ಟಿಕೆಟ್ ಹಂಚಿಕೆ ವಿಚಾರ; ಬಿಜೆಪಿ ಕೋರ್ ಕಮಿಟಿ ಸಭೆ

0
0
loading...

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಸಂಬಂಧ ಇಂದು ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ,ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಯಲಿದ್ದು,ಅಭ್ಯರ್ಥಿಗಳ ಹೆಸರನ್ನು ಅಂತಿಮ ಗೊಳಿಸಲಾಗುತ್ತದೆ.ಯಡಿಯೂರಪ್ಪ ಪುತ್ರನ ಸ್ಪರ್ಧೆ ಮಾತ್ರ ಖಚಿತವಾಗಿದ್ದು,ಇನ್ನು 4ಕ್ಷೇತ್ರಗಳಲ್ಲಿನ ಗೊಂದಲ ಮುಂದುವರೆದಿರುವ ಕಾರಣ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಯಡಿಯೂರಪ್ಪ ಪುತ್ರ ಹಾಗೂ ಮಾಜಿ ಸಂಸದ ಬಿ.ವೈ. ರಾಘವೇಂದ್ರ ಸ್ಪರ್ಧೆ ಮಾಡುವುದು ಪಕ್ಕಾ ಆಗಿದೆ. ಈಗಾಗಲೇ ಈ ಸಂಬಂಧ ಯಡಿಯೂರಪ್ಪ ಘೋಷಣೆ ಮಾಡಿದ್ದು, ಜಿಲ್ಲೆಯ ಪ್ರಬಲ ನಾಯಕ ಕೆ.ಎಸ್.ಈಶ್ವರಪ್ಪ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಜೊತೆಗೆ ಆಕಾಂಕ್ಷಿಗಳು ಬೇರೆ ಯಾರೂ ಇಲ್ಲ. ಹಾಗಾಗಿ ಇಲ್ಲಿ ಅಭ್ಯರ್ಥಿ ಆಯ್ಕೆಗೆ ಯಾವುದೇ ಗೊಂದಲವಿಲ್ಲ. ಆದರೆ ಬಳ್ಳಾರಿ ಹಾಗೂ ಮಂಡ್ಯ ಲೋಕಸಭೆ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ.
ಕೇವಲ 4ತಿಂಗಳು ಅಧಿಕಾರ ನಡೆಸುವ ಸಲುವಾಗಿ ಕಣಕ್ಕಿಳಿಯಲು ಅಭ್ಯರ್ಥಿಗಳು ಒಪ್ಪುತ್ತಿಲ್ಲ. ಬಳ್ಳಾರಿಯಲ್ಲಿ ಮಾಜಿ ಸಂಸದೆ ಜೆ.ಶಾಂತಾ, ಸಣ್ಣ ಪಕ್ಕೀರಪ್ಪ ಹೆಸರು ಕೇಳಿ ಬಂದಿತ್ತು. ಈಗ ಶಾಂತಾ, ಸಣ್ಣ ಪಕ್ಕೀರಪ್ಪ ಇಬ್ಬರು ಕೂಡ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಶ್ರೀರಾಮುಲುಗೆ ಈ ಚುನಟವಣೆಯಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಂಡುಬರುವುದು ಪ್ರತಿಷ್ಠೆಯಾಗಿದೆ.ಹಾಗಾಗಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ರಾಜ್ಯಸಭಾ ಮಾಜಿ ಸದಸ್ಯ ಎನ್.ವೈ.ಹನುಮಂತಪ್ಪರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ.ಆದರೆ ಅನಾರೋಗ್ಯ ದಿಂದಾಗಿ ಕ್ಷೇತ್ರದಲ್ಲಿ ಕಣಕ್ಕಿಳಿದು,ಪ್ರಚಾರ ಮಾಡಲು ಅವರು ಹಿಂದೇಟು ಹಾಕುತ್ತಿದ್ದಾರೆ.ಹೀಗಾಗಿ ಬಳ್ಳಾರಿ ಅಭ್ಯರ್ಥಿ ಆಯ್ಕೆ ಕೂಡ ಗೊಂದಲ ಮಯವಾಗಿದೆ.
