ಫಲಾನುಭವಿಗಳಿಗೆ ದೊರಕದ ಆಶ್ರಯ ಮನೆಗಳು

0
0
loading...

ರಾಜು ಹೊಸಮನಿ
ನರಗುಂದ: ಹತ್ತು ವರ್ಷ ಕಳೆದರೂ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸದೇ ಇರುವುದರಿಂದ ತಾಲೂಕಿನ ಕುರ್ಲಗೇರಿ ಗ್ರಾಮದ ಆಶ್ರಯ ಮನೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಕೆಲ ದಾರಿಹೋಕ ಪುಂಡಪೋಕರಿಗಳಿಗೆ ಇದು ಅನೈತಿಕ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿದೆ. 2008-09 ರಲ್ಲಿ ಬೆಣ್ಣೆಹಳ್ಳ ಪ್ರವಾಹದಿಂದ ಸಂತ್ರಸ್ತರಾಗಿದ್ದ ತಾಲೂಕಿನ ಕುರ್ಲಗೇರಿ ಗ್ರಾಮಸ್ಥರಿಗೆ 2010 ರಲ್ಲಿ ಆಗಿನ ಬಿಜೆಪಿ ಸರ್ಕಾರ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ 466 ಮನೆಗಳು ಇಂದಿಗೂ ಹಂಚಿಕೆಯಾಗಲು ವಿಳಂಬವಾದ ಹಿನ್ನೆಲೆಯಲ್ಲಿ ಪಾಳು ಬಿದ್ದಿವೆ.
2009 ರಲ್ಲಿ ಬೆಣ್ಣೆಹಳ್ಳ ಪ್ರವಾಹದಿಂದ ಜಲಾವೃತವಾಗಿದ್ದ ಕುರ್ಲಗೇರಿ ಗ್ರಾಮದ ಎಲ್ಲ ಮನೆಗಳನ್ನು ಅಂದಿನ ಸರ್ಕಾರದ ಮುಖ್ಯಮಂತ್ರಿ ಹಾಗೂ ಸದ್ಯದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಸಿ.ಸಿ.ಪಾಟೀಲ ಹೆಲಿಕಾಪ್ಟರ್ ಮೂಲಕ ಸಮಿಕ್ಷೆ ಮಾಡಿ. ಗ್ರಾಮದ ಹೊರವಲಯದಲ್ಲಿ 27 ಎಕರೆ ಜಾಗೆ ಖರೀದಿಸಿ ನಿರ್ಮಿತಿ ಕೇಂದ್ರದಿಂದ 466 ಮನೆಗಳನ್ನು ನಿರ್ಮಿಸಲಾಯಿತು. ಆದರೆ ಮನೆಗಳು ತೀರಾ ಚಿಕ್ಕವಿದ್ದು, ಕುಟುಂಬದ ಎಲ್ಲ ಸದಸ್ಯರು ವಾಸಿಸಲು, ದನಕರುಗಳನ್ನು ಕಟ್ಟಿಕೊಳ್ಳಲು ಜಾಗ ಇಲ್ಲದಂತಾಗಿದೆ. ಮೂಲ ಗ್ರಾಮದಲ್ಲಿದ್ದ ಮನೆಗಳ ಜಾಗದ ವಿಸ್ತೀರ್ಣ ಹೆಚ್ಚಿದ್ದು, ಆಗಿನ ಸರ್ಕಾರದ ಸಮೀಕ್ಷೆ ಸರಿಯಾಗಿಲ್ಲ. ಇನ್ನೂ ಹೆಚ್ಚು ಮನೆಗಳನ್ನು ಹೆಚ್ಚು ವಿಶಾಲವಾಗಿ ಕಟ್ಟಿಕೊಡಬೇಕು ಎಂದು ಸಂತ್ರಸ್ತರು ತಕರಾರು ಮಾಡಿದರು. ಹಾಗಾಗಿ, 2010 ರಿಂದ ಆ ಮನೆಗಳ ಹಕ್ಕುಪತ್ರಗಳನ್ನೂ ಅವರು ಪಡೆಯದೇ ಅವೀಗ ಬೀಳುವ ಹಂತಕ್ಕೆ ತಲುಪಿವೆ.
