ಗಣಿಗಾರಿಕೆಯಿಂದ ಜಲ ಮೂಲಗಳ ನಾಶ: ಸರದೇಶಪಾಂಡೆ ಕಳವಳ

0
1
loading...

ಕನ್ನಡಮ್ಮ ಸುದ್ದಿ-ಧಾರವಾಡ: ಮಲಪ್ರಭಾ ಯೋಜನೆಯ ದೊಡ್ಡ ಸಾಗರವೇ ಇದ್ದರೂ ಅದರ ಪಕ್ಕದ ಮುನವಳ್ಳಿ ಗ್ರಾಮ ನೀರಿನ ಸಂಕಷ್ಟದಿಂದ ತತ್ತರಿಸುತ್ತಿರುವುದು ಅಭಿವೃದ್ಧಿ ಮಾದರಿಯ ವಿಪರ್ಯಾಸ ಎಂದು ನಿವೃತ್ತ ಸೇನಾಧಿಕಾರಿ ಹಾಗೂ ಪರಿಸರ ತಜ್ಞ ಲೆ.ಜ. ಎಸ್‌. ಸಿ. ಸರದೇಶಪಾಂಡೆ ಹೇಳಿದರು.
ವಾಲ್ಮಿ ಸಂಸ್ಥೆಯಲ್ಲಿ ಹುಬ್ಬಳ್ಳಿ-ಧಾರವಾಡದ ಜಲಮೂಲಗಳ ಸಂರಕ್ಷಣೆ ಸವಾಲುಗಳು ಹಾಗೂ ಪರಿಹಾರಗಳು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಂತಹ ಯೋಜನೆಯಿಂದ ನೀರು ಲಭ್ಯವಾಗಿದ್ದರೂ, ಕಬ್ಬಿನಂತಹ ಬೆಳೆಗಳನ್ನು ಬೆಳೆಯುವುದರಿಂದ ನೀರಿನ ದುರ್ಬಳಕೆಯಾಗುತ್ತಿದೆ. ಇದು ಕುಡಿಯುವ ನೀರಿನ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಇದು ಒಳ್ಳೆಯ ಲಕ್ಷಣವಲ್ಲ ಎಂದರು. ಸುಂದರವಾದ ಸಹ್ಯಾದ್ರಿ ಪರ್ವತಗಳ ನಾಶದಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಜಲ ಸಂಕಷ್ಟ ಉಂಟಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಜಲ ಮೂಲಗಳ ನಾಶವಾಗುತ್ತಿದೆ. ಅದೇ ರೀತಿ ಅನಾವಶ್ಯಕ ಪರಿಸರ ವಿರೋಧಿ ಕಾರ್ಖಾನೆಗಳ ನಿರ್ಮಾಣದಿಂದ ಅರಣ್ಯ ನಾಶವಾಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸಾಕಷ್ಟು ಕೆರೆಗಳು, ಬಾವಿಗಳು ನಗರದ ಜಲ ಮೂಲವಾಗಿದ್ದವು. ಈ ಕೆರೆಗಳಿಂದು ಮಾಲಿನ್ಯದಿಂದ ವಿನಾಶದ ಅಂಚಿನಲ್ಲಿವೆ ಎಂದರು.
ನೇಚರ್‌ ಫಸ್ಟ್‌ರ್ ಸಂಸ್ಥೆಯ ಅಧ್ಯಕ್ಷ ಪಿ. ವಿ. ಹಿರೇಮಠ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಜಲ ಮೂಲಗಳ ನಾಶಕ್ಕೆ ಕಾರಣಗಳನ್ನು ವಿಶ್ಲೇಷಿಸಿ, ನಿಸರ್ಗ ಸಂರಕ್ಷಣೆ ಮೂಲಕ ಜಲ ಸಂಪನ್ಮೂಲಗಳ ರಕ್ಷಣೆಯಾಗಬೇಕೆಂದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿದ್ದು, ನೀರಿನ ಸಮಸ್ಯೆಯಾದರೆ ಮುಂಬರುವ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತವಾಗುವ ಸಾಧ್ಯತೆಗಳಿವೆ ಎಂದರು. ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅಧ್ಯಕ್ಷತೆವಹಿಸಿ ಮಾತನಾಡಿ ಜಗತ್ತಿನ ಅನೇಕ ಪ್ರಸಿದ್ಧ ನಗರಗಳು ಜಲ ಸಂಕಷ್ಟದಿಂದ ನರಳುತ್ತಿವೆ. ಹುಬ್ಬಳ್ಳಿ-ಧಾರವಾಡ ನಗರವು ಮುಂಬರುವ ದಿನಗಳಲ್ಲಿ ಜಲ ಸಂಕಷ್ಟವನ್ನು ಎದುರಿಸಲಿದ್ದು, ಸಮಸ್ಯೆಯ ಪರಿಹಾರಕ್ಕಾಗಿ ಪ್ರಭುತ್ವ ಹಾಗೂ ಜನ ಸಮುದಾಯಗಳು ಕೈಜೋಡಿಸಿದಾಗ ಜಲ ಸುಭದ್ರತೆಯನ್ನು ಸಾಧಿಸಬಹುದು ಎಂದರು.
ವಿಜಯಕುಮಾರ ಕಡಕಭಾವಿ, ಸುಮಾರಾಣಿ, ಶಂಕರ ಕುಂಬಿ, ಬಸವರಾಜ ಹೊಂಗಲ, ಚಂದ್ರಶೇಖರ ಭೈರಪ್ಪನವರ, ಡಾ. ನಯನತಾರಾ ನಾಯಕ, ಡಾ. ಪ್ರಕಾಶ ಭಟ್‌ ಉಪಸ್ಥಿತರಿದ್ದರು. ರವೀಂದ್ರ ಭಟ್‌ ಸ್ವಾಗತಿಸಿದರು, ಪಾರ್ವತಿ ಗಿರಿಗೌಡರ ನಿರೂಪಿಸಿದರು. ಡಿ. ಎಸ್‌. ಮದ್ಲಿ ವಂದಿಸಿದರು.

loading...