ಜನತಾ ದರ್ಶನದಲ್ಲಿ ದೊರೆಗೆ ಜನರ ಅಹವಾಲು

0
0
loading...

ಬೆಂಗಳೂರು:ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಇಂದಿನಿಂದ ಜನತಾದರ್ಶನ ಆರಂಭಿಸಲಿದ್ದಾರೆ.ಇದಕ್ಕಾಗಿ ರಾಜ್ಯದ ವಿವಿಧ ಮೂಲೆಗಳಿಂದ ಜನರು ಬಂದಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿಯವರು ಜನರ ನೋವು,ಸಂಕಷ್ಟಗಳನ್ನು ಆಲಿಸಿ ಕೆಲವು ಸಮಸ್ಯೆ ಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಯೋಗ, ಆರೋಗ್ಯ ಸಮಸ್ಯೆ, ಪೊಲೀಸ್ ಕಿರುಕುಳ, ಆಸ್ತಿ ಸಮಸ್ಯೆ, ನಿವೇಶನ ಕೋರಿಕೆ, ಮನೆಗಾಗಿ ಮನವಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಅಲ್ಲದೆ ಪೊಲೀಸ್, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಿದರು.
ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೂ ಜೆಪಿನಗರದ ನಿವಾಸದ, ಗೃಹ ಕಚೇರಿ ಕೃಷ್ಣಾ, ವಿಧಾನಸೌಧ ಸೇರಿದಂತೆ ಹಲವು ಕಡೆ ಸಾರ್ವಜನಿಕರು ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕಾರ್ಯವನ್ನು ಮುಖ್ಯಮಂತ್ರಿ ಮಾಡುತ್ತಾ ಬಂದಿದ್ದರು.
ವಿಧಾನಸೌಧಕ್ಕೆ ಸಾರ್ವಜನಿಕರು ಸಮಸ್ಯೆ ಹೊತ್ತು ಬರುವುದನ್ನು ತಪ್ಪಿಸಲು ಜೆಪಿ ಭವನದಲ್ಲಿ ಪ್ರತಿ ದಿನ ಒಬ್ಬೊಬ್ಬರು ಸಚಿವರು ಸಾರ್ವಜನಿಕರ ಅಹವಾಲು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಿದ್ದರು.
ಅಲ್ಲದೆ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಕೂಡ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಆಲಿಸುವಂತೆ ಸೂಚಿಸಿ ದ್ದರೂ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಸಾರ್ವಜನಿಕರು ಬೆಂಗಳೂರಿಗೆ ಬರುವುದು ತಪ್ಪುತ್ತಿಲ್ಲ.ಹೀಗಾಗಿ ವಾರದ ಕ್ಕೊಂದು ದಿನ ಅಧಿಕೃತವಾಗಿ ಜನತಾದರ್ಶನವನ್ನು ಆರಂಭಿಸಿದ್ದಾರೆ. ಇಂದಿನಿಂದ ಪ್ರತಿ ಶನಿವಾರ ಜನತಾದರ್ಶನ ನಡೆಯಲಿದೆ.
ಆದರೆ ಇದರಿಂದ ಆ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಜನತಾ ದರ್ಶನವನ್ನು ಕೃಷ್ಣಾಗೆ ಸ್ಥಳಾಂತರಿಸಿದ್ದರು.ಆದರೆ ಬಜೆಟ್ ಅಧಿವೇಶನ, ಕೊಡಗು ಪ್ರವಾಹ,ದೇವಾಲಯಗಳ ಭೇಟಿ ಮುಂತಾದ ಕಾರ್ಯಕ್ರಮಗಳಿಂದಾಗಿ ಕಳೆದ ಮೂರು ತಿಂಗಳಲ್ಲಿ ನಿಯಮಿತವಾಗಿ ಜನತಾ ದರ್ಶನ ನಡೆದಿರಲಿಲ್ಲ. ಆದರೆ ಇಂದಿನಿಂದ ವಾರದಲ್ಲಿ ಒಂದು ದಿನ ನಿರಂತರವಾಗಿ ಜನತಾ ದರ್ಶನ ನಡೆಯಲಿದೆ.
ಈ ನೂರು ದಿನಗಳ ಅವಧಿಯಲ್ಲಿ ಪ್ರತಿ ದಿನ ಜನತಾ ದರ್ಶನ ನಡೆಸಿದ್ದೇನೆ. ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಇಂದಿನಿಂದ ಪ್ರತಿ ಶನಿವಾರ ಮಾತ್ರ ಜನತಾ ದರ್ಶನ ನಡೆಸಲಾಗುವುದು. ಇತರ ದಿನಗಳಲ್ಲಿ ಸರ್ಕಾರದ ಇತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಶನಿವಾರ ಜನತಾ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರ ಕಷ್ಟಗಳನ್ನು ಖುದ್ದು ವಿಚಾರಿಸುವೆ.ರಾತ್ರಿ ಗಂಟೆ ಹನ್ನೊಂದಾದರೂ ಸರಿ, ಎಲ್ಲರ ಸಮಸ್ಯೆ ಆಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಇದಲ್ಲದೆ ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು,ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಲ್ಲದೆ,ಸಾರ್ವಜನಿಕರ ಸಮಸ್ಯೆ ಆಲಿಸುವೆ; ಅರ್ಧ ದಿನವನ್ನು ರೈತರಿಗೆ ಆಧುನಿಕ ಕೃಷಿ ಪದ್ಧತಿಯ ಅರಿವು ಮೂಡಿಸುವುದಕ್ಕಾಗಿ ಮೀಸಲಿಡುವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜಿಲ್ಲಾಧಿಕಾರಿಗಳೂ ತಾಲೂಕಿಗೆ ಭೇಟಿ ನೀಡಿ ನಿಗದಿತ ದಿನದಂದು ಸಾರ್ವಜನಿಕ ಕುಂದು ಕೊರತೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್ ಅವರು ಮಠದ ಪರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಗು ಸಂತ್ರಸ್ತರ ನೆರವಿಗಾಗಿ 11 ಲಕ್ಷ ರೂ.ಗಳ ದೇಣಿಗೆ ನೀಡಿದರು. ಇದಲ್ಲದೆ ವಿವಿಧ ಖಾಸಗಿ ಸಂಸ್ಥೆಗಳು, ಶಾಲಾ ಮಕ್ಕಳು, ಗ್ರಾಮಸ್ಥರು ಯಥಾಶಕ್ತಿ ದೇಣಿಗೆ ನೀಡಿರುವುದನ್ನು ಮುಖ್ಯಮಂತ್ರಿಗಳು ಕೃತಜ್ಞತೆಯಿಂದ ಸ್ಮರಿಸಿದರು.
ಮುಖ್ಯಮಂತ್ರಿಗಳು ಸೆಪ್ಟೆಂಬರ್ 10 ರಿಂದ 15 ರ ವರೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

loading...