ಬಿದರಳ್ಳಿ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹ

0
0
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಹದಿನೈದು-ಇಪ್ಪತ್ತು ದಿನದೊಳಗಾಗಿ ಬಿದರಳ್ಳಿ ನೂತನ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವುದರ ಜೊತೆಗೆ ಇನ್ನುಳಿದ ಎಲ್ಲ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ಜನರಿಗೆ ಮುಟ್ಟಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ತಾಲೂಕಿನ ಬಿದರಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಉದ್ಘಾಟನೆ ಹಾಗೂ ಸಿಂಗಟಾಲೂರ ಏತ ನೀರಾವರಿ ಯೋಜನೆಯಡಿಯಲ್ಲಿ ನಿರಾಶ್ರಿತಗೊಂಡ ಬಿದರಳ್ಳಿ ಗ್ರಾಮದ ನಿರಾಶ್ರಿತ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಂಡವಾಡ ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರ ಮಂಜೂರು ಮಾಡಿಸುವಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಜಿ.ಪಂ.ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ವಿಠಲಾಪುರ ಪುನರ್‍ವಸತಿಗೆ ಭೂಮಿ ಖರೀದಿಸಬೇಕು. ಅವರಿಗೆ ಪರಿಹಾರ ನೀಡಬೇಕು. ಬಿದರಳ್ಳಿ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಶಾಸಕರು ಸದಾ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು. ನೀರಾವರಿ ಇಲಾಖೆಯ ಪುನರ್‍ವಸತಿಯ ಎಇಇ ಕೆಎಂಕೆ ಶರ್ಮಾ ಮಾತನಾಡಿ, ಸಿಂಗಟಾಲೂರ ಏತ ನೀರಾವರಿ ಯೋಜನೆಯಡಿಯಲ್ಲಿ ಮುಳುಗಡೆಯಾದ ಬಿದರಳ್ಳಿ ಗ್ರಾಮಸ್ಥರಿಗೆ ಈಗಾಗಲೆ ಪರಿಹಾರ ವಿತರಿಸುವುದರ ಜೊತೆಗೆ ನೂತನ ಗ್ರಾಮದಲ್ಲಿ ಉಚಿತ ನಿವೇಶನ ನೀಡಲಾಗಿದೆ. ಸಧ್ಯ ಸ್ಥಳಾಂತರಗೊಂಡ ಗ್ರಾಮದಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವರಿಗೆ 50ಸಾವಿರ ರೂ.ಹೆಚ್ಚುವರಿ ಅನುದಾನ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು. ಸ್ಥಳಾಂತರಗೊಂಡ ಗ್ರಾಮದಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವ 28 ನಿರಾಶ್ರಿತ ಫಲಾನುಭವಿಗೆ 50ಸಾವಿರ ರೂ.ಚೆಕ್‍ನ್ನು ಶಾಸಕ ಲಮಾಣಿ ವಿತರಿಸಿದರು. ನಂತರ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಉದ್ಘಾಟಿಸಿದರು. ಯುವ ಮುಖಂಡ ಡಾ.ಕುಮಾರಸ್ವಾಮಿ ಹಿರೇಮಠ, ಮಹಾಂತೇಶ ಜೋಶಿ ಮಾತನಾಡಿದರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ನೀಲಪ್ಪ ಕರಡಿ ಅಧ್ಯಕ್ಷತೆ ವಹಿಸಿದ್ದರು ಇದೇ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ಲಲಿತಾ ಎಲಿಗಾರ, ಗ್ರಾ.ಪಂ.ಅಧ್ಯಕ್ಷ ಸಂಗಪ್ಪ ಕರಿಗಾರ, ಕರಬಸಪ್ಪ ಹಂಚಿನಾಳ, ದೇವಪ್ಪ ಕಂಬಳಿ, ರೇಣುಕಾ ಜೈನರ್, ಮಹಾಂತಯ್ಯ ಹೊಸಮಠ, ರವೀಂದ್ರಗೌಡ ಪಾಟೀಲ, ರಾಜಣ್ಣ ಹಾವೇರಿ, ಶ್ರೀಮತಿ ಹೆಗ್ಗಣ್ಣವರ, ವಿರುಪಾಕ್ಷಪ್ಪ ಜೋಗೇರ, ಹೊನಪ್ಪ ಹಡಗಾವಿ ಇದ್ದರು. ಬಿ.ಎಂ.ಸಜ್ಜನರ ನಿರೂಪಿಸಿದರು.

loading...