7 ಕೋಟಿ ರೂ.ವೆಚ್ಚದ ಕ್ರೀಯಾ ಯೋಜನೆ ತಯಾರಿಸಲು ನಿರ್ಧಾರ

0
0
loading...

 

ಕನ್ನಡಮ್ಮ ಸುದ್ದಿ-ಅಳ್ನಾವರ: ಹೊಸ ತಾಲೂಕು ಕೇಂದ್ರ ಎಂದು ಕಾರ್ಯಾರಂಭ ಮಾಡಿದ ಪಟ್ಟಣದ ಮೆರಗನ್ನು ಹೆಚ್ಚಿಸಲು ಸುಸಜ್ಜಿತ ವಾಣಿಜ್ಯ ಸಂಕೀರ್ಣ, ಸಾಂಸ್ಕøತಿಕ ಭವನ ಹಾಗೂ ಒಳಾಂಗಣ ಸ್ಟೇಡಿಯಂ ನಿರ್ಮಿಸಲು ರೂ. 7 ಕೋಟಿ ವೆಚ್ಚದ ಕ್ರೀಯಾ ಯೋಜನೆ ತಯಾರಿಸಲು ಗುರುವಾರ ಸೇರಿದ್ದ ಪಟ್ಟಣ ಪಂಚಾಯತಿ ಸಭೆ ನಿರ್ಣಯಿಸಿತು.
ಈ ಕುರಿತು ಪ.ಪಂ. ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಸಭೆಗೆ ಮಾಹಿತಿ ನೀಡಿ , ಕ್ರೀಯಾ ಯೋಜನೆ ತಯಾರಿಸಲು ಬೆಂಗಳೂರಿನ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗುವದು. ಈ ಸಂಕೀರ್ಣದಲ್ಲಿ ತರಕಾರಿ ಮಾರುಕಟ್ಟೆ, ಎರಡು ಬ್ಯಾಂಕುಗಳ ಕಾರ್ಯ ನಿರ್ವಹಿಸುವ ಕೊಠಡಿಗಳು ಹಾಗೂ 55 ಅಂಗಡಿಗಳು ನಿರ್ಮಾಣವಾಗಲಿವೆ ಜೊತೆಗೆ 500 ಜನರು ಕೂಡುವ ಉತ್ತಮ ಮಾದರಿಯ ಸಭಾಗೃಹ ಮತ್ತು ಒಳಾಂಗಣ ಕ್ರೀಡಾಂಗಣ, ಹೊಸ ವಿನ್ಯಾಸದ ಮಲ್ಟಿ ಜೀಮ್ ಕಾರ್ಯ ನಿರ್ವಹಿಸಲಿವೆ ಎಂದರು.

ಇದಕ್ಕಾಗಿ ಪಟ್ಟಣ ಪಂಚಾಯ್ತಿ ಹಳೆಯ ಕಾರ್ಯಾಲಯ ಪ್ರದೇಶ ಹಾಗೂ ವಾಣಿಜ್ಯ ಮಳಿಗೆ ಪ್ರದೇಶ ಸೇರಿ ಸುಮಾರು ಒಂದು ಎಕೆರೆ ಜಾಗೆಯನ್ನು ಮೀಸಲಿಡಲು ಸಭೆ ಸರ್ವ ಸಮ್ಮತದ ಒಪ್ಪಿಗೆ ನೀಡಿತು. ಮುಖ್ಯ ರಸ್ತೆಯಿಂದ ತುಸು ಅಂತರದಲ್ಲಿ ಈ ಸಮುಚ್ಚಯ ನಿರ್ಮಿಸಬೇಕು ಎಂದು ಸಭೆ ಸೂಚಿಸಿತು.
ಅನಧಿಕೃತ ಕಟ್ಟಡ ಎಂದು ಗುರುತಿಸಿದ 760 ಆಸ್ತಿಗಳ ಮಾಲಿಕರಿಗೆ ತಿಳುವಳಿಕೆ ನೀಡಿ ಹಂತ ಹಂತವಾಗಿ ಕರ ಆಕರಣೆ ಮಾಡಲು ಸಭೆ ಸೂಚಿಸಿತು. ಸ್ವಚ್ಚ ಭಾರತ ಅಭಿಯಾನದಡಿ ಪಟ್ಟಣದ 1589 ಕುಟುಂಬಗಳ ಪ್ರತಿ ಮನೆಗೆ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸಲು ತಲಾ ಎರಡು ಡಬ್ಬಾ ನೀಡಲಾಗುವದು. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲಾಗುವದು ಎಂದು ಗದ್ದಿಗೌಡರ ತಿಳಿಸಿದರು.

