ವ್ಯಸನಮುಕ್ತ ಸಮಾಜ ರೂಪಿಸಲು ಎಲ್ಲರ ಸಹಕಾರ ಅಗತ್ಯ: ಈಶಪ್ಪ

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಸುಳಿಯಿಂದ ಪಾರಾಗಲು ಅನೇಕರು ದುಶ್ಚಟಗಳ ಬೆನ್ನುಬಿದ್ದು, ವ್ಯಸನಿಗಳಾಗುತ್ತಾರೆ. ಇದರಿಂದಾಗಿ ತಮ್ಮ ಮಾನಸಿಕ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ. ವ್ಯಸನಮುಕ್ತ ಸಮಾಜ ರೂಪಿಸಲು ಪ್ರತಿ ಕ್ಷೇತ್ರದ ತಜ್ಞರು ಕೈಜೋಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಅಭಿಪ್ರಾಯಪಟ್ಟರು.
ನಗರದ ಡಿಮ್ಯಾನ್ಸ್ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಬಹಳಷ್ಟು ಜನರು ಬದುಕಿನಲ್ಲಿ ಎದುರಾಗುವ ಸಮಸ್ಯೆಗಳ ನೆಪವೊಡ್ಡಿ, ಪರಿಹಾರ ಕಾಣದೆ ತಾತ್ಕಾಲಿಕ ಬಿಡುವಿಗಾಗಿ ಮದ್ಯಪಾನ, ಧೂಮ್ರಪಾನದಂತಹ ದುಶ್ಚಟಗಳಿಗೆ ಮೊರೆ ಹೋಗುತ್ತಾರೆ. ಇದರಿಂದ ಅವರ ಜೀವನವೇ ಹಾಳಾಗುತ್ತದೆ. ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿ ಕುಟುಂಬ ಮತ್ತು ಸಮಾಜದ ನೆಮ್ಮದಿಗೆ ಭಂಗ ತರುತ್ತಾರೆ ಎಂದರು. ಇಂದಿನ ಯುವಕರು ವ್ಯಸನಗಳಿಂದಾಗಿ ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ಅವರಿಗೆ ಉತ್ತಮ ಮಾರ್ಗದರ್ಶನ, ಆಪ್ತಸಮಾಲೋಚನೆಯ ಅಗತ್ಯವಿದೆ. ನಮ್ಮ ದೇಶದ ಸಂಸ್ಕøತಿ, ಸಂಸ್ಕಾರಗಳು ಯುವಕರ ವ್ಯಕ್ತಿತ್ವದಲ್ಲಿ ಮೂಡಿ ಬರುವಂತೆ ಜಾಗೃತಿ ವಹಿಸಬೇಕು. ಸದಾಕಾಲ ಸಕಾರಾತ್ಮಕ ಚಿಂತನೆ ಮಾಡುವಂತೆ ಯುವ ಸಮೂಹವನ್ನು ಬೆಳೆಸಬೇಕಿದೆ. ವ್ಯಕ್ತಿಗಳ ಮಾನಸಿಕ ಅಸ್ವಸ್ಥತೆ, ಖಿನ್ನತೆ, ಅನಾರೋಗ್ಯಗಳಿಂದಾಗಿ ಅಭಿವೃದ್ಧಿಯೂ ಕುಂಠಿತವಾಗುತ್ತದೆ. ಇದರಿಂದಾಗಿ ಸಮಯ, ಸಂಪನ್ಮೂಲಗಳೂ ವ್ಯರ್ಥವಾಗುತ್ತವೆ. ಆದ್ದರಿಂದ ಶಾಲಾ ಹಂತದಿಂದಲೇ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಸದೃಢತೆ ಬೆಳೆದು ಬರುವಂತೆ ನೀತಿಪಾಠ ರೂಢಿಸಬೇಕು ಎಂದರು. ಡಿಮ್ಯಾನ್ಸ್ ನಿರ್ದೇಶಕ ಡಾ.ಮಹೇಶ ದೇಸಾಯಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಗಿರಿಧರ ಕುಕನೂರ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಧಾರವಾಡ ಘಟಕದ ಅಧ್ಯಕ್ಷ ಡಾ.ವಿ.ಡಿ. ಕರ್ಪೂರಮಠ, ಮಾನಸಿಕ ಆರೋಗ್ಯ ಜಿಲ್ಲಾ ಕಾರ್ಯಾಕ್ರಮ ಅಧಿಕಾರಿ ಡಾ. ಶಶಿ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಮಾನಸಿಕ ಆರೋಗ್ಯ ತಜ್ಞ ಡಾ.ಶಿವಶಂಕರ ಪೋಳ ವೇದಿಕೆಯಲ್ಲಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ ಸ್ವಾಗತಿಸಿ, ಪ್ರಾಸ್ತಾವಿಕಮಾತನಾಡಿದರು. ಡಾ. ಶಶಿ ಪಾಟೀಲ ವಂದಿಸಿದರು.ವಿಶ್ವಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧಾವಿಜೇತರಿಗೆ ಜಿಲ್ಲಾ ನ್ಯಾಯಾಧೀಶರು ಬಹುಮಾನ ವಿತರಿಸಿದರು.

loading...