ಸಾರಾಯಿ ನಿಷೇಧ: ರಾಜ್ಯ ಸರ್ಕಾರಿ ಬೊಕ್ಕಸಕ್ಕೆ ಭಾರೀ ನಷ್ಟ

0
0
loading...

ಬೆಂಗಳೂರು:2007ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರವೊಂದು ರಾಜ್ಯಸರ್ಕಾರದ ಬೊಕ್ಕಸಕ್ಕೆ ಗಣನೀಯ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಇತ್ತ ಖಾಸಗಿ ಕಂಪನಿಗಳು ಅದರ ಲಾಭವನ್ನು ಅನುಭವಿಸುತ್ತಿವೆ.
ಕುಮಾರಸ್ವಾಮಿ ಸರ್ಕಾರ 11ವರ್ಷಗಳ ಹಿಂದೆ ರಾಜ್ಯದಲ್ಲಿ ಸರ್ಕಾರಿ ಸಾರಾಯಿ ಮಾರಾಟವನ್ನು ನಿಷೇಧಿಸಿತ್ತು.ಬಡವರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿತ್ತು.ನಂತರ ಬಂದ ಸರ್ಕಾರಗಳೂ ನಿಷೇಧವನ್ನು ರದ್ದುಗೊಳಿಸುವ ಗೋಜಿಗೆ ಹೋಗಿಲ್ಲ.ಆದರೆ ರಾಜ್ಯದಲ್ಲಿ ಮದ್ಯಪಾನಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ.ಇತ್ತ ಖಾಸಗಿ ಮದ್ಯದಂಗಡಿಗಳು,ಬಾರ್‍ಗಳು ಅತಿ ದೊಡ್ಡ ಲಾಭ ತಂದುಕೊಂಡಿವೆ.
ಇದೀಗ ಮತ್ತೆ ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದಿದೆ.ಇಂದು ಮತ್ತೆ ಅಧಿಕಾರದಲ್ಲಿರುವ ಹೆಚ್‍ಡಿಕೆ ರೈತರ ಸಾಲಮನ್ನಾ ಘೋಷಿಸಿದ್ದಾರೆ.ಆದರೆ ಇದರಿಂದ ಆರ್ಥಿಕ ಕೊರತೆ ಎದುರಾಗಿದೆ. ರಾಜ್ಯದ ಸರ್ಕಾರಿ ಬೊಕ್ಕಸಕ್ಕೆ ಆದಾಯ ಮೂಲದ ಕೊರತೆ ಎಲ್ಲಾಗುತ್ತಿದೆ ಎಂದು ಗಮನಿಸಿದಾಗ, ಸರ್ಕಾರಿ ಸಾರಾಯಿ ಮಾರಾಟ ಇಲ್ಲದಿರುವುದರಿಂದ ಆಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹತ್ತು ವರ್ಷದಲ್ಲಿ ಮದ್ಯ ಮಾರಾಟ ಪ್ರಮಾಣ ರಾಜ್ಯದಲ್ಲಿ 400 ಪಟ್ಟು ಹೆಚ್ಚಳವಾಗಿದೆ.ಹೀಗಾಗಿ ಸಾರಾಯಿ ಮಾರಾ ಟದ ಲಾಭ ಖಾಸಗಿಯವರಿಗೆ ಸಲ್ಲುತ್ತಿದೆ. ಇದರ ಜತೆ ಖಾಸಗಿ ಮದ್ಯದ ಕಂಪನಿಗಳಿಗೆ ಕರ್ನಾಟಕ ನೆಚ್ಚಿನ ತಾಣ ಅನ್ನಿಸಿದೆ.
ಅಬಕಾರಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ 2007-08ರಲ್ಲಿ 4,800 ಕೋಟಿ ರೂ. ಇದ್ದ ಮದ್ಯ/ಸಾರಾಯಿ ಮಾರಾಟದ ಆದಾಯ 2018-19ನೇ ಸಾಲಿಗೆ 19,750 ಕೋಟಿ ರೂ.ಗೆ ತಲುಪಿದೆ.ಅಂದರೆ ಆದಾಯದಲ್ಲಿ 400 ಪಟ್ಟು ಹೆಚ್ಚಳವಾಗಿದ್ದು, ಕುಡಿತದ ವಿರುದ್ಧ ಸರ್ಕಾರ, ಖಾಸಗಿ ಎನ್‍ಜಿಒಗಳು ಎಷ್ಟೇ ಜಾಗೃತಿ ಮೂಡಿಸಿದರೂ, ಅದು ಫಲ ಕೊಡುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಹೊಸಬರು ಕುಡಿತದ ಚಟಕ್ಕೆ ಬಲಿಯಾಗುತ್ತಲೇ ಇದ್ದಾರೆ.
