ಕಾಂಗ್ರೆಸ್ ಪಕ್ಷದ ವಿಶ್ವಾಸ ತೆಗೆದುಕೊಂಡು ಸರ್ಕಾರ ನಡೆಸಬೇಕಾಗಿದೆ – ಹೆಚ್.ಡಿ.ಕೆ

0
1
loading...

ಬೆಂಗಳೂರು : ಮೈತ್ರಿ ಸರ್ಕಾರದ ಮೇಲೆ ಸಾಕಷ್ಟು ಸವಾಲುಗಳಿವೆ. ಅಧಿಕಾರಕ್ಕೆ ಬಂದ ತಕ್ಷಣ ಜನರಿಗೆ ಕೊಟ್ಟ ವಿಶ್ವಾಸದ ಮಾತುಗಳಿಂದ ದೂರ ಸರಿಯಬಾರದೆಂದು ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟ ಇಂದು ಹಮ್ಮಿಕೊಂಡಿದ್ದ ಮೈತ್ರಿ ಸರ್ಕಾರದ ಸಾಧನೆಗಳು ಮತ್ತು ಸವಾಲುಗಳ ಕುರಿತ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಘೋಷಣೆ ಮಾಡಿದ ಸಾಲ ಮನ್ನಾ ಮೊತ್ತವನ್ನು ಪೂರ್ತಿ ಭರಿಸಲಾಗಿದೆ. ಈಗ ಮಾಡಿರುವ 9,458 ಕೋಟಿ ಸಾಲ ಮನ್ನಾ ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮಾರ್ಚ್‍ವರೆಗೆ ಸಾಲ ಮನ್ನಾ ಯೋಜನೆ ಅವಧಿ ಇದೆ. 44 ಲಕ್ಷ ಕುಟುಂಬಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ ರಾಜಕೀಯವಾಗಿ ಕಳೆದ 5 ತಿಂಗಳಿಂದ ಹಲವು ಘಟನೆಗಳು ಯಾರೂ ನಿರೀಕ್ಷಿಸದ ರೀತಿಯಲ್ಲಿ ನಡೆದಿವೆ. ಕಾಂಗ್ರೆಸ್ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ನಡೆಸುವ ಜವಬ್ದಾರಿಯನ್ನು ನನಗೆ ನೀಡಿದ್ದಾರೆ. ಮೈತ್ರಿ ಸರ್ಕಾರ ರಚನೆಯಾಗಿ ಇಂದಿಗೆ ಐದು ತಿಂಗಳು ಪೂರ್ಣವಾಗಿವೆ. ನನ್ನಿಂದ ಆದ ವೈಫಲ್ಯಗಳಿಗೆ ಇಂದು ನಿಮ್ಮಿಂದ ಸಲಹೆಗಳನ್ನು ನಾನು ಬಯಸಿದ್ದೇನೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ ಫಲಾನುಭವಿಗಳು 1.4 ಕೋಟಿ ಇದ್ದರು. ಈಗ 1.29 ಕೋಟಿ ಫಲಾನುಭವಿಗಳಾಗಿದ್ದಾರೆ. 7 ಕೆಜಿ ಅಕ್ಕಿ ನೀಡಲು ಹೆಚ್ಚುವರಿ 1,900 ಕೋಟಿ ರೂ. ನೀಡಬೇಕಾಗಿದೆ. ಹಿಂದಿನ ಸರ್ಕಾರದ ಘೋಷಣೆಯಿಂದ ಅಭಿವೃದ್ಧಿಗೆ ಹಣ ನೀಡಲ್ಲ ಎನ್ನಲು ಸಾಧ್ಯವಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಮತ್ತೆ ಹಣ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್‍ನ ಎಲ್ಲ ಹಿರಿಯ ನಾಯಕರ ಸಹಕಾರದಿಂದ ಸರ್ಕಾರ ನಡೆಸುವ ಅವಕಾಶ ಸಿಕ್ಕಿದೆ. ನನ್ನಿಂದ ಹಲವಾರು ನಿರೀಕ್ಷೆ ಬಯಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಮತ್ತು ಮೈತ್ರಿ ಸರ್ಕಾರ ರಚನೆಯಾದ ಬಳಿಕ ಮಂಡಿಸಿದ ಬಜೆಟ್‍ನಲ್ಲಿ ಸುಮಾರು 460 ಯೋಜನೆಗಳನ್ನು ರೂಪಿಸಲಾಗಿದೆ. ನಮ್ಮ ಮೈತ್ರಿ ಸರ್ಕಾರದ ಮೇಲೆ ಬಹುದೊಡ್ಡ ಸವಾಲಿದೆ ಎಂದರು.
