ಜಾನಪದ ಪರಿಷತ್ತು ತಾಲ್ಲೂಕಾ ಘಟಕ ಉದ್ಘಾಟನೆ

0
0
loading...

ಜಮಖಂಡಿ: ಜನಪದ ಎಂದರೆ ಜನರು ಮತ್ತು ಪ್ರದೇಶ ಎಂದರ್ಥ. ಜಾನಪದ ಎಂದರೆ ಜನರಿಗೆ ಮತ್ತು ಪ್ರದೇಶಕ್ಕೆ ಸಂಬಂಧಿಸಿದ್ದು. ಜನಪದರಿಂದ ಬಂದಿದ್ದು ಜಾನಪದ. ಜಾನಪದ ಬಹಳ ಪ್ರಾಚೀನವಾದದ್ದು ಎಂದು ಸಾಹಿತಿ ಡಾ.ಸಂಗಮೇಶ ಬಿರಾದಾರ ಅಭಿಪ್ರಾಯಪಟ್ಟರು.
ಇಲ್ಲಿನ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ನೃತ್ಯ, ಗೀತೆ, ಉಡುಗೆ ತೊಡುಗೆ, ಉಟೋಪಚಾರ, ಹಬ್ಬ ಹರಿದಿನಗಳು ಜಾನಪದದ ಭಾಗವೇ ಆಗಿವೆ. ಜಾನಪದ ಆಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಜಾನಪದ ಕಲೆಗಳನ್ನು ಯತಾವತ್ತಾಗಿ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದರು.

ಬಸವಜ್ಯೋತಿ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಜಾನಪದದ ಪ್ರತಿ ಪ್ರಕಾರದಲ್ಲಿ ಒಂದೊಂದು ಒಳ್ಳೆಯ ಸಂದೇಶವಿದೆ ಎಂದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿ, ಅಜ್ಞಾತ ಅನಕ್ಷರಸ್ಥರು ಸೃಷ್ಟಿಸಿದ ಅಮರ ಸಾಹಿತ್ಯವೇ ಜಾನಪದ ಸಾಹಿತ್ಯ. ಬಾಯಿಂದ ಬಾಯಿಗೆ, ಕಾಲದಿಂದ ಕಾಲಕ್ಕೆ, ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರವಾದ ಜಾನಪದ ಕಲೆಗಳು ಅಪರೂಪ ಎನಿಸಿವೆ ಎಂದರು. ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಚಿತ್ತರಂಜನ್ ನಾಂದ್ರೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಧಾರವಾಡಮಠ ಜಾನಪದ ಹಾಡು ಹಾಡಿದರು. ಕುಂಚನೂರಿನ ಕುಂತುನಾಥ ಭಜನಾ ಮಂಡಳಿಯ ವಿಠ್ಠಲ ಮಾಳಗೊಂಡ ಹಾಗೂ ಸಂಗಡಿಗರು, ಪ್ರಕಾಶ ಹಳೇಮನಿ ಹಾಗೂ ಸಂಗಡಿಗರು ಭಜನಾ ಪದಗಳನ್ನು ಹಾಡಿದರು. ಶ್ರೀಶೈಲ ಜಕನೂರ ಮತ್ತು ತಂಡ ಡೊಳ್ಳಿನ ಹಾಡು ಹಾಡಿದರು.
ಶಿಕ್ಷಕಿ ಜ್ಯೋತಿ ತುಳಸಿಗೇರಿ ಜಾನಪದ ಗೀತೆ ಹಾಡಿದರು. ಉಪನ್ಯಾಸಕಿ ಚಂದ್ರಕಲಾ ಜನಗೊಂಡ, ಶಾಂತಾ ವಿಭೂತಿ ಜಾನಪದ ಹಾಡು ಹೇಳಿ ರಂಜಿಸಿದರು. ಕಾಜಿಬೀಳಗಿಯ ಪಾಂಡುರಂಗ ರಿವಾಯತ ಸಂಘದ ಲಾವಿದರು ಕರ್ಬಲ್ ಹೇಳಿದರು. ಚಲನಚಿತ್ರ ನಟ, ನಿರ್ದೇಶಕ ರಾಘವ, ಚಲನಚಿತ್ರ ಡಾನ್ಸ್ ಕೋರೆಯೋಗ್ರಾಫರ ಸ್ನೇಹಾ ಅವರನ್ನು ವೇದಿಕೆ ಪರವಾಗಿ ಗೌರವಿಸಲಾಯಿತು. ಬಿ.ಎನ್. ಅಸ್ಕಿ ಪ್ರಾರ್ಥನೆ ಗೀತೆ ಹಾಡಿದರು. ಗೌರವ ಅಧ್ಯಕ್ಷ ನೀ. ಶ್ರೀಶೈಲ ಸ್ವಾಗತಿಸಿದರು. ಸುರೇಶ ಜಕಾತಿ ನಿರೂಪಿಸಿದರು. ಶಂಕರ ಲಮಾಣಿ ವಂದಿಸಿದರು.

loading...