ಮಾನವನು ಸಾಕ್ಷಾತ್ಕಾರ ಸಂಪಾದನೆಗೆ ಪ್ರಯತ್ನಿಸುವ ಅಗತ್ಯವಿದೆ: ಶ್ರೀಗಳು

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಅಂತರಂಗ ಬಹಿರಂಗಗಳಲ್ಲಿ ದ್ವಂದ್ವಗಳಿಲ್ಲದಂತೆ ಬದುಕಿನ ದಾರಿಯುದ್ದಕ್ಕೂ ಜೀವನ ವಿಧಾನಕ್ಕೆ ಮಾರ್ಗದರ್ಶನ ಮಾಡುವ ಆಧ್ಯಾತ್ಮ ಚಿಂತನೆಯಿಂದÀ ಬದುಕಿಗೆ ನಿತ್ಯ ಪ್ರಸನ್ನತೆ ಪ್ರಾಪ್ತವಾಗುತ್ತದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಶ್ರೀಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಜರುಗಿದ ಶ್ರೀಗುಡ್ಡಾಪೂರ ದಾನಮ್ಮತಾಯಿ ಪುರಾಣ ಪ್ರವಚನ ಮಂಗಲದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹುಟ್ಟಿನೊಂದಿಗೇ ‘ಸಾವು’ ಹಿಂಬಾಲಿಸಿದೆ ಎಂಬ ‘ಪರಮ ಸತ್ಯ’ದ ಅರಿವಿನಿಂದ ಮನುಷ್ಯ ದೂರ ಸರಿಯಬಾರದು. ಸಾಧು, ಸನ್ಯಾಸಿ, ಯೋಗಿ, ತ್ಯಾಗಿ, ಭೋಗಿ ಯಾರೇ ಇದ್ದರೂ ಸಾವು ನಿಶ್ಚಿತ. ಹಾಗಾಗಿ ಸಾವು ಕೂಡಾ ಸನಾತನ. ಇದನ್ನು ಮರೆತು ಮಾನವನು ಸ್ವಾರ್ಥದ ಬೆನ್ನುಹತ್ತಿದ್ದಾನೆ. ಈ ವ್ಯಾಮೋಹದ ತುಡಿತಗಳಿಂದ ಹೊರಬಂದು ಸಾಕ್ಷಾತ್ಕಾರ ಸಂಪಾದನೆಗೆ ಪ್ರಯತ್ನಿಸುವ ಅಗತ್ಯವಿದೆ ಎಂದರು. ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಎಲ್ಲೆಡೆ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ಬದುಕಿನ ವಿದ್ಯಮಾನಗಳು ಜನವಿರೋಧಿಯಾಗಿ ಬಲಿಯುತ್ತಿವೆ. ನಾಟಕೀಯ ಜೀವನ ವಿಧಾನದಲ್ಲಿ ಸತ್ಯ ಮರೆಮಾಚಿ ಮೌಲ್ಯಗಳೆಲ್ಲ ನೆಲಕ್ಕಚ್ಚುತ್ತಿವೆ. ಈ ನಿಟ್ಟಿನಲ್ಲಿ ಆಧ್ಯಾತ್ಮದ ಅನುಸಂಧಾನವು ಮುಕ್ತ ಭಾವಸಂಪನ್ನತೆಯನ್ನು ಕರುಣಿಸುತ್ತದೆ ಎಂದರು. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಶಿವಪ್ಪಣ್ಣ ಕುಸೂಗಲ್ಲ, ಬಸಯ್ಯ ಗುಡಿ, ಎಂ.ಸಿ.ಹುಲ್ಲೂರ, ವ್ಹಿ.ಬಿ.ಕೆಂಚನಗೌಡರ, ಬಸವರಾಜ ಕೊಳ್ಳಿ, ಶಿವಪ್ಪ ಹೂಲಿ, ಅಪ್ಪಣ್ಣ ದೇಶಪಾಂಡೆ, ಚಂಬಣ್ಣ ಉಂಡೋಡಿ, ಚಂಬಣ್ಣ ಪೂಜಾರ, ಗುರುರಾಜ ಕಾಜಗಾರ ಉಪಸ್ಥಿತರಿದ್ದರು. ಸೋಮಲಿಂಗಶಾಸ್ತ್ರಿ ಗುಡ್ಡದಮಠ ನಿರೂಪಿಸಿದರು.
ಇದಕ್ಕೂ ಮುನ್ನ ಶ್ರೀಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಹಾಗೂ ನೂರೊಂದು ಕುಂಭಗಳ ಮೇಳ ಹಲವಾರು ಜನಪದ ವಾದ್ಯಮೇಳಗಳೊಂದಿಗೆ ಜರುಗಿತು.

loading...