ಶಿಕ್ಷಣದಿಂದ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯ: ಶಾಸಕ ಪಾಟೀಲ

0
1
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ಈಡಿಗ ಸಮಾಜ ಸೇರಿದಂತೆ ಹಿಂದುಳಿದ ವರ್ಗದವರು ಮೊದಲು, ಸಂಪೂರ್ಣ ಶಿಕ್ಷಣವಂತರಾಗಿ, ಸಂಸ್ಕಾರ, ಸಂಸ್ಕೃತಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಎಲ್ಲಿಯವರೆಗೆ ಬರುವುದಿಲ್ಲ, ಅಲ್ಲಿಯವರೆಗೆ ಅವರ ಮೇಲೆ ಶೋಷಣೆ, ಅಸ್ಪ್ರಶ್ಯತೆ, ದಬ್ಬಾಳಿಕೆ ಹೊಗಲಾಡಿಸಲು ಸಾಧ್ಯವಿಲ್ಲ ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ತಹಸೀಲ್ದಾರ್‌ ಕಚೇರಿಯ ಸಭಾಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಜರುಗಿದ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿವಿದ ಮಹಾನ್‌ ಪುರುಷರ ಜಯಂತಿ ಆಚರಣೆಗಳನ್ನು ಇಂದು ಅವರವರ ಧರ್ಮದವರು ಆಚರಿಸುತ್ತಿರುವುದು ನಿಜಕ್ಕೂ ವಿಷಾದನೀಯ. ಎಲ್ಲರೂ ಕೂಡಿಕೊಂಡು ಎಲ್ಲ ಮಹಾನ್‌, ದಾರ್ಶನಿಕರ, ಸಾಧು, ಸಂತರ ಸ್ವಾತಂತ್ರ್ಯ ಯೋಧರ ದಿನಾಚರಣೆ ಆಚರಿಸಿದರೆ ಮಾತ್ರ ಇಂತಹ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ತಹಸೀಲ್ದಾರ್‌ ಎ.ವಿ.ಶಿಗ್ಗಾಂವಿ ಮಾತನಾಡಿ, ನಾರಾಯಣ ಗುರುಗಳು ಕೇರಳದಲ್ಲಿ ಈಡಿಗ ಸಮಾಜದವರು ತುಳಿತಕ್ಕೆ, ಅನ್ಯಾಯ, ಶೋಷಣೆ, ಅಸ್ಪ್ರಶ್ಯತೆಯನ್ನು ಹೋಗಲಾಡಿಸಲು ಅಹಿಂಸಾತ್ಮಕ ಕೆಲವು ಮಾರ್ಗಗಳನ್ನು ಅನುಸರಿಸಿ ಯಶಸ್ವಿಯಾಗಿದ್ದರಿಂದ ಇಂದು ಆ ಸಮಾಜದವರು ಅಭಿವೃದ್ಧಿಯಾಗಲು ಸಾಧ್ಯವಾಗಿದೆ. ಎಲ್ಲರೂ ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕಾಗಿದೆ ಎಂದರು.
ವಿದ್ಯಾರ್ಥಿ ಸಂದೀಪ್‌ ಈಳಿಗೇರ ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದರು.
ಜಿ.ಪಂ ಸದಸ್ಯ ಶಿವರಾಜ ಹರಿಜನ, ಎನ್‌.ಎಂ.ಈಟೇರ ಮಾತನಾಡಿದರು. ತಾ.ಪಂ ಅಧ್ಯಕ್ಷ ಹೇಮಣ್ಣ ಮುದಿರೆಡ್ಡೆರ, ತಾಲೂಕು ಈಡಿಗ ಸಮಾಜದ ಅಧ್ಯಕ್ಷ ಬಸವಣ್ಣೆಪ್ಪ, ಜಿ.ಪಂ ಸದಸ್ಯ ಪ್ರಕಾಶ ಬನ್ನಿಕೋಡ, ಮಾಲತೇಶ ಈಡಿಗ, ಗ್ರೆಡ್‌-2 ತಹಸೀಲ್ದಾರ್‌ ಸಯ್ಯದ್‌ಅಲಿ, ಎಸಿಡಿಪಿಒ ಗೀತಾ ಬಾಳಿಕಾಯಿ, ಪ.ಪಂ ಮುಖ್ಯಾಧಿಕಾರಿ ರಾಜಾರಾಮ್‌ ಪವಾರ ಹಾಗೂ ಈಡಿಗ ಸಮಾಜದವರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಮುಖ್ಯಶಿಕ್ಷಕ ಎಮ್‌.ಎಮ್‌.ಮತ್ತೂರ, ತಹಸೀಲ್ದಾರ್‌ ಕಚೇರಿಯ ಸಹಾಯಕ ಅಧಿಕಾರಿ ನಾಗರಾಜ ಕಟ್ಟಿಮನಿ ನಿರ್ವಹಿಸಿದರು.

loading...