ಗಣೇಶೋತ್ಸವಕ್ಕೆ ಸಜ್ಜಾಗುತ್ತಿರುವ ಸಾರ್ವಜನಿಕರು

0
0
loading...


|| ನಿಷೇಧದ ಮಧ್ಯವೂ ಪ್ಲಾಸ್ಟರ್ ಗಣೇಶ ಮೂರ್ತಿಗಳ ಮಾರಾಟ ||
ಕನ್ನಡಮ್ಮ ಸುದ್ದಿ
ಅಥಣಿ 10: ವಿಶ್ವದಲ್ಲೆಡೆ ವಿವಿಧ ನಾಮಾಂಕಿಗಳಿಂದ ಆರಾಧಿಸಲ್ಪಡುವ ಏಕಮೇವ ದೇವತೆ ಗಣೇಶನಾಗಿದ್ದಾನೆ. ಜಾತಿ,ಮತ,ಪಂಥ ಬೇದವಿಲ್ಲದೇ ಎಲ್ಲರೂ ಗಣಪತಿ ಬಪ್ಪಾ ಮೋರಯಾ.. ಪುಂಡಿಪಲ್ಲೇ ಸೋರಯಾ…,ಗಣೇಶ ಬಂದಾ ಕಾಯಿ ಕಡಬು ತಿಂದ ಎಂಬ ಹಾಡಿನಂತೆ ಈಗ ಎಲ್ಲಡೆ ಗಣೇಶ ಹಬ್ಬದ ತಯಾರಿ ಬಲು ಜೋರಾಗಿಯೇ ನಡೆದಿದೆ. ಪರಿಸರ ಮಾಲಿನ್ಯ ತಡೆಗಟ್ಟುವ ಮಹತ್ವಾಂಕ್ಷೆಯಿಂದ ಜಿಲ್ಲಾಡಳಿತದ ಆದೇಶದ ಮೇರೆಗೆ ಈ ಬಾರಿ ತಾಲೂಕಾಡಳಿತ ಮೂರ್ತಿ ತಯಾರಕರಿಗೆ ಪಿಓಪಿ ಗಣೇಶ ಮೂರ್ತಿ ತಯಾರಿಸಕೂಡದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಅಥಣಿ ಪಟ್ಟಣದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ವಿವಿಧ ಬಂಗಿಯ ಪಿಓಪಿ ಗಣೇಶ ಮೂರ್ತಿಗಳು ಗ್ರಾಹಕರನ್ನು ಸೆಳೆಯುತ್ತಿರುವದು ವಿಪರ್ಯಾಸದ ಸಂಗತಿಯಾಗಿದೆ.
ಪಟ್ಟಣದ ಬಡಿಗೇರ ಗಲ್ಲಿಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಿದ್ದರೆ, ಇನ್ನೂ ಮಾರುಕಟ್ಟೆಯಲ್ಲಿ 2- 3 ದಿನಗಳಿಂದ ವಿವಿಧ ಅಂಗಡಿಗಲ್ಲಿ ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂರ್ತಿಗಳು ಎದ್ದು ಕಾಣುತ್ತಿವೆ. ಮತ್ತು ಜನರು ಕೂಡಾ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಗಿಂತ ಪಿಓಪಿ ಮೂರ್ತಿಗಳೇ ಜನರನ್ನು ಆಕರ್ಷಿಸುತ್ತಿವೆ. ಪಟ್ಟಣದಲ್ಲಿ ಸುಮಾರು 85ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮಂಡಳಗಳು ಮತ್ತು ಗ್ರಾಮೀಣ ವಿವಿಧ ಯುವಕ ಮಂಡಳಗಳು ಪಿ.ಓ.ಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂಗಡ ಹಣ ನೀಡಿ ಗಣೇಶ ಮೂರ್ತಿಗಳನ್ನು ಗುರುತಿಸುತ್ತಿದ್ದಾರೆ. ಗುರುವಾರ ದಿ.13ರಂದು ಎಲ್ಲಡೆ ಪ್ರತಿಷ್ಠಾಪಿಸಲಾಗುವ ಆಳೆತ್ತರದ ಗಣಪತಿ ಮೂರ್ತಿಗಳು ಮೆರವಣಿಗೆಗೆ ಸಜ್ಜಾಗುತ್ತಿವೆ. ವಿದ್ಯುತ್ ತಂತಿ ಮತ್ತು ಗಿಡ ಮರಗಳಿಂದ ಅನಾಹುತವಾಗಬಾರದೆಂದು 10 ಅಡಿಗಿಂತ ಎತ್ತರದ ಗಣೇಶ ಮೂರ್ತಿಗಳ ಮೆರವಣಿಗೆಯನ್ನು ನಿಷೇದಿಸಲಾಗಿದೆ. ಮಾರುಕಟ್ಟೆಯಲ್ಲಿ ಕನಿಷ್ಠ 50ರೂ ದಿಂದ 20 ಸಾವಿರ ರೂವರೆಗಿನ ಮೂರ್ತಿಗಳು ಈ ಲಭ್ಯವಾಗುತ್ತಿವೆ.ಈ ಬಾರಿ ಸಕಾಲಕ್ಕೆ ಮಳೆಯಾಗದ ಕಾರಣ ಮತ್ತು ಬೆಲೆ ಏರಿಕೆ ಪರಿಣಾಮದಿಂದ ಹಬ್ಬದ ರಂಗು ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ವಿವಿಧ ಬಂಗಿಯ ಗಣಪತಿಗಳು:
ಜಾತಿ,ಮತ,ಪಂಥ ಬೇದವಿಲ್ಲದೇ ವಿಶ್ವದಲ್ಲೆಡೆ ವಿವಿಧ ನಾಮಾಂಕಿತಗಳಿಂದ ಆರಾಧಿಸಲ್ಪಡುವ ಏಕಮೇವ ದೇವತೆ ಗಣೇಶನಾಗಿರುವದರಿಂದ ಮೂರ್ತಿಗಳ ತಯಾರಕರು ಗ್ರಾಹಕರನ್ನು ಸೆಳೆಯಲು ಎತ್ತರದ ಗಣಪತಿಗಳನ್ನು ವಿವಿಧ ಭಂಗಿಗಳಲ್ಲಿ ತಯಾರಿಸುತ್ತಾರೆ. ಶಿವ ಪಾರ್ವತಿಯ ತೊಡೆಯ ಮೇಲೆ ಕುಳಿತ ಗಣೇಶ, ಸಾಯಿ ಬಾಬಾ ರೂಪಿಯ ಗಣೇಶ,ಹನುಮಾನ ವೇಷಧಾರಿಯ ಗಣೇಶ, ಚೋಟಾ ಭೀಮ ಗಣೇಶ, ಶಿವಾಜಿ ಮಹಾರಾಜ ಗಣೇಶ, ಮ್ಯೂಸಿಕ ವಾಹನದಲ್ಲಿ ಗಣೇಶ,ಮಹಾರಾಜಾ ಗಣೇಶ,ಬೈಕ ಮೇಲೆ ಗಣಪ ಇಂತಹ ಹತ್ತು ಹಲವು ಬಗೆಯ ಮೂರ್ತಿಗಳು ಕಂಡು ಬರುತ್ತವೆ.

