ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಹೆಮ್ಮೆಯ ವಿಷಯ: ಘೋಟ್ನೇಕರ

0
0
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯ ಸಂಸ್ಥಾಪಕರಾಗಿದ್ದು ಎಲ್ಲರ ಗೌರವದ ಅಭಿಮಾನದ ಮಹಾನ್‌ ವ್ಯಕ್ತಿಯಾಗಿದ್ದಾರೆ. ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಹೆಮ್ಮೆಯ ವಿಷಯವಾದರೂ ಸಹ ಈ ವಿಷಯದಲ್ಲಿ ಕಾನೂನಿನ ಸೂಕ್ಷ್ಮತೆ ಅರಿತು ಪ್ರತಿಯೊಬ್ಬರು ತಮ್ಮ ಕೆಲಸ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಹಳಿಯಾಳ ತಾಲೂಕಾ ಮರಾಠಾ ಪರಿಷತ್‌ ಅಧ್ಯಕ್ಷ ಎಸ್‌.ಎಲ್‌. ಘೋಟ್ನೇಕರ ಅಭಿಪ್ರಾಯಪಟ್ಟರು.
ಮಂಗಳವಾರ ತಮ್ಮ ಕಾರ್ಯಾಲಯದಲ್ಲಿ ಮರಾಠಾ ಪರಿಷತ್‌ ಪ್ರಮುಖರ ಜೊತೆಗೂಡಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಘೋಟ್ನೇಕರ ಮಾತನಾಡಿದರು.
ಹಳಿಯಾಳ ಪಟ್ಟಣದ ಕೋಟೆ ಪ್ರವೇಶದ್ವಾರದ ಬಳಿ ಸೆ.18 ರಂದು ರಾತ್ರಿ ಅಶ್ವಾರೂಢ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಕಾನೂನಿನ ಸೂಕ್ಷ್ಮತೆ ಅರಿತು ಅಮಾಯಕರ ಮೇಲೆ ಕಾಯ್ದೆಯ ಕಿರಿಕಿರಿಯಾಗದಂತೆ ಸಹಾಯ-ಸಹಕಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮರಾಠಾ ಸಮುದಾಯದಲ್ಲಿ ಒಡೆದು ಆಳುವ ನೀತಿ ಮಾಡುತ್ತಿದ್ದು ಈ ಬಗ್ಗೆ ಮುಗ್ಧ ಮರಾಠರು ಜಾಗೃತೆಯಿಂದ ಇರಬೇಕು. ಯಾರದೋ ಪ್ರಚೋದನೆಗೆ ಒಳಗಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ವಿನಂತಿಸುವದಾಗಿ ತಿಳಿಸಿದರು.
ತಾವು ಮರಾಠ ಸಮುದಾಯ ಮಾತ್ರವಲ್ಲದೇ ಎಲ್ಲಾ ಸಮುದಾಯದವರ ಜೊತೆ ಒಳ್ಳೆಯ ಬಾಂಧವ್ಯ ಹಾಗೂ ಪ್ರೀತಿಯಿಂದ ಸಾಗುತ್ತಾ ಬಂದಿದ್ದೇವೆ. ಅದರ ಜೊತೆಗೆ ಮರಾಠ ಸಮುದಾಯವನ್ನು ಪ್ರವರ್ಗ 3ಬಿಯಿಂದ 2ಎಗೆ ಸೇರಿಸುವಂತೆ ಕೋರಿ ಹಲವಾರು ಬಾರಿ ಸರ್ಕಾರ ಗಮನಕ್ಕೆ ತಂದು ಕಾನೂನಾತ್ಮಕವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಮಾಡಲಾಗಿದೆ. ಹಾಗೂ ತಾಲೂಕಿನ ಕೆಲ ಗ್ರಾಮಾಂತರ ಭಾಗದಲ್ಲಿ ಖಾಸಗಿ ಸ್ಥಳಗಳಲ್ಲಿ ಕಾನೂನಿನ ಸಲಹೆ ಪಡೆದು ಯಾವ ತೊಂದರೆಯಾಗದಂತೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಗೌರವಪೂರ್ವಕವಾಗಿ ಸ್ಥಾಪನೆ ಮಾಡಲಾಗಿದೆ. ತಾಲೂಕಿನ ಹಲವಾರು ಕಡೆಗಳಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಲು ಸಹಕಾರ ನೀಡಲಾಗಿದೆ.
ಕೋಟೆ ಮಹಾದ್ವಾರದ ಬಳಿ ಶಿವಾಜಿ ಮೂರ್ತಿಯ ಪ್ರತಿಷ್ಠಾಪಿಸಲಾದ ಹಿನ್ನಲೆಯಲ್ಲಿ ರಾಜಕೀಯ ಮುಖಂಡರೊಬ್ಬರು ಈ ವಿಷಯಕ್ಕೆ ಪ್ರಚೋದನೆ ನೀಡಿ ಅಲ್ಲಿನ ಜನತೆಗೆ ತಪ್ಪು ದಾರಿಗೆ ತಳ್ಳಲು ಪ್ರಯತ್ನಿಸುತ್ತಿರುವುದು ಖೇದಕರವಾದ ಸಂಗತಿಯಾಗಿದೆ. ಆ ಮುಖಂಡರು ಕೇವಲ ಸಮಯಕ್ಕನುಸಾರವಾಗಿ ಜನರ ಲಾಭ ಪಡೆದು ಕೊನೆಯಲ್ಲಿ ಅವರಿಗೆ ಕೈಕೊಡುವ ಜಾಯಮಾನ ಬೆಳೆಸಿಕೊಂಡಿದ್ದಾರೆ. ಇದರಿಂದ ಅಮಾಯಕ ಜನರು ದುಷ್ಪರಿಣಾಮವಾಗಲಿದೆ ಇದು ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣವಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಎಲ್‌.ಎಸ್‌. ಅರಶೀನಗೇರಿ, ಪುರಸಭೆ ಸದಸ್ಯರಾದ ಅನಿಲ ಚವ್ಹಾಣ, ರುದ್ರಪ್ಪಾ ಕೆಸರೇಕರ ಹಾಗೂ ಮರಾಠಾ ಪರಿಷತ್‌ ಪದಾಧಿಕಾರಿಗಳಾದ ಕೃಷ್ಣಾ ಶಹಾಪೂರಕರ, ಅಪ್ಪಾರಾವ ಪೂಜಾರಿ, ಪ್ರಮುಖರಾದ ತಾನಾಜಿ ನಾಕಾಡಿ, ಅಶೋಕ ಘೋಟ್ನೇಕರ ಮೊದಲಾದವರಿದ್ದರು.

loading...