ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

0
1
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಫಸಲ್ ಬಿಮಾ ಬೆಳೆ ವಿಮೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಂಡಗೋಡ ಹಾಗೂ ಮಳಗಿ ಘಟಕದವರು ಗುರುವಾರ ತಾಲೂಕಿನ ಮಳಗಿ ಗ್ರಾಮದ ಶಿರಸಿ-ಹುಬ್ಬಳ್ಳಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು ಗ್ರಾಮದ ಶಿವಗಣೇಶ ಮದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸರ್ಕಾರದ ವ್ಯವಸ್ಥೆಯ ವಿರುದ್ದ ಘೋಷಣೆ ಮೊಳಗಿಸುತ್ತ ಸಂಚರಿಸಿ ಬಳಿಕ ಹೆದ್ದಾರಿಗೆ ಆಗಮಿಸಿ ರಸ್ತೆ ತಡೆ ಆರಂಬಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಲೋಪದೋಷದಿಂದಾಗಿ ತಾಲೂಕಿನ ಬಹುತೇಕ ಗ್ರಾ.ಪಂ ವ್ಯಾಪ್ತಿಯ ರೈತರಿಗೆ ಸಮರ್ಪಕ ಬೆಳೆ ವಿಮೆ ಸಿಗದೆ ತೀವ್ರ ಅನ್ಯಾಯವಾಗಿದೆ. ಹಿಂದೆ ಸರ್ಕಾರದ ಅಡಿಯಲ್ಲಿ ಬೆಳೆ ವಿಮೆ ನೀಡುವ ವ್ಯವಸ್ಥೆ ಇದ್ದಾಗ ಏನಾದರೂ ಸಮಸ್ಯೆ ಇದ್ದರೆ ಸರ್ಕಾರಕ್ಕೆ ಕೇಳಬಹುದಿತ್ತು. ಆದರೆ ಈಗ ಪ್ರಧಾನಮಂತ್ರಿ ಪಸಲ್ ಬಿಮಾ ಯೋಜನೆ ಟೆಂಡರ್ ಖಾಸಗಿ ಕಂಪನಿಗೆ ನೀಡಲಾಗಿರುವುದರಿಂದ ಹಣ ಉಳಿತಾಯ ಮಾಡುವ ಉದ್ದೇಶದಿಂದ ಕಂಪನಿಯವರು ಸರಿಯಾಗಿ ಆಣೆವಾರಿ ನಡೆಸದೆ ರೈತರಿಗೆ ಸಮರ್ಪಕ ಬೆಳೆ ವಿಮಾ ಸಿಗದಂತೆ ಮಾಡಿ ಮೋಸ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಪಾತ್ರ ಕೂಡ ಇದೆ ಎಂದು ಆರೋಪಿಸಿದರು. ಫಸಲ ಬಿಮಾ ಸಂಪೂರ್ಣ ಅವೈಜ್ಞಾನಿಕ ಯೋಜನೆಯಾಗಿದೆ ರೈತರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಅಧಿಕಾರ ಬಳಿ ಕೂಡ ಇದರ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಕಳೆದ ಬಾರಿ ಬೆಡಸಗಾಂವ ಭಾಗದಲ್ಲಿ ಶೇ 22 ರಷ್ಟು ವಿಮಾ ಮಂಜೂರಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಇದುವರೆಗೂ ಕಂಪನಿಯವರು ಹಣ ಜಮಾ ಮಾಡಿಲ್ಲ. ಕಂಪನಿಯವರು ತಕ್ಷಣ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದರು ಒತ್ತಾಯಿಸಿದರು. ಪಾಳಾ ಉಪ ತಹಸೀಲ್ದಾರ ಬಿ.ಎನ್ ಶೆಟ್ಟಿ ಸ್ಥಳಕ್ಕಾಗಮಿಸಿ ಈ ಬಗ್ಗೆ ತಮ್ಮಲ್ಲಿ ಸಂಪೂರ್ಣವಾದ ಮಾಹಿತಿ ಇಲ್ಲ ಹಾಗಾಗಿ ತಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದಕ್ಕೆ ಜಗ್ಗದ ಪ್ರತಿಭಟನಾನಿರತರು ಉಪವಿಭಾಗಾಧಿಕಾರಿ ಅಥವಾ ತಹಸೀಲ್ದಾರ ಸ್ಥಳಕ್ಕಾಗಮಿಸಿ ಫಸಲ್ ಬೀಮಾ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಲಿಖಿತ ಬರವಸೆ ನೀಡಬೇಕೆಂದು ಪಟ್ಟು ಹಿಡಿದರು. ಈ ನಡುವೆ ಮಧ್ಯ ಪ್ರವೇಶಿಸಿದ ಮುಂಡಗೋಡ ಸಿ.ಪಿ.ಐ ಕಿರಣಕುಮಾರ ಮೇಲಾಧಿಕಾರಿಗಳು ಬರುವವರೆಗೆ ರಸ್ತೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಬಳಿಕ ಸಹಾಯಕ ಕೃಷಿ ನಿರ್ಧೇಶಕ ಎಮ್.ಎಸ್ ಕುಲಕರ್ಣಿ ಸ್ಥಳಕ್ಕಾಗಮಿಸಿ, 15 ದಿನದೊಳಗಾಗಿ ಫಸಲ್ ಬೀಮಾ ಯೋಜನೆ ಕಂಪನಿ ಅಧಿಕಾರಿಗಳನ್ನು ಕರೆಸಿ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡುವುದಾಗಿ ಬರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಶಂಕ್ರಪ್ಪ ಗಾಣಿಗೇರ, ಶಂಬಣ್ಣ ಕೋಳೂರ, ಹನ್ಮಂತಪ್ಪ ಗುಡ್ಡಣ್ಣವರ, ರಾಘವೇಂದ್ರ ಕಿರವತ್ತಿ, ರಮೆಶ ಜಿಗಳೇರ, ಲೋಹಿತ ಮಟ್ಟಿಮನಿ, ರಮೇಶ ಜಿಗಳೇರ, ಮಕ್ತಂಸಾಬ ತರ್ಲಗಟ್ಟಿ, ಆನಂದ ಪೂಜಾರ, ಪ್ರಮೋದ ಜಕ್ಕಣ್ಣವರ, ಪ್ರಕಾಶ ಪಾಲೇಕೊಪ್ಪ, ಚೇತನ ನಾಯ್ಕ, ಶ್ರೀಕಾಂತ ಕೊಳಗಿ, ಹನುಮಂತ ಬೆಳವತ್ತಿ, ನಾಟನಾರ ಹನುಮ ಮುಂತಾದವರು ಉಪಸ್ಥಿತರಿದ್ದರು, ಸುಮಾರು ಒಂದು ಘಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ಥವ್ಯಸ್ಥಗೊಂಡಿತ್ತು, ಹತ್ತಾರು ಬಸ್ ಸೇರಿದಂತೆ ನೂರಾರು ವಾಹನಗಳು ಮುಂದೆ ಹೋಗಲಾಗದೆ ಇಲ್ಲಿಯೇ ಪರದಾಡುವಂತಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

loading...