ಇನ್ನೂ ಕೆಲವು ಹೆಚ್ಚಿನ ಪ್ರಮಾಣದ ಮನೆಗಳಲ್ಲಿ ಯಾರೂ ವಾಸಿಸದ ಪರಿಣಾಮ ಮತ್ತು ಅಲ್ಲಿ ನಿರ್ಮಿಸಿದ ಶಾಲೆಯನ್ನು ಪ್ರಾರಂಭಿಸದ ಕಾರಣದಿಂದ ಮನೆ ಮತ್ತು ಶಾಲೆಯ ಕಿಡಕಿ,ಬಾಗಿಲು, ಪಾಟಿಗಲ್ಲು, ಪಾಯಿಖಾನೆ ಸೀಟ್‍ಗಳನ್ನು ಕೂಡ ಬೀಡದಂತೆ ಕಳ್ಳರು ಹೊತ್ತೊಯ್ದಿದ್ದಾರೆ. ಮಂದಿರ, ಮಸೀದಿ, ಅಂಗನವಾಡಿ, ಪ್ರಾಥಮಿಕ ಸಹಕಾರಿ ಸಂಘದ ಕಟ್ಟಡ ನಿರ್ಮಿಸಲು ಜಾಗವನ್ನೂ ಮೀಸಲಿರಿಸಲಾಗಿದೆ. 2010 ರಿಂದ ಗ್ರಾಪಂನಲ್ಲಿ ಪ್ರತಿ ಸಭೆ ನಡೆದಾಗಲೂ ಆಶ್ರಯ ಮನೆಗಳ ವಿತರಣೆ ವಿಷಯ ಪ್ರಸ್ತಾಪಕ್ಕೆ ಸಮ್ಮತಿ ಸಿಗುತ್ತಿಲ್ಲ. ಹಾಗಾಗಿ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ. ಕೆಲ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬೇಟಿ ಮಾಡಿ ಮನವಿಯನ್ನು ಮಾಡಿದ್ದು, ತಹಸೀಲ್ದಾರರು ಗ್ರಾಪಂ ಸಭೆಗಳಿಗೆ ನಾಲ್ಕಾರು ಬಾರಿ ಆಗಮಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಮನೆಗಳ ಫಲಾನುಭವಿಗಳ ಆಯ್ಕೆ ಪಟ್ಟಿ ಸರಿ ಇಲ್ಲವೆಂದು ಸಂತ್ರಸ್ತರು ತಹಸೀಲ್ದಾರರಿಗೆ ಹಲವು ಸಲ ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
2017 ರ ಜುಲೈ ತಿಂಗಳ ಕೊನೇ ವಾರದಲ್ಲಿ ತಹಸೀಲ್ದಾರರ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಮನೆಗಳನ್ನು ವಿತರಿಸುವುದಾಗಿ ಸಹಾಯಕ ವಿಭಾಗಾಧಿಕಾರಿಗಳು, ತಹಸೀಲ್ದಾರರು ಸಂತ್ರಸ್ತರಿಗೆ ಭರವಸೆ ನಿಡೀದ್ದರು. ಆದರೆ, ಸಬೆಗೆ ಬಂದಿದ್ದ ಕೆಲವೇ ಸಂತ್ರಸ್ತರು ಉಳಿದ ಫಲಾನುಭವಿಗಳ ಅಭಿಪ್ರಾಯ ಕೇಳಿ ಮನೆ ಪಡೆಯುವುದಾಗಿ ತಿಳಿಸಿದ್ದರು. ನಂತರ ತಹಸೀಲ್ದಾರ ಪ್ರಕಾಶ ಹೊಳೆಯಪ್ಪಗೋಳ್ ದಿನಾಂಕ 9.1.2018 ರಂದು ಕುರ್ಲಗೇರಿ ಗ್ರಾಮಕ್ಕೆ ತೆರಳಿ ಒಟ್ಟು, 328 ಮನೆ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದರು. ಆ ಸಮಸ್ಯೆ ಇನ್ನೂ ಬಗೆಹರಿಯದೇ ಮುಂದುವರೆದಿದೆ. ನಮ್ಮ ಹಿಂದಿನ ಅವಧಿಯ ಬಿಜೆಪಿ ಸರ್ಕಾರದಲ್ಲಿ 466 ಮನೆಗಳನ್ನು ಕುರ್ಲಗೇರಿಯಲ್ಲಿ ನಿರ್ಮಿಸಲಾಗಿದೆ. 