ಕರ್ಕಶವಾದ ದ್ವನಿವರ್ಧಕಗಳು:
ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಪೊಲೀಸರ ಅಧಿಕಾರಿಗಳು ಈಗಾಗಲೇ ಶಾಂತಿ ಸಭೆ ನಡೆಸಿ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದಯುತವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸುವಂತೆ ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ. ಅನೇಕ ನಿಯಮಗಳನ್ನು ಹೊರಡಿಸಿದ್ದಾರೆ. ಆದರೆ ಅವುಗಳ ಪಾಲನೆ ಮಾತ್ರ ಅಷ್ಟಕಷ್ಟೆ ಎನ್ನುವಂತಿರುತ್ತದೆ. ಡಾಲ್ಬಿ ಸೌಂಡ ಬಾಕ್ಸಗಳನ್ನು ಬಳಸಿ ಅಶ್ಲೀಲ ಹಾಡುಗಳನ್ನು ಹಚ್ಚಿಕೊಂಡು ಕುಡಿದು ಕುಣಿಯುವದು ಮತ್ತು ಕರ್ಕಷ ದ್ವನಿವರ್ಧಕಗಳನ್ನು ಬಳಸಿ ಜನರಿಗೆ ತೊಂದರೆ ಕೊಡುವ ಪರಿಪಾಠ ನಡೆದೆಯಿರುತ್ತದೆ.ಈ ಬಾರಿಯಾದರೂ ಪೊಲೀಸರು ಇದಕ್ಕೆ ಸ್ವಲ್ಪ ಕಡಿವಾಣ ಹಾಕಿದರೆ ಒಳ್ಳೆಯದು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ಒಟ್ಟಾರೆ ಬರಗಾಲವೇ ಇರಲಿ,ಸುಗ್ಗಿಯೇ ಇರಲಿ ಹಬ್ಬಗಳ ಆಚರಣೆ ಮಾತ್ರ ತಪ್ಪಿಲ್ಲ. ಆದರೆ ಹಬ್ಬಗಳು ನಮ್ಮ ಬದುಕಿಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಗಣೇಶ ಮೂರ್ತಿ ತಯಾರಕರು ರಾಸಾಯನಿಕ ಬಳಸದೇ ಮಣ್ಣು ಮತ್ತು ಬತ್ತದ ಹಲ್ಲು ಬಳಸಿ ಸಾದಾ ಬಣ್ಣಗಳನ್ನು ಬಳಸಿ ಪರಿಸರ ಸ್ನೇಹಿ ಗಣಪತಿಗಳನ್ನು ತಯಾರಿಸುವಂತಾಗಬೇಕು. ಅಂತಹ ಸಂದೇಶವನ್ನು ಪ್ರಜ್ಞಾವಂತರು ಮತ್ತು ಪರಿಸರವಾದಿಗಳು, ಸಮಾಜ ಚಿಂತಕರು ಜನರಲ್ಲಿ ಜಾಗೃತಿ ಮೂಡಿಸುವದು ಅಗತ್ಯ.