15 ಬ್ಯಾಂಕುಗಳಿಂದ 10 ಲಕ್ಷ ರೈತರ ಬೆಳೆ ಸಾಲ ಮಾಹಿತಿ ಲಭ್ಯವಾಗಿದೆ. ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈಗಾಗಲೇ 15 ಬ್ಯಾಂಕುಗಳಿಂದ 10 ಲಕ್ಷ ರೈತರ ಬೆಳೆ ಸಾಲಗಳ ಮಾಹಿತಿ ಲಭ್ಯವಾಗಿದೆ. ನವೆಂಬರ್ 1 ರಿಂದ ಎಲ್ಲ ರೈತರಿಗೂ ಋಣಮುಕ್ತ ಪತ್ರ ರವಾನೆ ಮಾಡಲಾಗುವುದು ಎಂದು ಹೇಳಿದರು.
ರೈತರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಎಲ್ಲ ಅರ್ಹ ರೈತರಿಗೆ ಪ್ರಯೋಜನ ದೊರಕಿಸಲು ಸಾಲಗಳ ಮಾಹಿತಿಯನ್ನು ಭೂಮಿ ನಿರ್ವಹಣಾ ಕೋಶದ ನೆರವಿನಿಂದ ಅಭಿವೃದ್ಧಿಪಡಿಸಿದ ತಂತ್ರಾಂಶದ ಸಹಾಯದೊಂದಿಗೆ ಪರಿಶೀಲಿಸಲಾಗುತ್ತದೆ. ಸಹಕಾರಿ ಬ್ಯಾಂಕುಗಳ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ವಾಣಿಜ್ಯ ಬ್ಯಾಂಕುಗಳ ಅಧಿಕಾರಿಗಳಿಗೆ ಮುಂದಿನ ವಾರ ತರಬೇತಿ ನೀಡಲಾಗುವುದು. ಸಹಕಾರಿ ಬ್ಯಾಂಕುಗಳಲ್ಲಿ ಕಂದಾಯ ಇಲಾಖೆ ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಮಾಹಿತಿ ಅಪಲೋಡ್ ಮಾಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ. ಸರ್ಕಾರವು ಸಾಲ ಮನ್ನಾ ಯೋಜನೆಗೆ ಪ್ರತ್ಯೇಕ ಸಂಪನ್ಮೂಲ ಕ್ರೋಢೀಕರಣ ವ್ಯವಸ್ಥೆ ರೂಪಿಸಿದೆ. ಆಯವ್ಯಯದ ಇತರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇದರಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂದರು.
ರಾಷ್ಟ್ರಪತಿಗಳ ಅಂಗಳದಲ್ಲಿ ಋಣ ಪರಿಹಾರ ಕಾಯ್ದೆ 2018 : ಸಣ್ಣ ರೈತರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳು, ಬಡ ಜನರಿಗೆ ಬಡ್ಡಿ ವ್ಯಾಪಾರಿಗಳು, ಲೇವಾದೇವಿದಾರರ ಕಿರುಕುಳದಿಂದ ಮುಕ್ತಿ ದೊರಕಿಸಲು ಋಣ ಪರಿಹಾರ ಕಾಯ್ದೆ 2018ನ್ನು ರೂಪಿಸಲಾ ಗಿದ್ದು,ರಾಷ್ಟ್ರಪತಿಗಳ ಅಂಕಿತವನ್ನು ನಿರೀಕ್ಷಿಸಲಾಗುತ್ತಿದೆ. ಕಾಯ್ದೆಯ ರೂಪುರೇಷೆಗಳನ್ನು ರಾಷ್ಟ್ರಪತಿಗಳಿಗೆ ಹಾಗೂ ಗೃಹ ಸಚಿವರಿಗೆ ಖುದ್ದು ಭೇಟಿ ಮಾಡಿ ವಿವರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿಯವರು ಶ್ವೇತಪತ್ರ ಹೊರಡಿಸಿ ಎನ್ನುತ್ತಾರೆ. ಮೈತ್ರಿ ಸರ್ಕಾರ ಟೆಕಾಫ್ ಆಗಿಲ್ಲ, ಕೋಮಾದಲ್ಲಿದೆ ಎನ್ನುತ್ತಾರೆ. ಟೀಕೆ ಮಾಡುವುದು ಅವರ ಕರ್ತವ್ಯ. ನಿರೀಕ್ಷೆಗೂ ಹೆಚ್ಚು ಹಣವನ್ನು ನಾವು ನೀಡುತ್ತಿದ್ದೇವೆ ಎಂದು ಹೇಳಿದರು.
