ಮಿನಿ ಸಮರಕ್ಕೆ ಮೂರು ಪಕ್ಷಗಳ ಸಿದ್ಧತೆ

0
1
loading...

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ 3 ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಇನ್ನೂ ಗೊಂದಲವಿದೆ.
ಬರುವ ನ.3ರಂದು ಶಿವಮೊಗ್ಗ,ಮಂಡ್ಯ, ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ, ರಾಮನಗರ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ.ನಾಮಪತ್ರ ಸಲ್ಲಿಕೆಗೆ ಇದೇ ತಿಂಗಳ 17 ಕಡೆಯ ದಿನವಾಗಿದ್ದು,ಇಂದು ಕೆಪಿಸಿಸಿ ಕಚೇರಿಯಲ್ಲಿ ಈ ಕುರಿತು ಸಭೆ ಆರಂಭಗೊಂಡಿ.
ಐದು ಕ್ಷೇತ್ರಗಳ ಪೈಕಿ ರಾಮನಗರ ವಿಧಾನಸಭೆ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡುವುದು ಪಕ್ಕಾ ಆಗಿದೆ.ಜಮಖಂಡಿಯಲ್ಲಿ ಸಿದ್ದು ನ್ಯಾಮಾಗೌಡ ಪುತ್ರ ಆನಂದ್‍ಗೆ ಟಿಕೆಟ್ ಕೊಡುವುದು ಪಕ್ಕಾ ಆಗಿದೆ.
ಲೋಕಸಭೆ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ,ಹೊಂದಾಣಿಕೆಯ ವಿಚಾರದಲ್ಲಿ ಸಮಸ್ಯೆ ಆಗಿದೆ. ಕೇವಲ 3-4 ತಿಂಗಳಿಗಾಗಿ ಸಂಸದರಾಗಲು ಹಾಗೂ ಅದಕ್ಕಾಗಿ ಸಾಕಷ್ಟು ವೆಚ್ಚ ಮಾಡಲು ಯಾರೂ ಮುಂದೆ ಬರುತ್ತಿಲ್ಲ.
ಅಲ್ಲದೇ ಲೋಕಸಭೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಘೋಷಿಸಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಇಷ್ಟು ಬೇಗ ಸತ್ವ ಪರೀಕ್ಷೆ ಎದುರಾಗಲಿದೆ ಎಂದು ನಿರೀಕ್ಷಿಸಿರಲಿಲ್ಲ.ಆದರೆ ಅನಿರೀಕ್ಷಿತವಾಗಿ ಘೋಷಿತವಾಗಿರುವ ಚುನಾವಣೆ ದಿನಾಂಕ ಮೈತ್ರಿ ಪಕ್ಷಗಳಲ್ಲಿ ಸಾಕಷ್ಟು ಗೊಂದಲ ಹುಟ್ಟಿಸಿದೆ.
ಪ್ರಾಥಮಿಕ ಮಾತುಕತೆ ಹಂತದಲ್ಲಿ ಬಳ್ಳಾರಿಯನ್ನು ತನ್ನ ಬಳಿ ಉಳಿಸಿಕೊಂಡು,ಮಂಡ್ಯವನ್ನು ಜೆಡಿಎಸ್‍ಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆಸಲಾಗಿದೆ.ಅಲ್ಲದೇ ಶಿವಮೊಗ್ಗದಲ್ಲಿ ಸೂಕ್ತ ಅಭ್ಯರ್ಥಿಯನ್ನು ಹುಡುಕುವ ಮಾತುಕತೆ ನಡೆದಿದೆ.
ಆದರೆ ಇಷ್ಟಕ್ಕೆ ಸರಿಯಾಗಿದ್ದರೆ ಸಮಸ್ಯೆ ಇರಲಿಲ್ಲ.ಶಿವಮೊಗ್ಗದಲ್ಲಿ ಆಯ್ಕೆ ದೊಡ್ಡ ಗೊಂದಲವಾಗಿದೆ.ಜತೆಗೆ ಮಂಡ್ಯದಲ್ಲಿ ಚೆಲುವ ರಾಯಸ್ವಾಮಿ ಹಾಗೂ ಇತರೆ ನಾಯಕರು ನಾವು ಕೂಡ ಸಮರ್ಥರಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯೇ ಕಣಕ್ಕಿಳಿಯಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಸದ್ಯ ಗೊಂದಲವನ್ನು ಸೃಷ್ಟಿಸಿದೆ.
ಬಳ್ಳಾರಿಯಿಂದ ಯಾರನ್ನು ಕಣಕ್ಕಿಳಿಸುವುದು,ಮತ್ತೆ ಹೇಗೆ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಚರ್ಚೆ ನಡೆದಿದೆ. ಶಿವ ಮೊಗ್ಗದಿಂದ ಜೆಡಿಎಸ್‍ನ ಸಂಭಾವ್ಯ ಅಭ್ಯರ್ಥಿಯಾಗಬೇಕಿದ್ದ ಮಧು ಬಂಗಾರಪ್ಪ ಹೇಳದೇ ಕೇಳದೇ ವಿದೇಶಕ್ಕೆ ಹಾರಿದ್ದಾರೆ. ವಾಪಸ್ ಬರುವ ದಿನಾಂಕ ತಿಳಿದಿಲ್ಲ.ಇನ್ನು ಗೀತಾ ಶಿವರಾಜ್‍ಕುಮಾರ್ ರಾಜಕೀಯಕ್ಕೆ ಬರಲ್ಲ ಎಂದು ಶಿವರಾಜ್‍ಕುಮಾರ್ ಹೇಳಿಯಾಗಿದೆ.ಇದರಿಂದ ಇಲ್ಲಿ ಜೆಡಿಎಸ್‍ಗೆ ಸಮರ್ಥ ಅಭ್ಯರ್ಥಿ ಇಲ್ಲ.ಹೀಗಾಗಿ ಕಾಂಗ್ರೆಸ್ ಪಾಲಾಗುವುದು ಬಹುತೇಕ ಖಚಿತ.
ಹೀಗಾಗಿ ಸದ್ಯ ಮಾಜಿ ಸಚಿವ ಕಿಮ್ಮನೆ ರತ್ನಾಕರ್‍ರ ಹೆಸರು ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.ಇದರ ಜತೆಗೆ ಮಂಜುನಾಥ್ ಭಂಡಾರಿ ಮತ್ತಿತರರ ಹೆಸರುಗಳೂ ಚಾಲ್ತಿಯಲ್ಲಿವೆ.ಹೆಚ್ಚಿನ ಒಲವು ಕಿಮ್ಮನೆ ಮೇಲಿದೆ.ಆದರೆ ಪಾಲ್ಗೊಳ್ಳುವ ಆಸಕ್ತಿ ಅವರಿಗೆ ಇಲ್ಲ ಎನ್ನಲಾಗುತ್ತಿದೆ.
ಇನ್ನು ಬಳ್ಳಾರಿಯಲ್ಲಿ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆ ಇದೆ. ಇಲ್ಲಿ ವಾಲ್ಮೀಕಿ ಸಮುದಾಯ ಶಕ್ತಿಯುತವಾಗಿರುವುದದಿಂದ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಹೆಸರು ಕೂಡ ಕೇಳಿಬರುತ್ತಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೂಡ ಕಣಕ್ಕಿಳಿಯುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆ ಎಂಬ ಗೊಂದಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

loading...