2007ರ ಜು.1ರಂದು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸಾರಾಯಿ ಉತ್ಪಾದನೆ ಹಾಗೂ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿತ್ತು.ಅಲ್ಲಿಯವರೆಗೆ ಸರ್ಕಾರಕ್ಕೆ ಸಾರಾಯಿಯಿಂದ 552ಕೋಟಿ ರೂ.,ದೇಶೀಯ ಮದ್ಯ ಉತ್ಪಾದನೆ ಕಂಪನಿಗಳ ಮದ್ಯ ಮಾರಾಟದಿಂದ 4,300 ಕೋಟಿ ರೂ. ಸೇರಿದಂತೆ ಒಟ್ಟು 4,800 ಕೋಟಿ ರೂ. ಆದಾಯ ಬರುತ್ತಿತ್ತು. ಆಗ 10 ರೂ.ಗೆ 1 ಪ್ಯಾಕೆಟ್ ಸಾರಾಯಿ ಸೇವಿಸುತ್ತಿದ್ದ ಬಡವರು, ನಿಷೇಧದ ಬಳಿಕ ಸರಾಸರಿ 40 ರೂ.ಗೆ ದೇಶೀಯ ಮದ್ಯ ಕುಡಿಯಲು ಆರಂಭಿ ಸಿದರು.ಹೀಗಾಗಿ ಖಾಸಗಿ ಮದ್ಯ ಕಂಪನಿಗಳು ಲಾಭದ ಮೇಲೆ ಲಾಭ ಮಾಡಿಕೊಂಡಿವೆ.ಸರ್ಕಾರದ ಅಂದಿನ ನಿರ್ಧಾರ ಬಡವರ ದೃಷ್ಟಿಯಿಂದ ಉತ್ತಮವೇ ಆಗಿದ್ದರೂ,ಬದಲಾವಣೆ ಅಂದುಕೊಂಡಂತೆ ಆಗದೇ ಖಾಸಗಿಯವರಿಗೆ ಲಾಭವಾಗಿ ಲಭಿಸಿದ್ದು ವಿಪರ್ಯಾಸವಾಗಿದೆ.
ಅಂದ ಹಾಗೆ ಸರ್ಕಾರ ಮುಂಬಾಗಿಲಿನಲ್ಲಿ ಸಾರಾಯಿ ನಿಷೇಧಿಸಿ,ಹಿಂಬಾಗಿಲಿನಲ್ಲಿ ಎಂಎಸ್‍ಐಎಲ್ ಮೂಲಕ ಮತ್ತೆ ಮಾರಾಟ ಆರಂಭಿಸಿತು.2009ರ ಸೆಪ್ಟೆಂಬರ್‍ನಿಂದ ಖಾಸಗಿ ಕಂಪನಿಗಳು ತಯಾರಿಸಿದ ಮದ್ಯವನ್ನು ಸರ್ಕಾರಿ ಒಡೆತನದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಮುಖಾಂತರ ಸರ್ಕಾರ ಮಾರಲಾರಂಭಿಸಿದೆ.
ಸದ್ಯ ರಾಜ್ಯದಲ್ಲಿ 355 ಮದ್ಯದ ಮಳಿಗೆಗಳು ಇವೆ. ಇನ್ನು ಸರ್ಕಾರವೇ ಲೈಸೆನ್ಸ್ ನೀಡಿರುವ 10,136 ಬಾರ್-ವೈನ್‍ಶಾಪ್‍ಗಳಿದ್ದು, ಇವುಗಳ ಮೂಲಕ 20 ಸಾವಿರ ಕೋಟಿ ರೂ. ಆದಾಯ ತೆರಿಗೆ ರೂಪದಲ್ಲಿ ಸರ್ಕಾರ ಸಂಗ್ರಹಿಸುತ್ತಿದೆ.
ರಾಜ್ಯದಲ್ಲಿ ಸಾರಾಯಿ ಮಾರಾಟ ಮುಕ್ತವಾಗಿದ್ದಾಗ ಸರ್ಕಾರದಿಂದ ಅನುಮತಿ ಪಡೆದ ಡಿಸ್ಟಿಲರಿಗಳ ಸಂಖ್ಯೆ ಕೇವಲ 22. ಆದರೆ ಈ ಸಲದ ಅಬಕಾರಿ ವರ್ಷದ ಅಂತ್ಯಕ್ಕೆ ಕರ್ನಾಟಕದಲ್ಲಿರುವ ಡಿಸ್ಟಿಲರಿಗಳ ಸಂಖ್ಯೆ ಬರೋಬ್ಬರಿ 112 ಆಗಿದೆ. 1997-98ರಲ್ಲಿ ಸಾರಾಯಿ ಆದಾಯ 605 ಕೋಟಿ ರೂ. ಆಗಿತ್ತು. ಮದ್ಯದ ಆದಾಯ 250 ಕೋಟಿ ರೂ. ಆಗಿತ್ತು. ಅದೇ 2007-08ರಲ್ಲಿ 552 ಕೋಟಿ ರೂ. ಸಾರಾಯಿ ಆದಾಯ ಹಾಗೂ 4300 ಕೋಟಿ ರೂ. ಮದ್ಯದ ಆದಾಯವಾಯಿತು.
2017-18ರಲ್ಲಿ ಸಾರಾಯಿ ಇಲ್ಲ, ಮದ್ಯದ ಆದಾಯ 17,948 ಕೋಟಿ ರೂ. ಆಗಿದೆ. ಮಾರಾಟದ ಪ್ರಮಾಣ ಗಮನಿಸಿದರೆ 2007-08ರಲ್ಲಿ ಮದ್ಯ 324.48 ಲಕ್ಷ ಘನ ಪೆಟ್ಟಿಗೆ ಇತ್ತು. ಬೀಯರ್ ಮಾರಾಟ 143.34 ಲಕ್ಷ ಘನ ಪೆಟ್ಟಿಗೆ ಇತ್ತು. ಅದು 2017-18ರಲ್ಲಿ ಮದ್ಯ 564.86 ಲಕ್ಷ ಘನ ಪೆಟ್ಟಿಗೆ ಆದರೆ, ಬೀಯರ್ 265.77 ಲಕ್ಷ ಘನ ಪೆಟ್ಟಿಗೆ ಹೆಚ್ಚಳವಾಗಿದೆ.

loading...