ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸೂಚನೆ

0
0
loading...

ಕನ್ನಡಮ್ಮ ಸುದ್ದಿ-ಹಾವೇರಿ: ಮಕ್ಕಳ ಹಕ್ಕುಗಳ ಕುರಿತು ಗ್ರಾಮ ಮಟ್ಟದಿಂದಲೇ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು ಹಾಗೂ ಮಕ್ಕಳ ಸಹಾಯವಾಣಿಯು ಜಿಲ್ಲೆಯ ವಿವಿಧ ಇಲಾಖೆಗಳ ಸಹಕಾರದಿಂದ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಕ್ಕಳ ಸಹಾಯವಾಣಿಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ಸಹಾಯವಾಣಿ (1098)ಯು ಜಿಲ್ಲೆಯಲ್ಲಿ ಮಕ್ಕಳ ರಕ್ಷಕನಂತೆ ಕಾರ್ಯನಿರ್ವಹಿಸುತ್ತಿದ್ದು ಇದರ ಕುರಿತು ಇನ್ನೂ ವ್ಯಾಪಕ ಪ್ರಚಾರದ ಅಗತ್ಯತೆ ಇದೆ ಹೆಚ್ಚು-ಹೆಚ್ಚು ಪ್ರಚಾರ ಮಾಡುವುದರಿಂದ ಮಕ್ಕಳ ಸಮಸ್ಯೆಯ ಕರೆಗಳು ಬರುತ್ತವೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಮಾತನಾಡಿ, 1098 ಇದು ಒಂದು ರಾಷ್ಟ್ರೀಯ ಉಚಿತ ತುರ್ತು ದೂರವಾಣಿ ಸೇವೆಯಾಗಿದೆ ಹಾಗೂ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. 18 ವರ್ಷದ ಒಳಗಿನ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಮಕ್ಕಳ ಸಹಾಯವಾಣಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಸಹಾಯವಾಣಿಯ ಪ್ರಗತಿ ವರದಿಯನ್ನು ಪರಿಶೀಲಿಸಿ ಜಿಲ್ಲೆಯಲ್ಲಿ ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯಗಳು, ಶಾಲೆ ಬಿಟ್ಟ ಮಕ್ಕಳು, ವೈದ್ಯಕೀಯ ಸೌಲಭ್ಯಕ್ಕೆ ಸಂಬಂಧಿಸಿದ ಹಾಗೂ ವಸತಿ ಸೌಲಭ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆದ್ದರಿಂದ ಎಲ್ಲಾ ಇಲಾಖೆಯವರು ತಮ್ಮ ತಮ್ಮ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗಬೇಕು ಎಂದರು. ವಾಯ್.ಎಲ್.ಲಾಡಖಾನ್ ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲಾ ಮಕ್ಕಳ ವಸತಿ ನಿಲಯಗಳಲ್ಲಿ ಮಕ್ಕಳ ಸಹಾಯವಾಣಿಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಮತ್ತು ಕಡ್ಡಾಯವಾಗಿ ಮಕ್ಕಳ ಸಹಾಯವಾಣಿಯ ಗೋಡೆಬರಹವನ್ನು ಬರೆಯಿಸಬೇಕು ಎಂದರು.
ಎಸ್.ಹೆಚ್. ಮಜೀದ್, ಜಾಫರ ಷರೀಫ್, ಡಾ. ರಾಘವೇಂದ್ರ ಸ್ವಾಮಿ, ಸಂತೋಷ ಪವಾರ, ಪಿ.ವೈ.ಶೆಟ್ಟೆಪ್ಪನವರ, ಗೀತಾ ಪಾಟೀಲ ಇದ್ದರು.

loading...