ಗಣೇಶ, ಮೋಹರಂ ಹಬ್ಬ ಶಾಂತಿಯಿಂದ ಆಚರಿಸಲು ಸೂಚನೆ

0
1
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಗೌರಿ, ಗಣೇಶ ಚತುರ್ಥಿ ಹಾಗೂ ಮೋಹರಂ ಹಬ್ಬ ಶಾಂತಿಯುತವಾಗಿ ಆಚರಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸಾರ್ವಜನಿಕರು ನಿಗಾ ವಹಿಸಬೇಕೆಂದು ಎಂದು ಪಿಎಸ್‍ಐ ಬಿ.ವೈ. ಕಜಗಲ್ಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಜರುಗಿದ ಗೌರಿ, ಗಣೇಶ, ಮೋಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರು ಕಾನೂನಿನ ಚೌಕಟ್ಟಿನಲ್ಲಿ ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘಿಸಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಕೊಳ್ಳಲಾಗುತ್ತದೆಂದು ಎಚ್ಚರಿಕೆ ನೀಡಿದರು. ಗಣೇಶ ಚತುರ್ಥಿ ಜೊತೆಗೆ ಮೋಹರಂ ಇರುವುದರಿಂದ ಪರಸ್ಪರ ಸಮುದಾಯದ ಮುಖಂಡರ ಸಹಭಾಗಿತ್ವದಲ್ಲಿ ಹಬ್ಬ ಹರಿದಿನಗಳನ್ನು ಆಚರಿಸಬೇಕು. ವಿಘ್ನವಿನಾಯಕನಿಗೆ ಯಾವುದೇ ಅಡ್ಡ ಆತಂಕ ಎದುರಾಗದಂತೆ ನೋಡಿಕೊಳ್ಳವುದು ಗಣೇಶ ಮಂಡಳಿಯ ಮುಖಂಡರ ಕಾರ್ಯವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಲು ಈಗಾಗಲೇ ಪೊಲೀಸ್ ಇಲಾಖೆಯಿಂದ ವಿವಿಧ ಗಜಾನನ ಮಂಡಳಿ ಮುಖಂಡರಿಗೆ ಸಲಹೆ, ಸೂಚನೆ ನೀಡಲಾಗಿದೆ. ಗಣೇಶ ಪೆಂಡಾಲ್ ಬಳಿ ವಿದ್ಯುತ್ ಅವಘಟಕ್ಕೆ ಆಸ್ಪದ ನೀಡದಂತೆ ನಿಗಾವಹಿಸಬೇಕು. ಸಾರ್ವಜನಿಕರು ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಯಾವುದೇ ಕಾರ್ಯಕ್ರಮ ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗುತ್ತದೆ ಎಂದರು.
ಶಶಿಧರ ಸಂಕನಗೌಡ್ರ ಮಾತನಾಡಿ, ಈಗಾಗಲೇ ಪೊಲೀಸ್ ಇಲಾಖೆ ನೀಡಿರುವ ಸಲಹೆ ಸೂಚನೆಯಂತೆ ಗಣೇಶ ಮಂಟಗಳಲ್ಲಿ ಅಶ್ಲೀಲ ಚಿತ್ರಗೀತೆಗಳು, ಕೋಮುಭಾವನೆ ಕೆರಳಿಸುವಂತಹ ಹಾಡು ಮತ್ತು ಸಂಭಾಷಣೆಗಳನ್ನು ಗಜಾನನ ಮಂಡಳಿಯ ಯುವಕರು ಹಾಕಬಾರದು, ಸಂಘಟಿಕರು ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ, ಪೊಲೀಸ್ ಇಲಾಖೆ, ಹೆಸ್ಕಾಂ, ಅಗ್ನಿಶಾಮಕ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಕಡ್ಡಾಯವಾಗಿ ಪಡೆಯಬೇಕು ಎಂದರು. ಬಿ.ಕೆ. ಪೊಲೀಸ್‍ಪಾಟೀಲ ಮಾತನಾಡಿ, ನರೇಗಲ್ಲ ಪಟ್ಟಣದ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವುದೆ ಕೋಮು ಗಲಭೆಗಳು ನಡೆದಿಲ್ಲ. ಇಲ್ಲಿನ ಸರ್ವಧರ್ಮರು ಬಹಳಷ್ಟು ಅನ್ಯೂನ್ಯವಾಗಿ ಜೀವನವನ್ನು ಸಾಗಿಸುತ್ತಾ ಬಂದಿದ್ದೆವೆ. ಫಲವಾಗಿ ಪಟ್ಟಣವು ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿದೆ ಎಂದರು. ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಎ.ಎ. ನವಲಗುಂದ ಮಾತನಾಡಿದರು.
ಎಚ್.ಆರ್. ಮಾಕಿ, ಎ.ಕೆ. ಕೊಪ್ಪದ, ಮಲ್ಲಿಕಾರ್ಜುನ ಮುಧೋಳ, ಉಮೇಶ ಮೇಟಿ, ನಿಂಗಪ್ಪ ಹೊನ್ನಪೂರ, ಎಸ್.ಎಸ್. ಮುಗಳಿ, ರಮೇಶ ಕಾಟಿ, ಹನಮಪ್ಪ ಹಾಲವರ, ಎ.ಪಿ. ನದಾಫ, ನಿಂಗನಗೌಡ ಲಕ್ಕನಗೌಡ್ರ, ಮಲ್ಲಯ್ಯ ಗುಂಡಗೋಪುರಮಠ, ಐ.ಪಿ. ಶೇಖ, ಎಂ.ವಿ. ಚಳ್ಳಮರದ, ಎಸ್.ವಿ. ಅಣಗೌಡ್ರ ಇದ್ದರು. ಸಿಬ್ಬಂದಿ ನಾಗಪ್ಪ ಮಂಗಳೂರ ನಿರ್ವಹಿಸಿದರು.

loading...