ಸಮಾಜದ ಕೆಳ ವರ್ಗದ ಜನರಿಗೆ ಈ ಕುರಿತು ಜಾಗೃತಿ ಮೂಡಿಸಿ, ಕಸವನ್ನು ಬೇಕಾಬಿಟ್ಟಿ ಚೆಲ್ಲುವದನ್ನು ತಡೆಯಲು ಪ್ರಾಯೋಗಿಕವಾಗಿ ಆಯ್ದ ಬಡಾವಣೆಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಿ ಪ್ರಗತಿ ನೋಡಿ, ಇನ್ನೂಳಿದ ಬಡಾವಣೆಗಳಿಗೂ ಯೋಜನೆ ವಿಸ್ತರಿಸಲಾಗುವದು. ಎಂ.ಸಿ. ಪ್ಲಾಟ ಬಡಾವಣೆಗೆ ಮೂಲಭೂತ ಸೌಲಭ್ಯ ಒದಗಿಸಿ ಎಂದು ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ. ಬಡಾವಣೆಗೆ ಬೇಟಿ ನೀಡಿ ವೀಕ್ಷಣೆ ಮಾಡಲಾಗಿದೆ. ರಸ್ತೆ ಹಾಗೂ ಚರಂಡಿ ನಿರ್ಮಾಣ ಕೈಗೊಳ್ಳಲು ಕ್ರೀಯಾ ಯೋಜನೆ ತಯಾರಿಸಿ ಸರ್ಕಾರದಿಂದ ವಿಶೇಷ ಅನುದಾನ ತರಲು ಪ್ರಯತ್ನ ಮಾಡಲಾಗುವದು ಎಂದು ಅಧ್ಯಕ್ಷೆ ಬಾಗ್ಯವತಿ ಕುರುಬರ ತಿಳಿಸಿದರು.
ಈಚೆಗೆ ಸುರಿದ ಮಳೆಯಿಂದ ಹಾಳಾದ ರಸ್ತೆಗಳ ದುರಸ್ತಿ, ಗಣೇಶ ಹಬ್ಬಕ್ಕೆ ಸೌಕರ್ಯ ಒದಗಿಸುವದು, ಮುಖ್ಯ ರಸ್ತೆಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಕೆ, ಅಂಗನವಾಡಿಗೆ ಕಟ್ಟಡ ನೀಡುವದು, ಆಶ್ರಯ ಯೋಜನೆಯ ಅಭಿವೃದ್ದಿ, ಸ್ಥಾಯಿ ಸಮಿತಿ ರಚನೆ ಮತ್ತಿತರ ವಿಷಯಗಳ ಕುರಿತು ಸಭೆ ಚರ್ಚಿಸಿತು.

ಅಧ್ಯಕ್ಷೆ ಬಾಗ್ಯವತಿ ಕುರುಬರ, ಉಪಾಧ್ಯಕ್ಷ ಕಿರಣ ಗಡಕರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಬೈಕೇರಿಕರ, ಸದಸ್ಯರಾದ ಛಗನಲಾಲ ಪಟೇಲ, ಪರಶುರಾಮ ಬೇಕನೇಕರ, ಜೈಲಾನಿ ಸುದರ್ಜಿ, ಪರಮೇಶ್ವರ ತೇಗೂರ, ಮಂಜುಳಾ ಮೇದಾರ, ನಾಗರತ್ನಾ ವಾಗಮೋಡೆ, ಉಸ್ಮಾನ ಬಾತಖಂಡಿ, ಸುನಂದಾ ಕಲ್ಲು, ಶಫೀಕ ತೊಲಗಿ, ವಿನಾಯಕ ಕುರುಬರ ಚರ್ಚೆಯಲ್ಲಿ ಭಾಗವಹಿಸಿದ್ದರು.
ನಾಡಗೀತೆಯೊಂದಿಗೆ ಸಭೆ ಆರಂಭವಾಯಿತು. ಅಟಲ ಬಿಹಾರಿ ವಾಜಪೇಯಿ ನಿಧನಕ್ಕೆ ಹಾಗೂ ಕೇರಳಾ ರಾಜ್ಯ ಮತ್ತು ಕೊಡುಗು ಜಿಲ್ಲೆ ನೆರೆ ಸಂತ್ರಸ್ಥರಿಗೆ ಹಾಗೂ ಪಟ್ಟಣದಲ್ಲಿ ಈಚೆಗೆ ಗೋಡೆ ಕುಸಿದು ಮೃತಪಟ್ಟ ಸುರೋಜಿ ಸಹೋದರಿಯ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಸಮುದಾಯ ಅಭಿವೃದ್ದಿ ಅಧಿಕಾರಿ ನಾಗರಾಜ ಗುರ್ಲಹುಸೂರ ಸ್ವಾಗತಿಸಿ, ಸಭೆಯ ಅಜೆಂಡಾಗಳನ್ನು ಓದಿದರು. ಎಸ್.ಆರ್. ಹಿರೇಹಾಳ ವಂದಿಸಿದರು.

loading...