ದಸರಾಗೆ ಗೈರಾದ ಕಾಂಗ್ರೆಸ್ ಪಡೆ

0
1
loading...

ಬೆಂಗಳೂರು:ನಾಡಹಬ್ಬ ದಸರಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಎಲ್ಲಾ ಮುಖಂಡರು ಗೈರಾಗುವ ಮೂಲಕ ಮತ್ತೊಮ್ಮೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇಂದು ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬಕ್ಕೆ ಅಧಿಕೃತ ಚಾಲನೆ ದೊರೆತಿದ್ದು,ಈ ಕಾರ್ಯಕ್ರಮಕ್ಕೆ ಜೆಡಿಎಸ್‍ನ ಎಲ್ಲಾ ಮುಖಂಡರು ಹಾಗೂ ಮಂತ್ರಿಗಳು ಸೇರಿದಂತೆ ವೇದಿಕೆಯಲ್ಲಿ ಹಲವರು ಇದ್ದರು.ಈ ಕಾರ್ಯಕ್ರಮದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಕರ ಜೊತೆ ಹಾಜರಿದ್ದರು.

ಆದರೆ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ತನ್ವೀರ್ ಸೇಠ್, ಶಾಸಕ ಯತೀಂದ್ರ ಸಿದ್ದರಾ ಮಯ್ಯ,ಅನಿಲ್ ಚಿಕ್ಕಮಾದು, ಸಂಸದ ಧೃವನಾರಾಯಣ್, ಚಾಮರಾಜನಗರ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಗೈರಾಗಿದ್ದಾರೆ.

ಜೊತೆಗೆ ಸ್ಥಳೀಯ ಮಹಾನಗರ ಪಾಲಿಕೆಯ ಕಾಂಗ್ರೆಸ್‍ನ ಯಾವುದೇ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಆ ಮೂಲಕ ಕಾಂಗ್ರೆಸ್ ಪಕ್ಷ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ತನ್ನ ಅಸಮಾಧಾನ ಹೊರ ಹಾಕಿದೆ.ಇದಲ್ಲದೆ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸಹ ಗೈರಾಗಿದ್ದಾರೆ.

ಇನ್ನು ಉದ್ಘಾಟನಾ ಕಾರ್ಯಕ್ರಮದ ನಂತರ ಅಧ್ಯಕ್ಷೀಯ ಭಾಷಣ ಮೂಲಕ ಟಾಂಗ್ ನೀಡಿದ ಸಚಿವ ಜಿ.ಟಿ.ದೇವೇಗೌಡ, ನಾನೇ ಖುದ್ದಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೆ ಎಂದು ಹೇಳುವ ಮೂಲಕ ದಸರೆಯಿಂದ ಯಾರನ್ನೂ ದೂರ ಇಟ್ಟಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

loading...