ಸಾಮಾಜಿಕ ಕ್ರಾಂತಿಗೆ ಅಕ್ಷರವೇ ಕಾರಣ: ಲಿಂಬಯ್ಯಸ್ವಾಮಿ

0
0
loading...

ಕನ್ನಡಮ್ಮ ಸುದ್ದಿ-ಗದಗ: ಅಕ್ಷರ ಕೆಲವೇ ಜನರ ಸ್ವತ್ತಾಗಿದ್ದ ಕಾಲದಲ್ಲಿ, ಗಂಡನಿಂದ ಅಕ್ಷರ ಕಲಿತು, ಶಾಲೆಯೊಂದನ್ನು ಸ್ಥಾಪಿಸಿ, ಶೂದ್ರರನ್ನು, ಮಹಿಳೆಯರನ್ನು ಅಕ್ಷರಲೋಕಕ್ಕೆ ಕರೆತಂದು ಹೊಸ ಮನ್ವಂತರಕ್ಕೆ ಕಾರಣರಾದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು ಎಂದು ಲಿಂಬಯ್ಯಸ್ವಾಮಿ ಲಿಂಬಯ್ಯಸ್ವಾಮಿಮಠ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಚಲನಚಿತ್ರದ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಸುಧಾರಣಾ ಚಳುವಳಿಯಲ್ಲಿ ಫುಲೆ ದಂಪತಿಗಳ ಕೊಡುಗೆ ಅಪಾರವಾದುದು. ಮೇಲ್ವರ್ಗದವರ ವಿರೋಧವನ್ನು ಲೆಕ್ಕಿಸದೇ ಕಷ್ಟಕಾರ್ಪಣ್ಯಗಳನ್ನು ಸಹಿಸಿಕೊಂಡು ಸತಿಸಹಗಮನ, ಬಾಲ್ಯವಿವಾಹ, ಕೇಶಮುಂಡನೆ ವಿರುದ್ಧ ಪ್ರತಿಭಟಿಸಿ, ಜನಜಾಗೃತಿಯನ್ನು ಮೂಡಿಸಿದರು. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾರೆಂದರೆ ಅದರ ಮೂಲ ಪ್ರೇರಣೆ ಸಾವಿತ್ರಿಬಾಯಿ ಫುಲೆ ಅವರು ಎಂಬುದನ್ನು ಮರೆಯಬಾರದು . ತೋಂಟದ ಶ್ರೀಗಳ ಆಶಯದಂತೆ ಶಿಕ್ಷಕರ ದಿನಾಚರಣೆಯನ್ನು ಸಾವಿತ್ರಿಬಾಯಿ ಫುಲೆ ಅವರು ಜನ್ಮ ದಿನಾಚರಣೆಯನ್ನಾಗಿ ಆಚರಿಸುವದು ಸೂಕ್ತ ಎಂದು ತಿಳಿಸಿದರು.
ಪ್ರೊ ಚಂದ್ರಶೇಖರ ವಸ್ತ್ರದ ಅವರು ಮಾತನಾಡಿ, ಸತ್ಯವಾನ ಸಾವಿತ್ರಿ ಸತ್ತ ಗಂಡನನ್ನು ಬದುಕಿಸಿಕೊಂಡು ಬಂದಳೆಂಬ ಪೌರಾಣಿಕ ಕಥೆ ಕೇಳಿದ್ದೇವೆ. ಆದರೆ, ಅದು ಸತ್ಯವೋ ಗೊತ್ತಿಲ್ಲ ಆದರೆ ಸಾವಿತ್ರಿಬಾಯಿ ಫುಲೆ ದೀನದಲಿತರಿಗೆ ಅಕ್ಷರ ನೀಡುವ ಮೂಲಕ ಅವರ ಬದುಕನ್ನು ಬದುಕಿಸಿದ್ದು ನಿಜವಾದ ಸಂಗತಿ. ಮಹಾನ್ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದಳು ಎಂದು ತಿಳಿಸಿದರು. ಶ್ರಾವಣ ಮಾಸದ ಅಂಗವಾಗಿ ವಚನ ದರ್ಶನ ಪ್ರವಚನವನ್ನು ಪೂಜ್ಯ ಸಂಗಮೇಶ್ವರದೇವರು ಅನುಭವ ಮಂಟಪ, ಬಸವಕಲ್ಯಾಣ ಇವರು ನೆರವೇರಿಸಿದರು. ಡಾ. ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತ ಬಸವರಾಜ ಭೂತಾಳಿ ಅವರು ನಿರ್ಮಿಸಿದ, ವಿಶಾಲ್ ರಾಜ ನಿರ್ದೇಶಿಸಿದ ಸಾವಿತ್ರಿಬಾಯಿ ಫುಲೆ ಚಲನಚಿತ್ರ ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು.
ವಿಜಯಪುರದ ಶಾಂತವೀರದೇವರು ವೇದಿಕೆ ಮೇಲೆ ಇದ್ದರು. ಧರ್ಮಗ್ರಂಥ ಪಠಣವನ್ನು ನಿಖಿತಾ ಬಸನಗೌಡ ಪಾಟೀಲ, ವಚನ ಚಿಂತನಯನ್ನು ಭಾಸ್ಕರ ರಂಗದಾಳ ನೆರವೇರಿಸಿದರು. ಮೃತ್ಯುಂಜಯ ಹಿರೇಮಠ, ನಾರಾಯಣ ಹಿರೇಕೊಳಚಿ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ ಜರುಗಿತು. ಮಂಜುಳಾ ಹಾಸಲಕರ ನಿರೂಪಿಸಿದರು. ಅಧ್ಯಕ್ಷರಾದ ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.

loading...