ಡಯಾಲಿಸಿಸ್‍ಗಾಗಿ ನೀಡಿದ ಹಣ ಮರಳಿಸುವಂತೆ ಒತ್ತಾಯ

0
1
loading...

 

ಹಳಿಯಾಳ: ತಾಲೂಕಾ ಆಸ್ಪತ್ರೆಯಲ್ಲಿ ಡಯಾಲಿಸಿಸ್‍ಗಾಗಿ ನೀಡಿದ ಸೇವೆಗೆ ಬಡ ದಲಿತ ಯುವಕನ ಕುಟುಂಬದಿಂದ ಪಡೆಯಲಾದ ಮೊತ್ತವನ್ನು ಮರಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಒತ್ತಾಯಿಸಿದೆ.
ಈ ಬಗ್ಗೆ ಸಂಘಟನೆಯ ನಿಯೋಗವು ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ದೂರುಪತ್ರ ಬರೆದಿದ್ದಾರೆ. ಗಾಂಧಿಕೇರಿಯ ಸಿದ್ದಪ್ಪಾ ಯಲ್ಲಪ್ಪಾ ಚಲವಾದಿ ಈ ಬಡ ಯುವಕನು ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಹಾಗೂ ಚುಚ್ಚುಮದ್ದು ಮಾಡಿಸಿಕೊಳ್ಳಲು ತಾಲೂಕಾ ಆಸ್ಪತ್ರೆಗೆ ಹೋಗುತ್ತಿದ್ದು ಆತನಿಂದ ಪ್ರತಿಸಾರಿ 600 ರೂ. ಗಳಂತೆ ಒಟ್ಟು ಈವರೆಗೆ 4200 ರೂ. ಗಳನ್ನು ಪಡೆಯಲಾಗಿದೆ. ಪಡೆದ ಮೊತ್ತಕ್ಕೆ ಯಾವುದೇ ರಸೀದಿಯನ್ನು ಸಹ ನೀಡಿಲ್ಲ. ಇದು ತಮ್ಮ ಗಮನಕ್ಕೆ ಬಂದಿದ್ದು ಉಚಿತವಾದ ಡಯಾಲಿಸಿಸ್ ಸೇವೆಗೆ ಅಕ್ರಮವಾಗಿ ಪಡೆದ ಮೊತ್ತವನ್ನು ಆತನ ಕುಟುಂಬಕ್ಕೆ ಮರಳಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂಘಟನೆಯ ಪ್ರಮುಖರಾದ ಯಲ್ಲಪ್ಪಾ ಹೊನ್ನೋಜಿ, ಹನುಮಂತ ಚಲವಾದಿ, ಕುಮಾರ ಕಲಭಾವಿ, ಮಹೇಶ ಚಲವಾದಿ, ಅನಾರೋಗ್ಯ ಪೀಡಿತ ಸಿದ್ದಪ್ಪಾ ಚಲವಾದಿ ಹಾಗೂ ಅವರ ತಾಯಿ ಮಹಾದೇವಿ ಚಲವಾದಿ ಈ ಸಂದರ್ಭದಲ್ಲಿದ್ದರು.
ಈ ಬಗ್ಗೆ ದೂರವಾಣಿ ಮೂಲಕ ಕೇಳಲಾದ ಪ್ರಶ್ನೆಗೆ ಪತ್ರಕರ್ತರಿಗೆ ತಾಲೂಕಾ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ ಕದಂ ಅವರು ಪ್ರತಿಕ್ರಿಯಿಸಿದ್ದು ಸರ್ಕಾರದ ವತಿಯಿಂದ ಡಯಾಲಿಸಿಸ್ ಕೇಂದ್ರವನ್ನು ನಿರ್ವಹಿಸಲು ಡಿ.ಎಸ್. ಶೆಟ್ಟಿ ಎಂಬ ಗುತ್ತಿಗೆದಾರರಿಗೆ ಹೊರಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಅವರು ಈ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡಬೇಕೆಂಬ ನಿಯಮವಿದೆ. ಹೀಗಾಗಿ ಸಿದ್ದಪ್ಪಾ ಯಲ್ಲಪ್ಪಾ ಚಲವಾದಿ ಅವರಿಂದ ಹಣ ಪಡೆದ ದೂರಿನ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

loading...