ನಷ್ಟವಾದ ಬೆಳೆಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಮನವಿ

0
0
loading...

ಕನ್ನಡಮ್ಮ ಸುದ್ದಿ-ಶಿರಸಿ: ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಕ್ಕಿಂತಲೂ ಉತ್ತರ ಕನ್ನಡದಲ್ಲಿ ಅಡಕೆ ಹಾಗೂ ಕಾಳುಮೆಣಸು ಕೊಳೆ ರೋಗ ಸದ್ದು ಮಾಡುತ್ತಿದೆ. ಚುನಾವಣೆ ಮತದಾನ ಮುಗಿದ ಮಾರನೇ ದಿನವೇ ಎಲ್ಲ ಪಕ್ಷಗಳ ಪ್ರಮುಖರು ಶಿರಸಿಯಲ್ಲಿ ಒಟ್ಟಾಗಿ ಬೀದಿಗಿಳಿದು ನಷ್ಟವಾದ ಬೆಳೆಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಶನಿವಾರ ಅಡಕೆ ಮತ್ತು ಕಾಳು ಮೆಣಸು ಬೆಳೆಗೆ ತಗುಲಿದ ಕೊಳೆರೋಗ ಹಾಗೂ ಪರಿಹಾರಕ್ಕಾಗಿ ಆಗ್ರಹಿಸಿ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ನಗರದ ತೋಟಗಾರ್ ಕಲ್ಯಾಣ ಮಂಟಪದ ಎದುರಿನಿಂದ ಆರಂಭಗೊಂಡ ಮೆರವಣಿಗೆಯಲ್ಲಿ 1500ಕ್ಕೂ ಹೆಚ್ಚಿನ ಅಡಕೆ ಬೆಳೆಗಾರರು ಪಾಲ್ಗೊಂಡು ಸಂಕಷ್ಟದಲ್ಲಿನ ರೈತರಿಗೆ ಸರ್ಕಾರ ಸ್ಪಂದಿಸಬೇಕು, ಅಡಕೆ ಹಾಗೂ ಕಾಳು ಮೆಣಸು ಬೆಳೆಗಾರರ ಹಿತ ಕಾಪಾಡಬೇಕು ಎಂಬಿತ್ಯಾದಿ ಘೋಷಣೆ ಕೂಗಿದರು. ಮೆರವಣಿಗೆಯ ನೇತೃತ್ವವನ್ನು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರುವಹಿಸಿ ರಾಜಕೀಯ ಮರೆತು ಒಟ್ಟಾಗಿ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅಂತಿಮವಾಗಿ ಮೆರವಣಿಗೆಯು ಶಿರಸಿ ಉಪವಿಭಾಗಾಧಿಕಾರಿ ಕಚೇರಿಗೆ ತಲುಪಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮೆರವಣಿಗೆಗೂ ಮುನ್ನ ತೋಟಗಾರ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಸಾಲಮನ್ನಾ ಸಾಧಕ-ಬಾಧಕ, ಅಡಕೆ ಕೊಳೆರೋಗ ಪರಿಹಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜ್ಯದ ರೈತರೆಲ್ಲರೂ ಯಾವ ಕಷ್ಟ ಅನುಭವಿಸುತ್ತಿದ್ದಾರೆ ಅದಕ್ಕಿಂತ ಹೆಚ್ಚು ಕಷ್ಟ ಉತ್ತರ ಕನ್ನಡದ ರೈತರು ಅನುಭವಿಸುತ್ತಿದ್ದಾರೆ. ಆದರೆ ಸರ್ಕಾರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ನಿರ್ಮಿಸಿ ಇನ್ನಷ್ಟು ಸಮಸ್ಯೆಗೆ ನೂಕಿದೆ. ಬೆಳೆ ಸಾಲ ಪಡೆದ ಪ್ರತೀ ಸದಸ್ಯ ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಬೇಕು. ಆಸಾಮಿ ಖಾತೆ ಸಾಲವನ್ನು ಕೃಷಿಸಾಲವನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಉಪಸ್ಥಿತರಿದ್ದ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ, ಅಡಕೆ ಕೊಳೆ ರೋಗ ಸಂಬಂಧ ಪರಿಹಾರಕ್ಕಾಗಿ ವಿಧಾನಸಭೆ ಒಳಗೆ ಹಾಗೂ ಹೊರಗೆ ಪಕ್ಷಾತೀತವಾಗಿ ಹೋರಾಡುತ್ತೇವೆ. ಸಾಲಮನ್ನಾಕ್ಕೆ ನಮ್ಮ ವಿರೋಧವಿಲ್ಲ. ಸಾಲಮನ್ನಾ ಅನುಷ್ಠಾನ ವಿಧಾನದ ಬಗ್ಗೆ ವಿರೋಧವಿದೆ. ಸರ್ಕಾರ ಸಾಲಮನ್ನಾ ಮಾಡಿ ಮಧ್ಯವರ್ತಿ ಬ್ಯಾಂಕ್ ಹಾಗೂ ಪತ್ತಿನ ಸಹಕಾರಿ ಸಂಘಗಳ ಮೇಲೆ ಹೊರೆ ಹಾಕಬಾರದು. ಸಹಕಾರಿ ಸಂಘಗಳಿಗೆ ನೀಡಬೇಕಾದ ಸಾಲಮನ್ನಾ ಮೊತ್ತವನ್ನು ಸಮಯ ಮಿತಿಯೊಳಗೆ ನೀಡಬೇಕು. ಇಲ್ಲವಾದರೆ ಸಹಕಾರಿ ಸಂಘಗಳ ಉಳಿಯುವಿಕೆ ಅಸಾಧ್ಯ ಎಂದರು.
ಜೆಡಿಎಸ್ ಧುರೀಣ ಶಶಿಭೂಷಣ ಹೆಗಡೆ, ಟಿ.ಎಸ್.ಎಸ್.ಅಧ್ಯಕ್ಷ ಶಾಂತಾರಾಂ ಹೆಗಡೆ ಶೀಗೇಹಳ್ಳಿ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ, ಎಂ.ಜಿ.ಹೆಗಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿ.ವಿ.ಜೋಶಿ, ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಇದ್ದರು.

loading...