ಲಿಂಗಾಯತ ಧರ್ಮ ಹಿಂದು ಧರ್ಮದ ವಿರೋಧಿಯಲ್ಲ: ಮಾತೆ ಮಹಾದೇವಿ

0
0
loading...

 

ಕನ್ನಡಮ್ಮ ಸುದ್ದಿ-ಧಾರವಾಡ: ಲಿಂಗಾಯತ ಧರ್ಮ ವಿಶ್ವ ಧರ್ಮಗಳ ಸಾಲಿನಲ್ಲಿ ನಿಲ್ಲುವ ಎಲ್ಲ ಅರ್ಹತೆ ಹೊಂದಿದ್ದು ಇದು ಎಂದಿಗೂ ಹಿಂದು ಧರ್ಮದ ವಿರೋಧಿಯಲ್ಲ ಹಾಗೆಯೇ ಯಾವುದೇ ಧರ್ಮದ ಗುಲಾಮವೂ ಅಲ್ಲ ಜಗತ್ತಿನ ಧರ್ಮಗಳ ಸಾಲಿನಲ್ಲಿ ಬಸವಣ್ಣನವರು ಕೊಟ್ಟ ಲಿಂಗಾಯತ ಧರ್ಮ ನಿಲ್ಲಲೇಬೇಕು ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.
ಮುರುಘಾಮಠದಲ್ಲಿ ಆಯೋಜಿಸಿದ್ದ ಶ್ರೀಮನ್ನಿರಂಜನ ಜಗದ್ಗುರು ಮುರುಘರಾಜೇಂದ್ರ ಪ್ರಸಾದ ನಿಲಯದ ಶತಮಾನೋತ್ಸವ ಹಾಗೂ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. 12 ನೇ ಶತಮಾನದಲ್ಲಿ ಬಸವಣ್ಣನಿಂದ ಆರಂಭವಾದ ಲಿಂಗಾಯತ ಧರ್ಮ ಕೆಲವರ ಷ್ಯಡ್ಯಂತ್ರಕ್ಕೆ ಸಿಕ್ಕು ನಲುಗುವಂತಾಯಿತು ಇದಕ್ಕೆ ನಮ್ಮ ಜನರ ಅಜ್ಞಾನವೇ ಕಾರಣವಾಗಿತ್ತು. ಲಿಂಗಾಯತಕ್ಕೆ ಧರ್ಮ ಯಾವುದೇ ಧರ್ಮದ ವಿರೋಧಿಯಲ್ಲ. ಸಿಖ್‍ರು ಪ್ರತ್ಯೇಕ ಧರ್ಮ ಮಾಡಿಕೊಂಡರೂ, ಅವರೇನು ದೇಶದ್ರೋಹಿಗಳೇ, ಭಾರತದ ವಿರುದ್ದ ಮಾತನಾಡುತ್ತಾರೆಯೇ, ಅವರಷ್ಟೇ ನಾವು ಕೂಡ ದೇಶಪ್ರೇಮಿಗಳು. ಲಿಂಗಾಯತ ಧರ್ಮದ ನಂತರ ಹುಟ್ಟಿಕೊಂಡ ಸಿಖ್ ಧರ್ಮಕ್ಕೆ ಪತ್ಯೇಕ ಧರ್ಮದ ಸ್ಥಾನಮಾನ ಲಭಿಸಿತು. ಏಕೆಂದರೆ ಸಿಖ್‍ರಿಗೆ ತಮ್ಮ ಧರ್ಮದ ಬಗ್ಗೆ ಅಷ್ಟೊಂದು ಇಚ್ಚಾಶಕ್ತಿ ಇತ್ತು. ಅವರ ಹಾಗೇ ‘ಗಟ್ಟಸು’ ನಮ್ಮ ಜನರಲ್ಲಿ ಇಲ್ಲ ಎಂದರು.