5 ವರ್ಷದಲ್ಲಿ ಕಾಂಗ್ರೇಸ್ ಸರ್ಕಾರ ಮನೆಹಂಚಿಕೆ ಪ್ರಕ್ರಿಯೆ ಕುರಿತು ಏನೂ ಮಾಡಲಿಲ್ಲ. ಸೆ.11 ರಂದು ಗದಗನಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮತಕ್ಷೇತ್ರದ 13 ಗ್ರಾಮಗಳಲ್ಲಿ ನಿರ್ಮಿಸಿದ ಆಶ್ರಯ ಮನೆಗಳ ಕುರಿತು ಚರ್ಚಿಸಿ ಮನೆಗಳನ್ನು ವಿತರಣೆ ಮಾಡುವ ಕ್ರಮ ಕೈಗೊಳ್ಳಲಾಗುವುದು. ಶಾಸಕ ಸಿ.ಸಿ.ಪಾಟೀಲ
ಕುರ್ಲಗೇರಿ ಗ್ರಾಮದ 328 ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರಗಳನ್ನು ನೀಡಲಾಗಿದೆ. ಇನ್ನೂಳಿದ ದಾಖಲಾತಿಯಲ್ಲಿಲ್ಲದ ಕೆಲ ಹೊಸ ಕುಟುಂಬ ಹಾಗೂ ಸಮೀಕ್ಷೆ ವರದಿಯಿಂದ ವಂಚಿತರಾದ ಕುಟುಂಬಗಳಿಗೆ 2 ನೇ ಹಂತದಲ್ಲಿ ಮನೆಗಳನ್ನು ವಿತರಿಸಲು ಕೋರಿ ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತ ತಕ್ಷಣ ಇನ್ನೂಳಿದ ಎಲ್ಲ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು. ಪ್ರಕಾಶ ಹೊಳೆಯಪ್ಪಗೋಳ, ತಹಸೀಲ್ದಾರ್ ನರಗುಂದ.
ಸ್ಥಳಾಂತರಗೊಂಡ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಲಭ್ಯವನ್ನು ಗಾ,ಪಂ.ನಿಂದ ಅಧಿಕಾರಿಗಳು,ಜನಪ್ರತಿನಿಧಿಗಳು ಕಲ್ಪಿಸಿಲ್ಲ. ಸಮಸ್ಯೆ ಕುರಿತು ಅವರ ಗಮನಕ್ಕೆ ತಂದರೆ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಾರೆ. ಹಕ್ಕು ಪತ್ರ ನೀಡಿದವರ ಪೈಕಿ ಕೇವಲ 29 ಕುಟುಂಭದವರು ಮಾತ್ರ ಇಲ್ಲಿ ವಾಸವಿದ್ದೇವೆ. ಇನ್ನೂಳಿದ ಪ್ರಕ್ರಿಯೆ ಕುರಿತು ಸಂಭಂಧಪಟ್ಟ ಅದಿಕಾರಿಗಳು ತಕ್ಷಣ ಗಮನ ಹರಿಸಿದರೆ ಸೂಕ್ತ.
ಮಲ್ಲಪ್ಪ ಮಾದರ, ಕುರ್ಲಗೇರಿ ಗ್ರಾಮದ ನಿವಾಸಿ.

loading...