ಬಜೆಟ್‍ನಲ್ಲಿ ಘೋಷಣೆಯಾದ ಬಹುತೇಕ ಯೋಜನೆಗಳು ಆದೇಶವಾಗಿವೆ. ಕೆಲವೊಂದು ಯೋಜನಗೆಳು ಕಾರ್ಯಗತವಾಗುತ್ತಿವೆ. ರೈತರ ಸಾಲ ಮನ್ನಾ ಬಗ್ಗೆ ಸೂಕ್ತ ತೀರ್ಮಾನವಾಗಿದೆ. ಆರ್ಥಿಕ ಶಿಸ್ತು ಗಮನದಲ್ಲಿಟ್ಟುಕೊಂಡು ಸಾಲ ಮನ್ನಾ ಮಾಡಲಾಗಿದೆ. ಸರ್ಕಾರಿ ಶಾಲೆ ಸುಧಾರಿಸಲು ಸೂಕ ಕ್ರಮ ತೆಗದುಕೊಳ್ಳಲಾಗಿದೆ. ಇದಕ್ಕಾಗಿ 1,200 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಹೆಚ್ಚುವರಿಯಾಗಿ ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಕೆಲವೊಂದು ಇಲಾಖೆ ಹಣ ಕೇಳುತ್ತಿವೆ ಎಂದರು.
ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ 75,634 ಕೋಟಿ ರೂ.ಗಳಷ್ಟು ವಿವಿಧ ತೆರಿಗೆ ಸಂಗ್ರಹವಾಗಿದ್ದು, ಶೇ. 11.4 ರಷ್ಟು ಹೆಚ್ಚಳವಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಆಯವ್ಯಯ ವೆಚ್ಚ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ. 38 ರಷ್ಟಾಗಿದ್ದು, 2013-14 ರಲ್ಲಿ ಈ ಅವಧಿಯಲ್ಲಿ ಶೇ. 37 ರಷ್ಟು ವೆಚ್ಚವಾಗಿತ್ತು. ಮಾರ್ಚ್ ವೇಳೆಗೆ ನಿರೀಕ್ಷಿತ ಗುರಿ ತಲುಪುವ ಆಶಾಭಾವನೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬೆಂಗಳೂರು ಫೆರಿಪರಲ್ ರಸ್ತೆ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು. 12 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಫೆರಿಪರಲ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಈ ಯೋಜನೆಗೆ 6 ಸಾವಿರ ಕೋಟಿ ರೂ. ನೀಡಲಾಗುವುದು. ಎಲಿವೇಟಡ್ ರಸ್ತೆ ನಿರ್ಮಾಣಕ್ಕೂ ಸರ್ಕಾರ ಬದ್ಧವಾಗಿದೆ. ಸರ್ಕಾರದ ಖಜಾನೆ ಭರ್ತಿಯಾಗಿದೆ. ಈ ಬಗ್ಗೆ ಅನುಮಾನ ಬೇಡ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಎಲ್‍ಇಡಿ ಲೈಟ್ ಅಳವಡಿಕೆಗೆ ಕ್ರಮಕೈಗೊಂಡಿದ್ದು, ಬಿಬಿಎಂಪಿ ಇದಕ್ಕಾಗಿ 100 ಕೋಟಿ ರೂ. ಹಣ ಖರ್ಚು ಮಾಡುತ್ತಿದೆ. ಎಲ್‍ಇಡಿ ಲೈಟ್ ಅಳವಡಿಸುವುದಕ್ಕೆ 15 ಕೋಟಿ ರೂ. ವೆಚ್ಚವಾಗುತ್ತಿದ್ದು, ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

loading...