ಶರಣರ ತತ್ವ ಪಾಲನೆಯಿಂದ ಮೂಡನಂಬಿಕೆಗೆ ಕಡಿವಾಣ ಹಾಕಬೇಕು: ಐಹೊಳ್ಳಿ

0
0
loading...

ವಿಜಯಪುರ: ಶರಣರ ತತ್ವ ಪಾಲನೆಯಿಂದ ಮೂಡನಂಬಿಕೆಗೆ ಕಡಿವಾಣ ಹಾಕಬೇಕು ಎಂದು ಶಿಕ್ಷಣ ತಜ್ಞ ಡಾ.ವಿ.ಡಿ. ಐಹೊಳ್ಳಿ ಹೇಳಿದರು.
ವಿಜಯಪುರ ತಾಲೂಕ ಶರಣ ಸಾಹಿತ್ಯ ಪರಿಷತ್, ಶ್ರೀ ಶಾಂತವೀರ ಪ್ರೌಢ ಶಾಲೆ ಸಹಯೋಗದಲ್ಲಿ ಬಬಲೇಶ್ವರದ ಶ್ರೀ ಶಾಂತವೀರ ಸಭಾ ಭವನದಲ್ಲಿ `ವಚನ ದಿನ’ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ `ಶರಣರ ಸಂದೇಶ’ ಎಂಬ ವಿಷಯದ ಕುರಿತು ಉಪನ್ಯಾಸ ಮಂಡಿಸಿದರು.
ಲಿಂಗಬೇಧ ನಿರಾಕರಿಸಿ ಮಾನವ ಕುಲವು ಒಂದೇ ಆಗಿದೆ. ಎಲ್ಲರಿಗು ಸಮಪಾಲು ಸಮಬಾಳ್ವೆಯನ್ನು ಕಟ್ಟಿಕೊಟ್ಟವರು ಶರಣರು. ಜಾಗತಿಕ ಇತಿಹಾಸ ಪರಂಪರೆಯಲ್ಲಿ ಶ್ರೇಷ್ಠವಾದ ಬದುಕನ್ನು ಕಟ್ಟಿ ಕೊಡುವಲ್ಲಿ ಬಸವಾದಿ ಶರಣ ಶರಣೆಯರ ಸಂದೇಶಗಳು ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಪ್ರೊ. ಮಲ್ಲಿಕಾರ್ಜುನ ಅವಟಿ ಮಾತನಾಡಿ, 12ನೇ ಶತಮಾನದ ಶರಣರ ವಚನ ಸಾಹಿತ್ಯವು ವಿಶ್ವಸಾಹಿತ್ಯವಾಗಿದೆ. ಜಗತ್ತಿನ ಎಲ್ಲ ವಯಸ್ಕರ ಭೌತಿಕ, ಆಧ್ಯಾತ್ಮಿಕ ಜೀವನದ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅತ್ಯಮೂಲ್ಯ ಸಾಹಿತ್ಯವಾಗಿದೆ. ತೃಪ್ತಿಯೊಂದಿಗೆ ಪ್ರಗತಿಯನ್ನು ಸಾಧಿಸುವ ಸರಳ ಜೀವನ, ಕಂದಾಚಾರ ರಹಿತ ಆಚರಣೆ ನಡೆ ನುಡಿ ಒಂದಾಗಿ ಬಾಳುವಂತಹ ದಾರಿ ದೀಪವೇ ವಚನ ಸಾಹಿತ್ಯವಾಗಿದೆ ಎಂದರು.
ಲೇಖಕಿನ ಇಂದುಮತಿ ಲಮಾಣಿ ಮಾತನಾಡಿ ಜಾತಿ, ಮತ, ಪಂತ ಬೇಧದ ವಿರುದ್ಧ ಹೋರಾಡಿ, ಸದಾಚಾರ ಸಂಪನ್ನರಾಗಿ ಕಾಯಕವನ್ನು ಅಪ್ಪಿಕೊಂಡವರು ಶರಣರು. ಬಸವತತ್ವವು ಯುವಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದರು.
ವಚನ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪಲ್ಲವಿ ಮಾಳಿ, ದ್ವಿತೀಯ ಸ್ಥಾನ ಪಡೆದ ಐಶ್ವರ್ಯ ಬಿರಾದಾರ, ತೃತೀಯ ಸ್ಥಾನ ಪಡೆದ ವೀಣಾ ತೊದಲಬಾಗಿ ಅವರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮಾಂತರ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದರ್ಶಿ ಡಿ.ಎಸ್. ಆಲಗೊಂಡ ಅಧ್ಯಕ್ಷತೆ ವಹಿಸಿದ್ದರು. ಡಾ.ಶಶಿಧರ ಶಿರಹಟ್ಟಿ, ಎಸ್.ಎಸ್. ಪಾಟೀಲ, ಜಿ.ಕೆ. ಕೊಟ್ಯಾಳ, ಐ.ಎಸ್. ಹುಂಡೇಕಾರ, ಎಚ್.ಬಿ. ಬಡಿಗೇರ, ವನಿತಾ ಜಂಗಮಶೆಟ್ಟಿ, ಐ.ಎಸ್. ಬೂದಿಹಾಳ, ಎಂ.ವಿ. ನಾಯ್ಕೋಡಿ, ಉಪಸ್ಥಿತರಿದ್ದರು.
ಎಲ್.ಪಿ. ಬಿರಾದಾರ ಸ್ವಾಗತಿಸಿದರು. ಕೆ.ಆರ್. ಅರಕೇರಿಮಠ ಕಾರ್ಯಕ್ರಮ ನಿರೂಪಿಸಿದರು. ಎಸ್.ಪಿ. ಬಿರಾದಾರ ವಂದಿಸಿದರು.

loading...