ಲಿಂಗಾಯತ ಧರ್ಮಕ್ಕೆ ವಚನ ಸಾಹಿತ್ಯವೇ ಸಂವಿಧಾನ ಈ ಧರ್ಮದ ಸ್ಥಾನ ಮಾನ ಪಡೆಯಲು ಖತ್ತಿ ಹಿಡಿದು ಹೋರಾಟ ಮಾಡಬೇಕು ಎಂದಲ್ಲ ಪ್ರತಿಯೊಬ್ಬರು ಅಜ್ಞಾನ ತೊಡೆದು, ಜ್ಞಾನದ ದೀವಿಗೆ ಹಿಡಿದು ಶಾಂತಿಯುತ ಹೋರಾಟಕ್ಕೆ ದುಮುಕಬೇಕು. ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆಯ ಪಟ್ಟಾಭಿಷೇಕ ಮಾಡುವ ಸಮಯ ಈಗ ಬಂದಿದೆ ಲಿಂಗಾಯತ ಧರ್ಮಕ್ಕೆ ರಾಜ ಮರ್ಯಾದೆ ಸಿಗಬೇಕಿದೆ ಇದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು. ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮಿಜಿ ಮಾತನಾಡಿ, ಇತಿಹಾಸದಲ್ಲಿ ಅತಿ ಹೆಚ್ಚು ಅನ್ಯಾಯಕ್ಕೊಳಗಾದ ಧರ್ಮ ಎಂದರೆ ಅದು, ಲಿಂಗಾಯತ ಧರ್ಮ. ಇನ್ನಾದರೂ ಲಿಂಗಾಯತ ಜನ ಎಚ್ಚೆತ್ತುಕೊಂಡು ನಡೆಯಬೇಕು. ಬಸವಣ್ಣನನ್ನು ಅನುಸರಿಸುತ್ತಿರುವ ಮುರುಘಾಮಠ ಲಿಂಗಾಯತ ಧರ್ಮದ ದಿವ್ಯಜ್ಯೋತಿ ಎಂದರು.
ಇದೇ ಸಂದರ್ಭದಲ್ಲಿ ಬಸವ ದರ್ಶನ, ಬಸವ ಸಂದೇಶ, ವರ್ತಮಾನಕ್ಕೂ ವಚನ ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಯಿತು. ಬೆಂಗಳೂರಿನ ಗಂಜಾಂಮಠದ ಚಿದ್ಘನ ಸ್ವಾಮಿಜಿ, ಭೈರನಟ್ಟಿಯ ಶಿವಪುತ್ರ ಸ್ವಾಮಿಜಿ, ಚಿಕ್ಕೇರೂರ ವಿರಕ್ತಮಠದ ಚಂದ್ರಶೇಖರ ಸ್ವಾಮಿಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಜಿ, ಶೇಗುಣಸಿ ವಿರಕ್ತಮಠದ ಮಹಾಂತ ದೇವರು, ನಾಗರಾಜ ಪಟ್ಟಣಶೆಟ್ಟಿ, ಲಕಮನಹಳ್ಳಿ, ಸಿದ್ದರಾಮಣ್ಣ ನಡಕಟ್ಟಿ ಉಪಸ್ಥಿತರಿದ್ದರು. ಇದೇವೇಳೆ ಗ್ರಂಥ ದಾಸೋಹಿಗಳಾದ ಪುಟ್ಟಮ್ಮ ಬಶೆಟ್ಟೆಪ್ಪ ಬಶೆಟ್ಟಿಯವರ, ಎಚ್.ಎ. ವಿಜಯಕುಮಾರ, ಎಚ್.ಎಂ. ರೇವಣಸಿದ್ದಯ್ಯ ಅವರನ್ನು ಸನ್ಮಾನಿಸಲಾಯಿತು. ಶ್ರುತಿ ಶ್ರೀಧರ ಕುಲಕರ್ಣಿ ವಚನ ಸಂಗೀತ ಪ್ರಸ್ತುತಪಡಿಸಿದರು.

loading...