆದ ಸಾಲಿನಲ್ಲಿ ಕೈಗೊಂಡ ಕಾರ್ಯಕ್ರಮ ಮತ್ತು ಕಾಮಗಾರಿಗಳ ಆರ್ಥಿಕ, ಭೌತಿಕ ಪ್ರಗತಿಯನ್ನು ಮತ್ತು ಪ್ರಸಕ್ತ ಸಾಲಿಗೆ ಕೈಗೊಳ್ಳಲಿರುವ ಕಾಮಗಾರಿ, ಅನುದಾನದ ಮಾಹಿತಿಯನ್ನು ವಿವರವಾಗಿ ಸಲ್ಲಿಸಬೇಕು. ಪ್ರತಿ ಇಲಾಖೆಯು ಯೋಜನೆಗಳ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸಿ, ಆದÀ್ಯತೆ ನೀಡಿ ಪ್ರಗತಿ ಸಾಧಿಸಬೇಕು ಎಂದು ಅವರು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್‌ ಆರ್‌, ಜಂಟಿ ಕೃಷಿನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ಮಡಿವಾಳರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್‌.ಎಸ್‌. ಮುಳ್ಳೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸದಾನಂದಗೌಡ ಪಾಟೀಲ ಸೇರಿದಂತೆ ಜಿಲ್ಲಾ ಪಂಚಾಯತ್‌ ಲೋಕೊಪಯೋಗಿ, ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಉನ್ನತ ಶಿಕ್ಷಣ ಇಲಾಖೆ, ಕೊಳಗೇರಿ ಅಭಿವೃದ್ಧಿ ಮಂಡಳಿ, ವಿಶ್ವವಿದ್ಯಾಲಯಗಳು, ಹೆಸ್ಕಾಂ, ಕೆ.ಎಂ.ಎಫ್‌ ಸೇರಿದಂತೆ ವಿವಿಧ ಇಲಾಖೆ, ನಿಗಮ ಮಂಡಳಿಗಳ ಅಧಿಕಾರಿಗಳು ಪಾಲ್ಗೊಂಡು ಪ್ರಗತಿ ವರದಿ ಸಲ್ಲಿಸಿದರು.

loading...