ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿಗಳಿಂದ ವಿಜಯೋತ್ಸವ

0
0
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ರಾಜಕೀಯವಾಗಿ ತೀವೃ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಶಿರಹಟ್ಟಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ವಾರ್ಡ್ ನಂ- 4,5,6,8,11,13,14,15,16,17 ಒಟ್ಟು ಹತ್ತು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ವಾರ್ಡ್ ನಂ-1,2,3,9,10,12,18 ಒಟ್ಟು 7 ಸ್ಥಾನಗಳಲ್ಲಿ ಹಾಗೂ ವಾರ್ಡ್ ನಂ.7 ರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪಕ್ಷಗಳ ಚಿನ್ಹೆಗಳ ಮೇಲೆ ಚುನಾವಣೆ ನಡೆದಿದ್ದರಿಂದ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳೆಂದು ಬಿಂಬಿಸಿಕೊಂಡಿದ್ದರಿಂದಈ ಚುನಾವಣೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಷ್ಟೆಯಾಗಿ ಸ್ವೀಕರಿಸಿದ್ದವು.
ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಅವರ ಬೆಂಬಲಿಗರು ಮತ ಕೇಂದ್ರಗಳ ಸುತ್ತಲೂ ವಿಜಯೋತ್ಸವ ಆಚರಿಸುವ ದೃಶ್ಯ ಸಾಮಾನ್ಯವಾಗಿತ್ತು.ಕಾಂಗ್ರೆಸ್‍ನ ವಿಜೇತ ಅಭ್ಯರ್ಥಿಗಳು: ವಾ.ನಂ.4 ನೀಲವ್ವ ಯಲ್ಲಪ್ಪಗೌಡ ಹುಬ್ಬಳ್ಳಿ-286, ವಾ.ನಂ.5 ಪರಮೇಶ ವಿಠೋಬಾ ಪರಬ-311, ವಾ.ನಂ.6 ಮುಸ್ತಾಕ ಗೌಸುಸಾಬ ಚೋರಗಸ್ತಿ-211, ವಾ.ನಂ.8 ಅಶರತಲಿ ಮೆಹಬೂಬಸಾಬ ಢಾಲಾಯತ-456, ವಾ.ನಂ.11 ದಾವಲಬಿ ಮಾಚೇನಹಳ್ಳಿ-385, ವಾ.ನಂ.13 ಆಲೂರ ಗಂಗವ್ವ-211, ವಾ.ನಂ.14 ಘಂಟಿ ಮಂಜುನಾಥ-423, ವಾ.ನಂ.15 ದೇವಕ್ಕ ಗುಡಿಮನಿ-302, ವಾ.ನಂ.15 ದೇವಪ್ಪ ಆಡೂರ-337, ವಾ.ನಂ.17 ಹೊನ್ನಪ್ಪ ಶಿರಹಟ್ಟಿ-222 ಮತಗಳನ್ನು ಪಡೆಯುವುದರ ಮೂಲಕ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ವಿಜೇತ ಅಭ್ಯರ್ಥಿಗಳು: ವಾ.ನಂ.1 ಚನ್ನಬಸವ್ವ ಕಲಾದಗಿ-476, ವಾ.ನಂ.2 ಗಾಣಿಗೇರ ಮಹಾದೇವಪ್ಪ-507, ವಾ.ನಂ.3 ಫಕ್ಕಿರೇಶ ರಟ್ಟಿಹಳ್ಳಿ-378, ವಾ.ನಂ.9 ಸಂದೀಪ ಬಸಲಿಂಗಪ್ಪ ಕಪ್ಪತ್ತನವರ-275, ವಾ.ನಂ.10 ಕಪ್ಪತ್ತನವರ ಶಿವಕುಮಾರ-135, ವಾ.ನಂ.12 ಡೊಂಕಬಳ್ಳಿ ಯಶೋಧಾ-138, ವಾ.ನಂ.18 ಅನಿತಾ ಬಾರ್ಬರ-273 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.ಪ್ರತಿಷ್ಠೆ ಕಣದಲ್ಲಿ ಪಕ್ಷೇತರ ಗೆಲುವು: ವಾ.ನಂ.7ರಲ್ಲಿ ಆದ್ರಳ್ಳಿ ಮಹಮ್ಮದ ಇಸಾಕ ಎಂಬುವರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಬಿ ಫಾರ್ಮಂನೊಂದಿಗೆ ನಾಮಪತ್ರ ಸಲ್ಲಿಸಿದ್ದರು. ತದನಂತರ ಬೆಳವಣಿಗೆಯಲ್ಲಿ ಮಾಜಿ ಸಂಸದ ಐ.ಜಿ.ಸನದಿ ಪುತ್ರ ಅಬ್ದುಲಹಮೀದ ಸನದಿ ಇವರಿಗೆ ಕಾಂಗ್ರೇಸ್ ಪಕ್ಷವು ಅಧಿಕೃತ ಪತ್ರ ನೀಡಿ ಇವರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿಸಿತ್ತು, ಹೀಗಾಗಿ ಆದ್ರಳ್ಳಿ ಮಹಮ್ಮದ ಇಸಾಕ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇವರಿಗೆ ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷ ಹುಮಾಯೂನ್ ಮಾಗಡಿ ಬೆಂಬಲ ನೀಡಿ ಪ್ರಚಾರ ನಡೆಸಿ ತೀವ್ರ ಜಿದ್ದಾ-ಜಿದ್ದಿನಲ್ಲಿ ಅಂತಿಮವಾಗಿ ವಾರ್ಡನ ಮತದಾರರು ಮಹಮ್ಮದ ಇಸಾಕ ಇವರಿಗೆ 335 ಮತಗಳನ್ನು ನೀಡಿ ಆಯ್ಕೆ ಮಾಡಿದ್ದಾರೆ. ಅಬ್ದುಲ್‍ಹಮೀದ ಸನದಿಯವರು ಸಮೀಪ ಪ್ರತಿಸ್ಪರ್ಧಿಯಾಗಿ 297 ಮತಗಳನ್ನು ಪಡೆದಿದ್ದಾರೆ.
