ಸರ್ವಜ್ಞನ ತ್ರಿಪದಿಗಳು ಜ್ಞಾನದ ಗಣಿಗಳು: ಅಶೋಕ

0
0
loading...

ಕನ್ನಡಮ್ಮ ಸುದ್ದಿ-ಗದಗ: ಕನ್ನಡದ ತ್ರಿಪದಿ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದ ಕವಿ ಸರ್ವಜ್ಞ. ತನ್ನ ಜೀವನಾನುಭವಗಳಿಗೆ ಹಾಗೂ ಸಮಾಜವನ್ನು ಗಮನಿಸಿದ ರೀತಿಗಳಿಗೆ ಅಕ್ಷರದ ರೂಪವನ್ನು ತೊಡಿಸಿ, ಸರಳ ಹಾಗೂ ಸುಲಲಿತ ಕನ್ನಡದಲ್ಲಿ ಕಾವ್ಯ ಕಟ್ಟಿದ ಪರಿ ಅದ್ಭುತವಾದುದು. ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಪ್ರತಿಪಾದಿಸದೇ ಇರುವ ಅಂಶಗಳೇ ಇಲ್ಲ. ಆಹಾರ ಮತ್ತು ಆರೋಗ್ಯ ಸಂಬಂಧಿ ವಿಷಯಗಳನ್ನು ಅರ್ಥಪೂರ್ಣ ಕಟ್ಟಿಕೊಟ್ಟಿದ್ದಾನೆ ಎಂದು ಡಾ. ಅಶೋಕ ಮತ್ತಿಗಟ್ಟಿ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ವಾರದ ಸಾಹಿತ್ಯ ಚಿಂತನ ಮಾಲಿಕೆಯಲ್ಲಿ ಸರ್ವಜ್ಞನ ವಚನಗಳಲ್ಲಿ ವೈದ್ಯಕೀಯ ವಿಷಯವಾಗಿ ಮಾತನಾಡಿದರು. ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಳವಡಿಸಿಕೊಂಡರೆ ಸ್ವಸ್ಥ ಬದುಕನ್ನು ಬದುಕಲು ಸಹಾಯಕವಾಗುತ್ತದೆ. ಜೀವನ ಸಂಬಂಧಿ ಎಲ್ಲ ವಿಚಾರಗಳ ಕುರಿತು ಹೇಳಿದ ಸರ್ವಜ್ಞನ ತ್ರಿಪದಿಗಳು ಜ್ಞಾನದ ಗಣಿಗಳು ಎಂದು ತಿಳಿಸಿದರು. ಮನುಷ್ಯನ ಇಡಿ ದಿನದ ಚಟುವಟಿಕೆಗಳು, ಊಟದ ನಿಯಮ, ಬಿಸಿನೀರಿನ ಮಹತ್ವ, ಆಹಾರ ಸೇವನೆಯ ಕ್ರಮಗಳು, ಆಹಾರದ ಅಂಶಗಳು, ಸಿರಿಧಾನ್ಯಗಳ ಮಹತ್ವ, ಹಾಲಿನ ಉತ್ಪನ್ನಗಳ ಬಳಕೆ, ವನಸ್ಪತಿ ಔಷಧಿಗಳು, ಯೋಗ, ವ್ಯಾಯಾಮ, ಆಸನಗಳ ಮಹತ್ವ ಮತ್ತು ಅವಯವಗಳ ರಕ್ಷಣೆ ಕುರಿತಾಗಿ ಸುಂದರವಾಗಿ ವಿವರಿಸಿದ್ದಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣು ಗೋಗೇರಿ ಮಾತನಾಡಿ, ಆಹಾರ ಪದ್ಧತಿಯ ತಿಳುವಳಿಕೆಯ ಕೊರತೆಯಿಂದ ಇಂದು ಮನುಷ್ಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ. ಸರ್ವಜ್ಞ ತಿಳಿಸಿದ ಶರೀರ ಶಾಸ್ತ್ರ ಮತ್ತು ಆಹಾರ ಕ್ರಮಗಳನ್ನು ಪಾಲಿಸಿದರೆ ಮನುಷ್ಯ ನಿರೋಗಿಯಾಗಿರಲು ಸಾಧ್ಯವಾಗುತ್ತದೆ. ಊರೂರು ಅಲೆದು ಜ್ಞಾನ ಸಂಗ್ರಹಿಸಿ, ಸರಳ ಕನ್ನಡದಲ್ಲಿ ರಚಿಸಿದ ತ್ರಿಪದಿಗಳು ಸಾಮಾಜಿಕ, ನೈತಿಕ, ಧಾರ್ಮಿಕ ವಿಷಯಗಳಲ್ಲದೇ ಅನೇಕ ಪ್ರಚಲಿತ ವಿಷಯಗಳನ್ನು ತಿಳಿಸುತ್ತವೆ ಎಂದರು. ಅಂಜನಾ ಕುಬೇರ ಕವನ ವಾಚಿಸಿದರು. ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಪ್ರಕಾಶ ಮಂಗಳೂರ ನಿರೂಪಿಸಿದರು. ಅಶೋಕ ಹಾದಿ ವಂದಿಸಿದರು.

loading...