ಮಹಾತ್ಮರ ಮೂರ್ತಿಗಳಿಗೆ ಹಾನಿಯುಂಟು ಮಾಡುವವ ವಿರುದ್ಧ ಕ್ರಮಕ್ಕೆ ಒತ್ತಾಯ

0
0
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಮೈಸೂರು ಜಿಲ್ಲೆಯ ಹುಳಿಮಾವು ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಮೂರ್ತಿಯನ್ನು ಕೆಲವು ಕಿಡಿಗೇಡಿಗಳು ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಮಹಾತ್ಮರ ಮೂರ್ತಿ, ಪ್ರತಿಮೆಗಳಿಗೆ ಹಾನಿ ಉಂಟು ಮಾಡುವವರಿಗೆ ಕಠಿಣ ಶಿಕ್ಷೆ ಜಾರಿಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಬಸವಸೇನೆ ಜಿಲ್ಲಾ ಘಟಕದ ಪದಾಧಿಕರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಬಸವಸೇನೆ ಜಿಲ್ಲಾಧ್ಯಕ್ಷ ಸೋಮುಗೌಡ ಕಲ್ಲೂರ ಮಾತನಾಡಿ, ನಂಜನಗೂಡು ತಾಲೂಕಿನ ವರುಣಾ ಕ್ಷೇತ್ರದ ವ್ಯಾಪ್ತಿಯ ಹುಳಿ ಮಾವು ಗ್ರಾಮದಲ್ಲಿ ಡಾ. ಬಾಬು ಜಗಜೀವನರಾಮ್‍ರವರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳು ಅವರ ವ್ಯಕ್ತಿತ್ವವನ್ನು ಅರಿಯದೆ ಮಾಡಿದ ದುಷ್ಕøತ್ಯವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ದೇಶದ ಮಹಾನ್ ನಾಯಕರ ಮೂರ್ತಿಗಳನ್ನು ಭಗ್ನಗೊಳಿಸುವುದು ಅವರ ವ್ಯಕ್ತಿತ್ವಕ್ಕೆ ಕುಂದು ತರುವಂತಹ ವ್ಯವಸ್ಥಿತ ಕೃತ್ಯಗಳು ನಡೆಯುತ್ತಿರುವುದು ಖಂಡನೀಯ. ಕೆಲವು ಕಿಡಿಗೇಡಿಗಳು ಇಂತಹ ಕೃತ್ಯವೆಸಗಿ ರಾಷ್ಟ್ರದಲ್ಲಿ ಅಶಾಂತಿಯನ್ನು ಹರಡುತ್ತಿದ್ದು ಅಂತಹ ದುಷ್ಟರನ್ನು ಕೂಡಲೆ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಹಾಗೂ ರಾಷ್ಟ್ರದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ದಕ್ಷ ಆಡಳಿತಗಾರರು, ಭವ್ಯ ಭಾರತದ ಕನಸು ಕಂಡಿದ್ದ ಮಾಜಿ ಉಪ ಪ್ರಧಾನಿ, ದಲಿತರ, ಶೋಷಿತರ, ಶ್ರಮಿಕರ, ರೈತರ ಧ್ವನಿಯಾಗಿ, ರಾಷ್ಟ್ರದ ಅತ್ಯುನ್ನತ ನಾಯಕರಾಗಿದ್ದರು. ಅಂತವರ ವ್ಯಕ್ತಿತ್ವಕ್ಕೆ ಕುಂದು ತರದೆ ಅವರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ನಡೆಯಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ಕೃತ್ಯವೆಸಗಿದ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿಯಾಗಲಿ ಎಂದು ಮನವಿ ಪತ್ರದಲ್ಲಿ ತಿಳಿಸಿದರು.

ಪ್ರಕಾಶ ಆರ್.ಕೆ., ಶಿವು ಭೂತನಾಳ, ಚಿದಾನಂದ ಯಳಮೇಲಿ, ಆನಂದ ಜಂಬಗಿ, ರುದ್ರಯ್ಯ ಮಠ, ವಿರೇಶ ಪಾಟೀಲ ಸೇರಿದಂತೆ ಉಪಸ್ಥಿತರಿದ್ದರು.

loading...