ಒಂದೇ ಮತದಲ್ಲಿ ಸೋಲು: ವಾ.ನಂ.12ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದಂತಹ ಶಕುಂತಲಾ ಹರ್ತಿ 137 ಮತಗಳನ್ನು ಪಡೆಯುವುದರ ಮೂಲಕ ಒಂದೇ ಮತದ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಸಹ ಇವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.ಪ್ರಚಾರದಲ್ಲಿ ಬಿಜೆಪಿ ಮುಂದಿತ್ತು: ಚುನಾವಣಾ ದಿನಾಂಕ ಘೋಷಣೆಯಾದ ಮೇಲೆ ಪಟ್ಟಣಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ, ಮಾಜಿ ಸಚಿವ ಶಾಸಕ ಬಿ.ಶ್ರೀರಾಮುಲು, ಸಂಸದ ಶಿವಕುಮಾರ ಉದಾಸಿ, ಜಿಲ್ಲಾಧ್ಯಕ್ಷ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲ ಬಹಿರಂಗ ಸಭೆಗಳನ್ನು ನಡೆಸುವ ಮೂಲಕ ಅಬ್ಬರದ ಪ್ರಚಾರವನ್ನು ಕೈಕೊಂಡಿದ್ದರು. ಜೊತೆಗೆ ಶಾಸಕ ರಾಮಣ್ಣ ಲಮಾಣಿ ಕೂಡಾ ಎಲ್ಲ ವಾರ್ಡುಗಳಲ್ಲಿಯೂ ಸಹ ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ವಿನಂತಿಸಿದ್ದರು. ಆದರೆ 18 ವಾರ್ಡುಗಳಲ್ಲಿ ಕೇವಲ 7ರಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ.
ಕೊನೆಗೆ ಪ್ರಚಾರ ನಡೆಸಿದ್ದ ಕಾಂಗ್ರೆಸ್: ಬಹಿರಂಗ ಪ್ರಚಾರ ಮುಕ್ತಾಯದ ಹಂತದಲ್ಲಿ ಅ.28ರಂದು ಮಾಜಿ ಸಚಿವ ಹಾಗೂ ಗದಗ ಶಾಸಕ ಎಚ್.ಕೆ.ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಯಲ್ಲಪ್ಪಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಸೇರಿದಂತೆ ಪಕ್ಷದ ಪ್ರಮುಖರು ಖಾನಾಪೂರ-ಹರಿಪೂರ-ಶಿರಹಟ್ಟಿ ಪಟ್ಟಣದಲ್ಲಿ ರೋಡ್‍ಶೋ ಮೂಲಕ ಮತಯಾಚನೆಯನ್ನು ಮಾಡಿದ್ದು ಬಿಟ್ಟರೆ, ಪಕ್ಷದ ಉಳಿದ ನಾಯಕರುಗಳು ವಾರ್ಡುಗಳಲ್ಲಿ ಸಂಚರಿಸಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರಲಿಲ್ಲ. ಆದರೆ ಅಭ್ಯರ್ಥಿಗಳು ಮಾತ್ರ ಹಗಲು-ರಾತ್ರಿ ಮನೆ ಮನೆಗೆ ತೆರಳಿ ತಮ್ಮ ಪ್ರಚಾರವನ್ನು ಕೈಕೊಂಡಿದ್ದರ ಫಲವೇ ಇಂದಿನ ಫಲಿತಾಂಶ.

loading...