ಇನ್ನು ಮಂಡ್ಯದಲ್ಲಿ ಕಣಕ್ಕಿಳಿಯಲು ಮಾಜಿ ಡಿಸಿಎಂ ಆರ್.ಅಶೋಕ್ ಹಿಂದೇಟು ಹಾಕುತ್ತಿದ್ದಾರೆ.ವರಿಷ್ಠರ ಬಳಿ ತಾನು ಕಣಕ್ಕಿಳಿ ಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು,ರಾಜ್ಯ ರಾಜಕಾರಣದಲ್ಲಿಯೇ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.ಇದರಿಂದ ಪಕ್ಷದ ವಕ್ತಾರ ಅಶ್ವತ್ಥನಾರಾಯಣ ಗೌಡರನ್ನ ಕಣಕ್ಕಿಳಿಸಲು ಪಕ್ಷ ಚಿಂತನೆ ಇದೆ.ಆದರೆ ಮುಂಬರಲಿರುವ ಸಾರ್ವತ್ರಿಕ ಚುನಾವಣೆ ಯಲ್ಲಿಯೂ ತಮಗೆ ಟಿಕೆಟ್ ನೀಡುವುದಾದರೆ ಈಗ ಕಣಕ್ಕಿಳಿಯುವುದಾಗಿ ಅಶ್ವತ್ಥನಾರಾಯಣ ಷರತ್ತು ವಿಧಿಸಿದ್ದಾರೆ.
ಇದರ ಜೊತೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ತೆಕ್ಕೆಯಲ್ಲಿರುವ ಚೆಲುವರಾಯಸ್ವಾಮಿ, ಶಿವಲಿಂಗಯ್ಯ ಇಬ್ಬರಲ್ಲಿ ಒಬ್ಬರ ಮನವೊಲಿಸಿ ಬಿಜೆಪಿಗೆ ಸೆಳೆದು ಅವರನ್ನೇ ನಿಲ್ಲಿಸುವ ಕಸರತ್ತು ಮತ್ತೊಂದು ಕಡೆ ನಡೆಯುತ್ತಿದೆ.
ಇನ್ನು ರಾಮನಗರ,ಜಮಖಂಡಿ ವಿಧಾನಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯಲಿದೆ. ರಾಮನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದ್ದು, ಸಿ.ಪಿ.ಯೋಗೀಶ್ವರ್ ಜೊತೆ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಕೋರ್ ಕಮಿಟಿಯಲ್ಲಿ ವಿಷಯ ಪ್ರಸ್ತಾಪ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಜಮಖಂಡಿ ಕ್ಷೇತ್ರದಲ್ಲಿ ಗೊಂದಲ ಇನ್ನೂ ಬಗೆಹರಿದಿಲ್ಲ.ಪರಾಜಿತ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಹಾಗೂ ಕಳೆದ ಬಾರಿ ಬಂಡಾಯ ಅಭ್ಯರ್ಥಿ ಸಂಗಮೇಶ್ ನಿರಾಣಿ ನಡುವಿನ ಕಿತ್ತಾಟ ಮುಂದುವರೆದಿದೆ.ಇಬ್ಬರೂ ಟಿಕೆಟ್‍ಗೆ ಪೈಪೋಟಿ ಮುಂದುವರೆಸಿ ದ್ದಾರೆ.ಹಾಗಾಗಿ ಜಮಖಂಡಿಯಲ್ಲಿ ಯಾರಿಗೆ ಟಿಕೆಟ್ ಎಂಬ ಕುತೂಹಲ ಹಾಗೆಯೇ ಉಳಿದಿದೆ. ಬಂಡಾಯದಿಂದಾಗಿಯೇ ಅಲ್ಪ ಮತಗಳ ಅಂತರದಿಂದ ಸೋತ ಬಿಜೆಪಿಗೆ ಈ ಬಾರಿ ಒಮ್ಮತದ ಅಭ್ಯರ್ಥಿ ಆಯ್ಕೆಯ ಸವಾಲು ಎದುರಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

loading...