ಮಲ್ಲಿಕಾರ್ಜುನ ಖರ್ಗೆರದ್ದು ರಾಜಕೀಯ ಸ್ಟಂಟ್

0
0
loading...

ಬೆಂಗಳೂರು: ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಸ್ಟಂಟ್ ಮಾಡಿದ್ದಾರೆ.ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಮುಗಿಯದಿದ್ದರೂ ಸಣ್ಣ ವಿಮಾನ ಹಾರಿಸಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದನ್ನು ಬಿಟ್ಟರೆ ಖರ್ಗೆ ಈ ಭಾಗಕ್ಕೆ ಏನನ್ನೂ ಮಾಡಲಿಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಪ್ರಯೋಗಿಕ ವಿಮಾನ ಹಾರಾಟ ನಡೆಸಿ ಜನರನ್ನು ಓಲೈಕೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕಲ್ಬುರ್ಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರಿಸುತ್ತಿಲ್ಲ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು. ಈಗಾಗಲೇ ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ಕಲಬುರಗಿಗೆ ವಿಮಾನ ನಿಲ್ದಾಣ ಜಾರಿಯಾಗಿದ್ದೇ ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ. ಅದನ್ನು ಮರೆತಿರುವ ಖರ್ಗೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ವಿಮಾನ ನಿಲ್ದಾಣಕ್ಕೆ ನಾನು ಕೂಡ ಭೇಟಿ ನೀಡಿದ್ದೇನೆ. ಅಲ್ಲಿ ಪೂರ್ಣ ಪ್ರಮಾಣದ ಕಾಮಗಾರಿಯೇ ನಡೆದಿಲ್ಲ. ಆದರೂ ಖರ್ಗೆ ಚುನಾವಣೆ ಗಮನದಲ್ಲಿಟ್ಟುಕೊಂಡು ಉದ್ಘಾಟನೆಗೆ ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು.
ಈ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ವತಿಯಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಖರ್ಗೆಗೆ ಜಿಲ್ಲೆಯ ಜನತೆ ಸೋಲಿನ ರುಚಿ ತೋರಿಸಲಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಕೇಂದ್ರ ಮತ್ತು ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇಂದು ದೇಶದ ಜಿಡಿಪಿ ಬೆಳವಣಿಗೆ ಶೇ.8.2ಕ್ಕೆ ಏರಿಕೆಯಾಗಿದೆ. ಇದು ಏನನ್ನು ತೋರಿಸುತ್ತದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಮನಬಂದಂತೆ ಮಾತನಾಡಿದರೆ ಜನ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಕರ್ನಾಟಕದಲ್ಲಿ ಅವರ ಸರ್ಕಾರ ಆಡಳಿತದಲ್ಲಿದ್ದಾಗ ಎಷ್ಟು ಅಭಿವೃದ್ಧಿಯಾಗಿದೆ ಎಂಬುದು ತಿಳಿದಿದೆ. ಅಧಿಕಾರ ಕಳೆದುಕೊಂಡಿ ದ್ದರೂ ಹಿಂಬಾಗಿಲ ಮೂಲಕ ಸರ್ಕಾರ ರಚನೆ ಮಾಡಲಾಗಿದೆ. ಪ್ರತಿಪಕ್ಷದಲ್ಲಿ ಕುಳಿತಿರುವ ನಾವು ರಚನಾತ್ಮಕ ಕೆಲಸ ಮಾಡು ತ್ತೇವೆ. ಜನರು ನಮಗೆ ಪೂರ್ಣ ಬಹುಮತ ನೀಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಲೋಕೋಪಯೋಗಿ ಮತ್ತು ನೀರಾವರಿ ಸಚಿವರು ಕಮೀಷನ್ ನೀಡುವಂತೆ ಗುತ್ತಿಗೆದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ.ಈ ಎರಡು ಇಲಾಖೆಗಳಲ್ಲಿ ಗುತ್ತಿಗೆದಾರರು ಕಮೀಷನ್ ನೀಡದ ಕಾರಣ ಯಾವುದೇ ಕೆಲಸಗಳು ನಡೆಯುತ್ತಿಲ್ಲ.ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟುಕಮೀಷನ್ ನೀಡದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಸಚಿವರು ಬೆದರಿಸುತ್ತಿದ್ದಾರೆ ಎಂದುದೂರಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದು 100ದಿನವಾದರೂ ಜನರಲ್ಲಿ ಸರ್ಕಾರಕ ಇದೆಯೇ ಎಂಬ ಭಾವನೆ ಮೂಡಿದೆ. ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸವನ್ನು ಮಾಡುವುದಿಲ್ಲ. ಕನಿಷ್ಟ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯದ ಅಭಿವೃದ್ಧಿ ಬಗ್ಗೆ ಸಮ್ಮಿಶ್ರ ಸರ್ಕಾರಕ್ಕೆ ಆಸಕ್ತಿ ಇಲ್ಲ. ಕೇವಲ ಅಧಿಕಾರಿಗಳ ವರ್ಗಾವಣೆಯಲ್ಲೇ ಸರ್ಕಾರ ನಿರತವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ಮೇಲೆ ಉತ್ತರ ಕರ್ನಾಟಕ ಭಾಗಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ನಾವು ಟೀಕೆ ಮಾಡಿದರೆ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ಆಪಾದನೆ ಮಾಡುತ್ತಾರೆ.ಯಾವುದೇ ಕಾರಣಕ್ಕೂ ಈ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ನಾವು ಮಾಡುವುದಿಲ್ಲ. ಅವರಾಗೇ ಕಿತ್ತಾಡಿಕೊಂಡು ಸರ್ಕಾರ ಬೀಳಿಸುತ್ತಾರೆ. ಸ್ವಲ್ಪ ದಿನ ಕಾದು ನೋಡಿ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪರಸ್ಪರ ಒಬ್ಬರನ್ನೊಬ್ಬರು ಮುಖ ಕೊಟ್ಟು ಮಾತನಾಡದಷ್ಟು ದೂರ ಹೋಗಿದ್ದಾರೆ. ಅವರಲ್ಲೇ ಒಮ್ಮತ ಇಲ್ಲ.ಒಂದು ವೇಳೆ ಇಬ್ಬರು ಕಿತ್ತಾಡಿಕೊಂಡು ಸರ್ಕಾರ ಪತನವಾದರೆ ಬಿಜೆಪಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

loading...