;;;;;;;;;;;;;;;;;;;;;;;;;;
ರಾಸಾಯನಿಕ ಬಣ್ಣ ಮಿಶ್ರಣವಾಗಿ ಜಲಚರಗಳು ಸಾಯುವದಲ್ಲದೇ ನೀರು ಸಂಪೂರ್ಣ ಹಾಳಾಗಿ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಜೀವ ಸಂಕುಲಕ್ಕೆ ತೊಂದರೆಯಾಗುತ್ತದೆ.ತಾಲೂಕಡಳಿತ ಇದರ ಬಗ್ಗೆ ನಿಗಾ ವಹಿಸಿ ಕಟ್ಟನಿಟ್ಟಾಗಿ ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಬೇಕು.
-ಅಣ್ಣಾಸಾಹೇಬ ತೆಲಸಂಗ,
ಅಧ್ಯಕ್ಷರು ಕರವೇ. ಅಥಣಿ

ಪಿಓಪಿ ಗಣೇಶ ಮೂರ್ತಿಗಳನ್ನು ಜನರಿಗೆ ಕೊಂಡೊಯ್ಯಲು ಸಹಕಾರಿಯಾಗಿವೆ. ಮಣ್ಣಿನ ಮೂರ್ತಿಗಳನ್ನು ನಾವು ತಯಾರಿಸಬಹುದು, ಆದರೆ ಜನರಿಗೆ ಅವು ಆಕರ್ಷಕವಾಗಿರುವದಿಲ್ಲ. ಅವು ಕೊಂಡೊಯ್ಯುವಾಗ ಭಿನ್ನವಾದರೆ ಜನರು ಅತಂಹ ಮೂರ್ತಿಗಳನ್ನು ಪ್ರತಿಷ್ಠಾಪಿಸುವದಿಲ್ಲ.ನಮಗೆ ತಂದು ಕೊಟ್ಟರೆ ನಮಗೂ ನಷ್ಠವಾಗುತ್ತದೆ.ಹಾಗಾಗಿ ಜನರಿಗೆ ಸುಲಭ ದರದಲ್ಲಿ ಗುಣಮಟ್ಟದ ಮೂರ್ತಿಗಳಾಗಿರುವ ಪಿಓಪಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದೇವೆ.
-ವಿಠ್ಠಲ ಬಡಿಗೇರ,
ಮೂರ್ತಿ ತಯಾರಕರು ಮತ್ತು ಮಾರಾಟಗಾರರು ಅಥಣಿ.

loading...