ಯುವಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅವಶ್ಯ

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ತೆಂಗಿನ ಕಾಯಿಯಲ್ಲಿ ಪರಿಸರ ಸ್ನೇಹಿ ಗಣೇಶ ಹಾಗೂ ವಿವಿಧ ಅಲಂಕಾರಿಕ ವಸ್ತುಗಳ ತಯಾರಿಕೆ ತರಬೇತಿ ನೀಡುವ ಮೂಲಕ ಯುವಜರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವದು ಶ್ಲಾಘನೀಯ ಎಂದು ಧಾರವಾಡ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗುರ ಅಭಿಪ್ರಾಯಪಟ್ಟರು.
ರುಡ್‍ಸೆಟ್ ಸಂಸ್ಥೆಯಲ್ಲಿ ಜರುಗಿದ ತೆಂಗಿನಕಾಯಿಯಲ್ಲಿ ಗಣೇಶ ಹಾಗೂ ವಿವಿಧ ಕಲಾಕೃತಿ ತಯಾರಿಸುವ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಿರುದ್ಯೋಗ ಯುವಕ ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡುತ್ತಿದ್ದು ಈ ಕಲೆಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕಾಗಿದೆ. ತೆಂಗಿನಕಾಯಿಯಲ್ಲಿ ಗಣೇಶ ನಿರ್ಮಿಸುವುದು ಇದೊಂದು ನೂತನ ಕಲೆಯಾಗಿದ್ದರಿಂದ ಈ ಕಲೆಯನ್ನು ಪ್ರಚಾರ ಮಾಡಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು. ಸಹಾಯಕ ಪೋಲಿಸ್ ಆಯುಕ್ತ ಎಮ್.ಎಸ್ ರುದ್ರಪ್ಪ ಮಾತನಾಡಿ, ಕಡಿಮೆ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಈ ಕಲೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಮುಂಬರುವ ವರ್ಷದಲ್ಲಿ ಗಣೇಶ ಹಬ್ಬದ ಮೂರು ತಿಂಗಳು ಮೊದಲೆ ಈ ಕಲೆಯನ್ನು ಪ್ರದರ್ಶನ ಮಾಡಿ ಹೆಚ್ಚು ಜನರಿಗೆ ತರಬೇತಿ ನೀಡಬೇಕು. ಈ ತರಬೇತಿ ಸ್ವಯಂ ಉದ್ಯೋಗಕ್ಕೆ ಒಂದು ದಾರಿಯನ್ನು ನೀಡುತ್ತಿದೆ ಎಂದರು.
ಸಂಸ್ಥೆಯ ನಿರ್ದೇಶಕ ರಾಜೇಂದ್ರ ಕಗ್ಗೋಡಿ ಅಧ್ಯಕ್ಷತೆವಹಿಸಿದ್ದರು. ಎಸ್.ಡಿ.ಎಮ್ ತಾಂತ್ರಿಕ ಮತ್ತು ಅಭಿಯಾಂತ್ರಿಕ ವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಬಿ. ಒಣಕುದುರೆ, ಸಿಂಡಿಕೆಟ್ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಡೆಪ್ಯೂಟಿ ರಿಜನಲ್ ಮ್ಯಾನೇಜರ್, ಕೆ. ಶಿವಕುಮಾರ, ಉಪನ್ಯಾಸಕರಾದ ಜಗದೀಶ ಹಾಗೂ ವೀರನಗೌಡ ಬಾವಿಕಟ್ಟಿ ಉಪಸ್ಥಿತರಿದ್ದರು. ಜಗದೀಶ ಪೂಜಾರ ನಿರೂಪಿಸಿದರು. ಚೆನ್ನಪ್ಪ ದೇವಗಿರಿ ವಂದಿಸಿದರು. ತರಬೇತಿಯಲ್ಲಿ ತಯಾರಿಸಿದ ಗಣೇಶ ಹಾಗೂ ವಿವಿಧ ಅಲಂಕಾರಿಕ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

loading...