ಸಿಬ್ಬಂದಿಗಳಿಲ್ಲದ ತಹಶೀಲ್ದಾರ ಕಚೇರಿ

0
0
loading...

ರಬಕವಿ-ಬನಹಟ್ಟಿ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೊಸ ಯೋಜನೆಗಳು ರೂಪಿತಗೊಳ್ಳುವಲ್ಲಿ ಯಶಸ್ಸು ಕಾಣುತ್ತಿಲ್ಲವಾದರೂ ಹಳೆಯ ಯೋಜನೆಗಳಿಗಾದರೂ ಸ್ವಲ್ಪಮಟ್ಟಿಗಾದರೂ ವಿಶೇಷ ಅನುದಾನಗಳೊಂದಿಗೆ ಕಾರ್ಯಕ್ರಮಗಳಿಗೆ ಜೀವ ತುಂಬುವ ಕಾರ್ಯವನ್ನಾದರೂ ಮಾಡಬೇಕಿದೆ.
ನೂತನ ತಾಲೂಕಾ ಕೇಂದ್ರವಾಗಿರುವ ರಬಕವಿ-ಬನಹಟ್ಟಿಯಲ್ಲಿ ತರಾತುರಿಯಲ್ಲಿ ತಹಶೀಲ್ದಾರ ಕಚೇರಿ ಸೇರಿದಂತೆ 30 ಕ್ಕೂ ಅಧಿಕ ತಾಲೂಕಾ ಮಟ್ಟದ ಕಚೇರಿಗಳು ತಲೆ ಎತ್ತಿ ನಿಂತಿವೆಯಷ್ಟೆ. ಆದರೆ ಇವುಗಳಿಗೆ ಪೂರಕವಾಗಿ ಸಿಬ್ಬಂದಿಗಳು, ಅಧಿಕಾರಿಗಳು ಇಲ್ಲದ ಕಾರಣ ಜನತೆಯ ಸೇವೆಗೆ ಗಗನಕುಸುಮವಾಗಿವೆ. ಸದ್ಯ ತಹಶೀಲ್ದಾರ ಕಚೇರಿಯು ಸಿಬ್ಬಂದಿಗಳಿಲ್ಲದೆ ಅನಾಥವಾಗಿದ್ದು, ಓರ್ವ ಶಿರಸ್ತೆದಾರ, ನಾಲ್ವರು ಪ್ರಥಮ ದರ್ಜೆ ಹಾಗು ಓರ್ವ ದ್ವಿತೀಯ ದರ್ಜೆ ಸಹಾಯಕ ಸೇರಿ ಕೇವಲ 6 ಜನ ಮಾತ್ರ ಸೇವೆ ಒದಗಿಸುವಲ್ಲಿ ಕಾರಣರಾಗಿದ್ದಾರೆ. ಕನಿಷ್ಠ 30 ಕ್ಕೂ ಅಧಿಕ ಸಿಬ್ಬಂದಿಗಳಿಂದ ಕೂಡಿರುವ ಈ ಕಚೇರಿಯಿಂದ ಯಾವದೇ ಕಾರ್ಯ ನಿರೀಕ್ಷೆಯಿಂದ ಕೂಡಿಲ್ಲವೆಂಬುದು ತಿಳಿದು ಬರುತ್ತದೆ. ಆಗಮಿಸುವ ಎಲ್ಲ ಫಲಾನುಭವಿಗಳು ಕೇವಲ ಆವಕ-ಜಾವಕ ಸ್ಥಳಕ್ಕೆ ದಾವಿಸುವ ಮೂಲಕ ಯಾವದೇ ಕಾರ್ಯಗಳ ಕನಸುಗಳು ನನಸಾಗಿಸುವಲ್ಲಿ ಕಚೇರಿ ವಿಫಲಗೊಂಡಿದೆ. ತಮ್ಮ ಕೆಲಸಕ್ಕೆಂದು ಅಲೆದಾಡುವ ಫಲಾನುಭವಿಗಳು ತಹಶೀಲ್ದಾರ ಕಚೇರಿಗೆ ಹಿಡಿಶಾಪ ಹಾಕಿ ಮರಳುತ್ತಿರುವದು ಸರ್ವೆ ಸಾಮಾನ್ಯವಾಗಿದೆ.
ವೇತನವಿಲ್ಲ: ತಹಶೀಲ್ದಾರ ಖಜಾನೆ ಸಂಖ್ಯೆ ಇನ್ನೂ ದೊರಕದ ಕಾರಣ ಇಲ್ಲಿ ಕಾರ್ಯ ಸಲ್ಲಿಸುತ್ತಿರುವ ಸಿಬ್ಬಂದಿ ಹಾಗು ಅಧಿಕಾರಿಗಳಿಗೆ ಕಳೆದ ನಾಲ್ಕೈದು ತಿಂಗಳಿಂದ ವೇತನ ದೊರಕುತ್ತಿಲ್ಲ. ಇವೆಲ್ಲದರ ಮಧ್ಯ ಸಿಬ್ಬಂದಿಗಳ ಸೇವೆ ಸಲ್ಲಿಕೆ ಅಭಿನಂದನೀಯ. ಮುಧೋಳ ಹಾಗು ಜಮಖಂಡಿ ತಾಲೂಕಿನ ತಹಶೀಲ್ದಾರ ಕಚೇರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ರಬಕವಿ-ಬನಹಟ್ಟಿ ನೂತನ ತಾಲೂಕಿಗೆ ಸಂಬಂಧ ವರ್ಗಾಯಿಸಲಾಗಿದ್ದು, ಆದರೆ ವಿಭಜಿಸಿದ ಕಾಗದ ಪತ್ರಗಳು ಆಯಾ ತಾಲೂಕುಗಳಲ್ಲಿಯೇ ಇದ್ದು, ಈಗಲೂ ರಬಕವಿ-ಬನಹಟ್ಟಿ ಹೊಸ ತಾಲೂಕಿನ ಫಲಾನುಭವಿಗಳಿಗೆ ಮುಧೋಳ ಹಾಗು ಜಮಖಂಡಿ ತಾಲೂಕು ಅನಿವಾರ್ಯವಾಗಿದೆ.
ಕೂಡಲೇ ಸರ್ಕಾರ ಎಚ್ಚೆತ್ತು, ನೂತನ ತಾಲೂಕಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯದ ಎಲ್ಲ ಆಡಳಿತಾತ್ಮಕ ತಾಲೂಕಾ ಕಚೇರಿಗಳನ್ನು ಶೀಘ್ರವೇ ಪೂರೈಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುವದೆಂದು ನೇಕಾರ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

loading...