ಮತ ಎಣಿಕೆ ಕೇಂದ್ರದ ಕೊಠಡಿ ಪರಿಶೀಲನೆ

0
0
loading...

ಕನ್ನಡಮ್ಮ ಸುದ್ದಿ-ಕುಮಟಾ: ಪುರಸಭೆ ಚುನಾಣೆಯಲ್ಲಿ ತನ್ನೆಲ್ಲಾ ತಾಪತ್ರಯಗಳ ನಡುವೆಯೂ ಮತದಾರ ಪ್ರಭು ತನ್ನ ಪಾಲಿನ ಕರ್ತವ್ಯವನ್ನು ಚೊಕ್ಕವಾಗಿ ಮುಗಿಸಿದ್ದು, ಚುನಾವಣೆಯಲ್ಲಿ ಸ್ಫರ್ದಿಸಿದ್ದ ಒಟ್ಟೂ 70 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಪಟ್ಟಣದ ಎಪಿಎಂಸಿಯ ಭದ್ರತಾ ಕೊಠಡಿಯಲ್ಲಿ ಕ್ಷೇತ್ರವಾರು ಪ್ರತ್ಯೇಕವಾಗಿ ಬೀಗಮುದ್ರೆ ಹಾಕಿ ಕುಳಿತಿದೆ.
ಪಟ್ಟಣದ ಎಪಿಎಂಸಿಯ ಭದ್ರತಾ ಕೊಠಡಿಯಲ್ಲಿ ಪುರಸಭೆಯ 22 ವಾರ್ಡ್‍ಗಳ ಮತ ಯಂತ್ರಗಳನ್ನು ಸಂಗ್ರಹಿಸಿಡಲಾಗಿದ್ದು, 2 ಪಿಎಸ್‍ಐ, 3 ಎಎಸ್‍ಐ, 4 ಎಚ್‍ಸಿ, 8 ಡಿಎಆರ್, 6 ಪಿಸಿ ಗಳು ಅಹೋರಾತ್ರಿ ಸತತ ಕಾವಲು ಕಾಯುತ್ತಿದ್ದಾರೆ. ಸೆ 3 ರಂದು ಬೆಳಗಾಯಿತೆಂದರೆ ಅಭ್ಯರ್ಥಿಗಳ ಭವಿಷ್ಯ ಅನಾವರಣಗೊಳ್ಳುವ ಕಾಲ ಸನ್ನಿಹಿತವಾಗಲಿದ್ದು, ಇಡೀ ಪಟ್ಟಣದ ಆ ಕ್ಷಣವನ್ನು ಕಾತುರದಿಂದ ಎದುರು ನೋಡುತ್ತಿದೆ.

ಎಪಿಎಂಸಿಯ ಭದ್ರತಾ ಕೊಠಡಿಯಲ್ಲಿ ತಹಶೀಲ್ದಾರ ಮೇಘರಾಜ ನಾಯ್ಕ, ವಿಚಕ್ಷಣ ದಳ ಅಧಿಕಾರಿ ಆರ್ ಜಿ ಗುನಗಿ, ಸಿಪಿಐ ಸಂತೋಷ ಶೆಟ್ಟಿ, ಪಿಎಸ್‍ಐ ಸಂಪತ್ ಅವರು ಭೇಟಿ ನೀಡಿದ್ದು, ಮತಯಂತ್ರಗಳಿಗೆ ಒದಗಿಸಲಾದ ಬಿಗು ಬಂದೋಬಸ್ತನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಭದ್ರತಾ ಕೊಠಡಿ ಸುತ್ತಲು ಯಾರನ್ನೂ ಹತ್ತಿರ ಸುಳಿಯದಂತೆ ನಿಗಾ ವಹಿಸಲಾಗಿದೆ.
ಸೆ 3 ರಂದು ಮತ ಎಣಿಕೆಯಲ್ಲಿ ಪರವಾನಗಿ ಪಡೆದವರ ಹೊರತಾಗಿ ಇನ್ನುಳಿದವರಿಗೆ ಪ್ರವೇಶ ನಿಷಿದ್ಧವಾಗಿದೆ. ಮತ ಎಣಿಕೆ ಪ್ರಾರಂಭವಾದ ಗಂಟೆಯೊಳಗೆ ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಯಿದ್ದು, ಯಾವ ಅಭ್ಯರ್ಥಿಗೆ ಬೇವು ಹಾಗೂ ಯಾವ ಅಭ್ಯರ್ಥಿಗೆ ಬೆಲ್ಲವೆಂದು ತಿಳಿಯಲಿದೆ.

ಅದರಂತೆ ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆದಿದ್ದು, 11,017 ಪುರುಷರು ಹಾಗೂ 10,867 ಮಹಿಳೆಯರು ಸೇರಿದಂತೆ ಒಟ್ಟು 21,884 ಮತದಾರರ ಪೈಕಿಯಲ್ಲಿ 7,529 ಪುರುಷರು ಹಾಗೂ 7,552 ಮಹಿಳೆಯರು ಸೇರಿದಂತೆ ಒಟ್ಟೂ 15,081 ಮಂದಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಇದರಲ್ಲಿ ವಾರ್ಡ್ ನಂಬರ್ 4ರ ವನ್ನಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇ 83.97 ರಷ್ಟು ಗರೀಷ್ಠ ಮತದಾನವಾದರೆ, ವಾರ್ಡ್ ನಂಬರ್ 9ರ ಗಿಬ್ ಹೆಣ್ಣು ಮಕ್ಕಳ ಮಾದ್ಯಮಿಕ ಶಾಲೆಯಲ್ಲಿ ಶೇ 57.19 ರಷ್ಟು ಕನೀಷ್ಠ ಮತದಾನವಾಗಿದೆ. ಪಟ್ಟಣದ ಎಪಿಎಂಸಿ ಸಭಾಭವನದ ಸ್ಟ್ರಾಂಗ್ ರೂಮ್‍ನಲ್ಲಿ ಮತ ಯಂತ್ರಗಳನ್ನು ಭದ್ರಪಡಿಸಿದ್ದು, ಬಿಗಿ ಪೆÇಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮತದಾನ ಶಾಂತಿಯುತವಾಗಿ ನಡೆಸುವಲ್ಲಿ ತಾಲೂಕು ಆಡಳಿತ ಯಶಸ್ವಿಯಾಗಿದೆ. 22 ವಾರ್ಡ್‍ಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ಸೆ 3 ರಂದು ಬೆಳಿಗ್ಗೆ ನಿರ್ಧಾರಗೊಳ್ಳಲಿದೆ.

loading...