ಮದ್ಯವ್ಯಸನ ತ್ಯಜಿಸಿ ಸುಂದರ ಬದುಕು ಕಟ್ಟಿಕೊಳ್ಳಿ: ಶ್ರೀಗಳು

0
6
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಸಮಾಜ ಮುಖಿ ಕೆಲಸಗಳನ್ನು ಮಾಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಾಡಿನುದ್ದಕ್ಕೂ ಮಹಿಳೆಯರ ನೋವು, ಕಣ್ಣೀರು ಒರೆಸುವಂತಹ ಕೆಲಸ ಮಾಡುತ್ತಾ, ಸಮಾಜವನ್ನು ಬದಲಾವಣೆ ಮಾಡುವ ಕಾರ್ಯಕ್ಕೆ ಮುಂದಾಗುತ್ತಿರುವುದು ನಿಜಕ್ಕೂ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಇವರ ಆಶ್ರಯದಲ್ಲಿ ಗುರುವಾರ ಯಲಬುರ್ಗಾದ ಸಂಗಣ್ಣ ಟೆಂಗಿನಕಾಯಿ ಇವರ ಮಿಲ್ ನಲ್ಲಿ ಗಾಂದಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧಿ ಸ್ಮøತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅನ್ನದಾನ, ವಿದ್ಯಾದಾನ, ಆರೋಗ್ಯ ದಾನ, ಅಭಯ ದಾನ ನೀಡುತ್ತಾ ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಾ ಶ್ರಮಿಸುತ್ತಿದೆ. ಬಡವರಿಗೆ ಆರ್ಥಿಕ ಸಹಾಯವನ್ನು ನೀಡುವ ಮೂಲಕ ಮಧ್ಯ ವ್ಯಸನರಿಗೆ ಒಂದು ಹೊಸ ಜೀವನವನ್ನು ರೂಪಿಸುವ ಮೂಲಕ ಹೊಸ ಜೀವನಕ್ಕೆ ದಾರಿ ಮಾಡಿಕೊಡುತ್ತಿರುವುದು ಸಂತಸದಾಯಕವಾಗಿದೆ. ಪ್ರತಿಯೊಬ್ಬರು ಕುಡಿತ ಚಟದಿಂದ ದೂರ ಇರುವ ಮೂಲಕ ತಮ್ಮ ಸುಂದರ ಜೀವನ ನಡೆಸುವಂತೆ ಸಲಹೆ ನೀಡಿದರು.
ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಹಿಂದುಳಿದ ಈ ಭಾಗದಲ್ಲಿ ಕ್ಷೇತ್ರದ ವತಿಯಿಂದ ಕೃಷಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಇನ್ನಿತರ ಸಮಾಜ ಮುಖಿ ಕೆಲಸಗಳಲ್ಲಿ ಸಂಸ್ಥೆ ತನ್ನನ್ನು ತಾನು ತೊಡಗಿಸಿಕೊಂಡು ಪ್ರಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಧರ್ಮಸ್ಥಳ ಮಂಜುನಾಥ ಸಂಸ್ಥೆಯು ಸಮಾಜದಲ್ಲಿ ಒಂದು ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದ್ದಲ್ಲದೆ, ಕುಡಿತಕ್ಕೆ ದಾಸರಾಗಿರುವರನ್ನು ಬಿಡಿಸಿ ಮಧ್ಯ ಸೇವನೆಯಿಂದ ಪಾನಮುಕ್ತರನ್ನಾಗಿ ಮಾಡಿದ್ದಾರೆ. ಬಡ ಕುಟುಂಬಗಳು ಮಧ್ಯೆ ಸೇವನೆಯಿಂದ ಮುಕ್ತರಾಗಿ ಸುಖ, ಶಾಂತಿ ಜೀವನ ನಡೆಸುತ್ತಿದ್ದಾರೆ ಎಂದರು. ಸ್ಥಳೀಯ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡರ ಸೇರಿದಂತೆ ಮತ್ತಿತರರು ಮಾತನಾಡಿದರು.
ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಶ್ರೀನಿವಾಸ ಗುಪ್ತಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮೊದಲು ವಿವಿಧ ವಾಧ್ಯ ಮೇಳದೊಂದಿಗೆ ಕುಂಭ ಹೊತ್ತ ಮಹಿಳೆಯರ ಮೆರವಣಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದ ಮೂಲಕ ಸಂಚರಿಸಿತು. ಪಪಂ ಸದಸ್ಯ ಡಾ. ನಂದಿತ ದಾನರೆಡ್ಡಿ, ವಿಜಯಲಕ್ಷ್ಮೀ ಬೇಲೇರಿ, ಜನ ಜಾಗೃತಿ ವೇದಿಕೆಯ ಸಂಗಣ್ಣ ಟೆಂಗಿನಕಾಯಿ, ಶರಣಪ್ಪ ದಾನಕೈ, ಶ್ರೀಕಾಂತ ಸಜ್ಜನ, ನಂದಕುಮಾರ ಇದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಎಚ್.ಎಲ್.ಮುರಳಿಧರ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ರಾಜೇಶ ವಂದಿಸಿದರು.

loading...