ಸರಕಾರದ ಸೌಲಭ್ಯಗಳು ಜನರಿಗೆ ತಲುಪಲಿ: ಶಾಸಕ ಅಮೃತ

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಜನಸಾಮಾನ್ಯರ ನೆಮ್ಮದಿಯ ಬದುಕಿಗಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇವುಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಶ್ರಮಿಸಬೇಕು. ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹೇಳಿದರು.
ತಾಲೂಕಿನ ಗರಗದಲ್ಲಿ ಗರಗ ಹೋಬಳಿ ಮಟ್ಟದ “ಜನಸಂಪರ್ಕ, ಜನಸ್ಪಂದನ ಹಾಗೂ ಪಿಂಚಣಿ ಅದಾಲತ್” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ತಿಂಗಳು ಒಂದು ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ಆಯೋಜಿಸಿ, ಜನರ ಸಮಸ್ಯೆಗಳನ್ನು ಸ್ಥಾನಿಕವಾಗಿ ಪರಿಹರಿಸುವ ಮತ್ತು ಇಲಾಖೆಗಳಿಂದ ಅನುಷ್ಠಾನಗೊಳ್ಳುವ ಪ್ರಮುಖ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಉಪವಿಭಾಗಾಧಿಕಾರಿಗಳಿಗೆ ಸುತ್ತೋಲೆ ನೀಡಿ ಆದೇಶಿಸಿದ್ದಾರೆ.

ಜನರ ಬಳಿಗೆ ಆಡಳಿತ ತರುವುದು, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ಜನಸಂಪರ್ಕದ ಉದ್ದೇಶವಾಗಿದೆ ಎಂದರು. ಇತ್ತೀಚೆಗೆ ಅತಿವೃಷ್ಠಿಯಿಂದ ಮನೆ ಹಾನಿಗೆ ಒಳಗಾದ ಶಿಂಗನಹಳ್ಳಿಯ ಶಾರದಾ ಬಾರಿಗಿಡದ, ಚನ್ನವ್ವ ತಿಗಡಿ, ಉಮೇಶ ಉಪ್ಪಾರ ಅವರಿಗೆ ಶಾಸಕರು ಪರಿಹಾರ ಚೆಕ್ ವಿತರಿಸಿದರು. ಉಪವಿಭಾಗಾಧಿಕಾರಿ ಮಹಮ್ಮದ್ ಝುಬೇರ್ ಅವರು ಜನರ ಅಹವಾಲುಗಳನ್ನು ಸ್ವೀಕರಿಸಿ, ಪರಿಹಾರ ಸೂಚಿಸಿದರು. ಗರಗ ಗ್ರಾಮ ಪಂಚಾಯತ್ ಅಧ್ಯಕ್ಷ ಯಲ್ಲಪ್ಪ ಬೋರಿಮನಿ, ಪ್ರೊಬೇಷನರಿ ಎಸಿ ಗಳಾದ ಜಿ.ಡಿ. ಶೇಖರ, ಪಾರ್ವತಿ ರೆಡ್ಡಿ, ತಾಲೂಕ ಪಂಚಾಯತ್ ಇಓ ಎಸ್.ಎಸ್. ಕಾದ್ರೊಳ್ಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತವನಪ್ಪ ಅಷ್ಟಗಿ ವೇದಿಕೆಯಲ್ಲಿದ್ದರು. ಕಂದಾಯ ನಿರೀಕ್ಷಕ ಅಜಯ ಆಯಿ, ಗ್ರಾಮಲೆಕ್ಕಾಧಿಕಾರಿಗಳಾದ ಈರಣ್ಣ ಪಾರ್ಶಿ, ಮಹೇಶ ನಾಗವ್ವನವರ ಅವರು ಸಾರ್ವಜನಿಕ ಅಹವಾಲುಗಳನ್ನು ನೋಂದಾಯಿಸಿದರು. ತಹಶೀಲ್ದಾರ ಪ್ರಕಾಶ ಕುದರಿ ಸ್ವಾಗತಿಸಿದರು. ಗಂಗಾಧರ ಮೇದಾರ ನಿರೂಪಿಸಿದರು. ಉಪತಹಶೀಲ್ದಾರ ಪ್ರದೀಪ ಪಾಟೀಲ ವಂದಿಸಿದರು.

loading...