ಮಕ್ಕಳ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅನನ್ಯ: ಹುಯಿಲಗೋಳ

0
0
loading...

ಕನ್ನಡಮ್ಮ ಸುದ್ದಿ-ಗದಗ: ಶಿಕ್ಷಕರು ಪುಸ್ತಕದಲ್ಲಿರುವುದನ್ನು ಮಕ್ಕಳ ಮುಂದೆ ವರದಿ ಒಪ್ಪಿಸಿದ ಹಾಗೇ ಹೇಳದೆ ನಗು ನಗುತ್ತ ಪಾಠ ಮಾಡುತ್ತ ಶ್ರದ್ಧೆ ಮತ್ತು ಆಸಕ್ತಿಯಿಂದ ಮಕ್ಕಳ ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸಿ ಪುಸ್ತಕಗಳನ್ನು ಓದಲು ಪ್ರೇರಣೆಕೊಟ್ಟು ಅವರ ಜೀವನವನ್ನು ರೂಪಿಸುವ ಶಕ್ತಿ ಗುರುವಿಗೆ ಇದೆ ಎಂದು ನಿವೃತ್ತ ಶಿಕ್ಷಕ ಅಜಿತ ಹುಯಿಲಗೋಳ ಅಭಿಪ್ರಾಯಪಟ್ಟರು.
ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಮೃತವಾಹಿನಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರ ತಪ್ಪಿನ ಅರಿವನ್ನು ಮಾಡಿಕೊಟ್ಟು ಅವರನ್ನು ಸರಿ ದಾರಿಗೆ ತಂದು ಉತ್ತಮ ಕಲಿಕೆಗೆ ಪ್ರೇರಣೆಯನ್ನು ಶಿಕ್ಷಕ ಕೊಡುವನು. ಕೇವಲ ಅಂಕಗಳಿಸುವ ಯಂತ್ರವನ್ನು ಮಾಡದೆ ಅವರಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕ ಮಾಡುವನು. ವಿದ್ಯಾರ್ಥಿ, ವಿದ್ಯಾರ್ಥಿಗಳ ನಡುವೆ ಚರ್ಚೆ ಚಿಂತನೆಗಳ ಮೂಲಕ ಅವನ ಶಿಕ್ಷಣಕ್ಕೆ ಸುಗಮ ದಾರಿಯನ್ನು ಗುರು ಮಾಡಿಕೊಡುವನು. ಶಿಕ್ಷಕರು ತಮ್ಮ ಬುದ್ಧಿಶಕ್ತಿ ವಿವಿಧ ಬೋಧನಾ ವಿಧಾನಗಳಿಂದ ವಿದ್ಯಾರ್ಥಿಗಳನ್ನು ಕಲಿಕೆಗೆ ಹಚ್ಚುವ ಜೊತೆಗೆ ಅವರಲ್ಲಿ ಚೈತನ್ಯ, ಉತ್ಸಾಹ ಜೀವನೋತ್ಸಾಹವನ್ನು ತುಂಬುವ ದಿಕ್ಸೂಚಿಯಾಗಿದ್ದಾರೆ ಎಂದರು. ಶಿಕ್ಷಕನಲ್ಲಿ ಯಾವ ಬೇಧಭಾವವಿಲ್ಲದೆ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿ ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಸೃಷ್ಟಿ ಮಾಡುವನು ಎಂದು ಸ್ವಾಮಿ ವಿವೇಕಾನಂದ, ಪರಮಹಂಸರ ಹಾಗೂ ಸಂತ ಶಿಶುನಾಳ ಶರೀಫ, ಗುರುಗೋವಿಂದಭಟ್ಟರ ನಿರ್ದೇಶನಗಳ ಜೊತೆಗೆ ಪ್ರಸ್ತುತ ಗುರು-ಶಿಷ್ಯರ ಸಂಬಂಧಗಳನ್ನು ತಮ್ಮ ಉಪನ್ಯಾಸಗಳಲ್ಲಿ ಉದಾಹರಿಸುತ್ತ ತಿಳಿಸಿದರು.
ಶಿಕ್ಷಕರ ದಿನಾಚರಣೆ ನಿಮಿತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಡಿ. ಮಲ್ಲೇಶ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ತಮ್ಮ ಶಿಕ್ಷಕ ವೃತ್ತಿಯನ್ನು ಕೇವಲ ವೃತ್ತಿಯನ್ನಾಗಿ ತೆಗೆದುಕೊಳ್ಳದೇ ಭಿನ್ನವಾಗಿ ಸೃಜನಶೀಲವಾಗಿ ಪರಿಸರದಲ್ಲಿರುವ ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮ ಶಾಲೆಯನ್ನಾಗಿ ಪರಿವರ್ತಿಸಿ, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿದ ಆತ್ಮತೃಪ್ತಿ ನನಗೆ ಇದೆ. ವಿದ್ಯಾರ್ಥಿಗಳಿಂದ, ಸಾರ್ವಜನಿಕರಿಂದ ಸಿಗುವ ಪ್ರಶಂಸೆಯೇ ಶಿಕ್ಷಕರಿಂದ ದೊರೆಯುವ ಪ್ರಶಸ್ತಿಯಿಂದ ತೃಪ್ತನಾದ ನನಗೆ ಇಂದು ರಾಜ್ಯಮಟ್ಟದ ಉತ್ತಮ ಪ್ರಶಸ್ತಿ ಲಭಿಸಿರುವುದು ಸಂತೋಷ ತಂದಿದೆ ಎಂದರು. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಗೀತಾ ದೇವಾಂಗಮಠ, ಅಂದಾನವ್ವ ನರೇಗಲ್ಲ, ಅಶೋಕ ಬೂದಿಹಾಳ, ವಿಶೇಷ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಕೆ.ಬಿ.ದೊಡ್ಡಗೌಡ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾನಿಧ್ಯ ವಹಿಸಿದ್ದ ಪಂಚಾಕ್ಷರ ಶಿವಾಚಾರ್ಯರು ಮಾತನಾಡಿ, ಶಿಕ್ಷಕರು, ಗುರುಗಳು ಗುರುತರ ಜವಾಬ್ದಾರಿಯನ್ನು ಹೊಂದಿದ್ದಾರೆ. ದೃಶ್ಯ ಮಾಧ್ಯಮವು ಎಲ್ಲರನ್ನೂ ಮೋಡಿ ಮಾಡಿದೆ. ಅದರ ಹಿಡತದಿಂದ ಹೊರಬಂದು ಕಲಿಕೆಗೆ ಹಚ್ಚಿ ಅವರ ಪ್ರಗತಿಗೆ ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಭೂಮಿಕಾ ಹಾಗೂ ವಿಶಾಲ ಅವರಿಮದ ಸಂಗೀತ ನಡೆಯಿತು. ಪ್ರಾರಂಭದಲ್ಲಿ ಚನಬಸಯ್ಯ ಹೇಮಗಿರಿಮಠ ವೇದಘೋಷ ಮಾಡಿದರು. ಬಸಣ್ಣ ಮಲ್ಲಾಡದ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಪ್ರಕಾಶ ಬೇಲಿ ನಿರೂಪಿಸಿದರು.

loading...