ಪೌರ ಕಾರ್ಮಿಕರ ವಸತಿ ಗೃಹ ನಿರ್ಮಾಣ ನಿಲ್ಲಿಸುವಂತೆ ಪ್ರತಿಭಟನೆ

0
1
loading...

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ಚಿತ್ರಗಿಯ ಕಡೆಭಾಗದಲ್ಲಿ ಪುರಸಭೆ ಉದ್ದೇಶಿಸಿರುವ ಪೌರ ಕಾರ್ಮಿಕರ ವಸತಿ ಗೃಹ ನಿರ್ಮಾಣ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಆ ಬಾಗದ ಸ್ಥಳೀಯರು ಭಾನುವಾರ ಹಠಾತ್ ಪ್ರತಿಭಟನೆ ನಡೆಸಿ, ಈ ಕಾಮಗಾರಿಯನ್ನು ಪುರಸಭೆ ಅಧಿಕಾರಿಗಳು ತಕ್ಷಣ ನಿಲ್ಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ವ್ಯಾಪ್ತಿಯ 6ನೇ ವಾರ್ಡ್‍ನ ಚಿತ್ರಗಿ ಕಡೇಭಾಗದ ಸರ್ವೆ ನಂಬರ್ 556ರಲ್ಲಿ 2 ಎಕರೆ 34 ಗುಂಟೆ ಜಮೀನಿದೆ. ಅದರಲ್ಲಿ 15 ಗುಂಟೆ ಜಾಗದಲ್ಲಿ ಪೌರ ಕಾರ್ಮಿಕರ ವಸತಿ ಗೃಹ ನಿರ್ಮಿಸಲು ಪುರಸಭೆ ಯೋಜನೆ ರೂಪಿಸಿದೆ. ಈ ಯೋಜನೆಗಾಗಿ ಜಾಗವನ್ನು ಸಮತಟ್ಟಾಗಿ ಪಿಲ್ಲರ್ ಅಳವಡಿಸಲು ಕಂದಕ ನಿರ್ಮಿಸುವ ಕಾಮಗಾರಿ ಶುರು ಮಾಡಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಆ ವಾರ್ಡ್‍ನ ಸದಸ್ಯ ರಾಜೇಶ ಪೈ ಸೇರಿದಂತೆ ಊರಿನ ಪ್ರಮುಖರನ್ನು ಕರೆಯಿಸಿ, ಹಠಾತ್ ಪ್ರತಿಭಟನೆ ಸಂಘಟಿಸಿದ್ದರು.

ಈ ಜಾಗದಲ್ಲಿ ಪುರಸಭೆ ಅಭಿವೃದ್ಧಿಗೆ ಪೂರಕವಾದ ವಾಣಿಜ್ಯ ಮಳಿಗೆ, ತರಕಾರಿ ಮಾರುಕಟ್ಟೆ, ಈಜು ಕೊಳ, ಕ್ರೀಡಾಂಗಣ ಅಥವಾ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿ ಮಾಡಿದರೆ, ಸ್ಥಳೀಯರು ಸ್ವಾಗತಿಸುತ್ತೇವೆ. ಬದಲಾಗಿ ನಮ್ಮ ದಾರಿ ಬಂದ್ ಮಾಡಿ, ವಸತಿ ಗೃಹ ನಿರ್ಮಿಸಲು ಮುಂದಾದರೆ ಅಂಥ ಯೋಜನೆಯನ್ನು ನಾವೆಲ್ಲ ವಿರೋಧಿಸುವ ಜೊತೆಗೆ ಪುರಸಭೆ ಅಧಿಕಾರಿಗಳಿ ಈ ನಿರ್ಣಯಕ್ಕೆ ಖಂಡಿಸುತ್ತೇವೆ. ಒಂದು ವೇಳೆ ಈ ಜಾಗದಲ್ಲಿ ಪೌರ ಕಾರ್ಮಿಕರ ವಸತಿ ಗೃಹ ನಿರ್ಮಿಸಲು ಪುರಸಭೆ ಮುಂದಾದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಪುರಸಭೆ ಸದಸ್ಯರಾದ ರಾಜೇಶ ಪೈ, ಸಂತೋಷ ನಾಯ್ಕ, ನಿವೃತ್ತ ಕರ್ನಲ್ ಅನಂತ ರಾಮದಾಸ ಮಾಸೂರಕರ್, ಸ್ಥಳೀಯರಾದ ನಾಗರಾಜ ನಾಯ್ಕ, ಸುರೇಶ ಪಟಗಾರ, ಸಚಿನ ಪಟಗಾರ, ವಿಷ್ಣು ಪಟಗಾರ, ಕೃಷ್ಣ ಪಟಗಾರ, ದೇವಪ್ಪ ಪಟಗಾರ, ಸುರೇಶ ಭಟ್, ಜಾಕಿ ಫರ್ನಾಂಡಿಸ್, ಶೀಧರ ನಾಯ್ಕ, ಕೇಶವ ನಾಯ್ಕ, ಮುಕುಂದ ನಾಯ್ಕ, ನಿಲೇಶ ಪಟಗಾರ, ಸೆಂಡ್ರಿಕ್ ಫರ್ನಾಂಡಿಸ್, ಹರೀಶ ನಾಯ್ಕ, ವಿಷ್ಣು ನಾಯ್ಕ, ಪ್ರೇಮಾ ಪಟಗಾರ, ಸಾವಿತ್ರಿ ಪಟಗಾರ, ಮಂಗಲಾ ಪಟಗಾರ, ಆಶಾ ಆಚಾರಿ, ಗೀತಾ ಆಚಾರಿ, ನಾಗವೇಣಿ ಪಟಗಾರ, ಬೇಬಿ ಪಟಗಾರ ಹಾಗೂ ಮೊದಲಾದವರು ಎಚ್ಚರಿಗೆ ನೀಡಿದರು.

loading...